ಯೋಗರಾಜ್ ಭಟ್ ನಿರ್ದೇಶನದ “ಗರಡಿ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ನಟ ಹಾಗೂ ಶಾಸಕ ಬಿ.ಸಿ.ಪಾಟೀಲ್ ಅವರ ಪತ್ನಿ ವನಜಾ ಪಾಟೀಲ್ ಹಾಗೂ ಪುತ್ರಿ ಸೃಷ್ಟಿ ಪಾಟೀಲ್ ನಿರ್ಮಾಣದ ಈ ಚಿತ್ರದಲ್ಲಿ ಬಿ.ಸಿ.ಪಾಟೀಲ್ ಪ್ರಮುಖ ಪಾತ್ರ ಮಾಡಿದ್ದಾರೆ.
“ಸುಮಾರು ಎಪ್ಪತ್ತು ದಿನಗಳ ಚಿತ್ರೀಕರಣದ ನಂತರ ಗರಡಿ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಜಿ.ವಿ.ಅಯ್ಯರ್ ಸ್ಟುಡಿಯೋದಲ್ಲಿ ನಿರ್ಮಿಸಲಾಗಿದ್ದ ಗರಡಿ ಮನೆ ಸೆಟ್‌ನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಈ ಹಂತದ ವಿಶೇಷವೆಂದರೆ, ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಅವರು ನಾಯಕನ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಶಸ್ ಸೂರ್ಯ, ಸೋನಾಲ್ ಮೊಂತೆರೊ, ಬಿ.ಸಿ ಪಾಟೀಲ್, ರವಿಶಂಕರ್, ಸುಜಯ್ ಬೇಲೂರು, ರಘು, ಧರ್ಮಣ್ಣ, ಚೆಲುವರಾಜ್, ಪೃಥ್ವಿ ಮುಂತಾದವರು ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಗರಡಿ ಹಳೇ ಮೈಸೂರು ಭಾಗದಲ್ಲಿ ನಡೆಯುವ ಕಥೆ. ದೇಸಿ ಕ್ರೀಡೆಗೆ ಒತ್ತು ನೀಡುವ ಸಲುವಾಗಿ ಈ ವಿಭಿನ್ನ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದೇವೆ’ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದರು ಯೋಗರಾಜ್ ಭಟ್.
ಇದೇ ವೇಳೆ ಮಾತನಾಡಿದ ನಟ, ಸಚಿವ ಬಿ.ಸಿ.ಪಾಟೀಲ್, “ಗರಡಿ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರ ಚೆನ್ನಾಗಿ ಬಂದಿದೆ. ಚಿತ್ರದ ಆಡಿಯೋ ಹಕ್ಕು ಸರಿಗಮಪ ಸಂಸ್ಥೆಗೆ ಒಂದು ಕೋಟಿಗೆ ಮಾರಾಟವಾಗಿದೆ. ಡಬ್ಬಿಂಗ್, ರೀಮೇಕ್ ರೈಟ್ಸ್‌ಗೂ ಸಾಕಷ್ಟು ಬೇಡಿಕೆ ಇದೆ. ನಮ್ಮ ಸಂಸ್ಥೆಯ ನಿರ್ಮಾಣದ ಹದಿನಾರನೇ ಚಿತ್ರ. ಫೆಬ್ರವರಿ ಕೊನೆ ಅಥವಾ ಮಾರ್ಚ್ ಮೊದಲ ವಾರದಲ್ಲಿ ಚಿತ್ರ ತೆರೆಗೆ ಬರಲಿದೆ’ ಎಂದರು.
ಯಶಸ್ ಸೂರ್ಯ ಈ ಚಿತ್ರದ ನಾಯಕ. “ನಾನು ಪೈಲ್ವಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೆ. ಅನುಭವಿ ಕಲಾವಿದರೊಂದಿಗೆ ನಟಿಸಿರುವ ಖುಷಿಯಿದೆ’ ಎಂದರು ನಾಯಕ ಯಶಸ್ ಸೂರ್ಯ.ನಾಯಕಿ ಸೋನಾಲ್ ಮೊಂತೆರೊ ಸಹ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.
ನಟ ರವಿಶಂಕರ್ ಮಾತನಾಡಿ, “ಈ ಚಿತ್ರದಲ್ಲಿ ಅಭಿನಯಿಸಿರುವುದು ಖುಷಿಯಾಗಿದೆ. ಯೋಗರಾಜ್ ಭಟ್ ಹಾಗೂ ಬಿ.ಸಿ.ಪಾಟೀಲ್ ಅವರ ಜೊತೆ ಇದು ನನ್ನ ಮೊದಲ ಚಿತ್ರ’ ಎಂದರು. ನಟ ಸುಜಯ್ ಬೇಲೂರು, ಕಲಾವಿದರಾದ ರಘು, ಧರ್ಮಣ್ಣ, ಚೆಲುವರಾಜ್, ಪೃಥ್ವಿ ಹಾಗೂ ಕಥೆ ಬರೆದಿರುವ ವಿಕಾಸ್ ಗರಡಿ ಚಿತ್ರದ ಕುರಿತು ಮಾತನಾಡಿದರು.
ನಿರ್ಮಾಪಕಿ ಸೃಷ್ಟಿ ಪಾಟೀಲ್ ಕೂಡಾ ಸಿನಿಮಾದ ಅನುಭವ ಹಂಚಿಕೊಂಡರು.