Advertisement

ರಾಜ್ಯದಲ್ಲಿ ಕೃಷಿ ಚಟುವಟಿಕೆಗೆ ಇಲ್ಲ ಅಡ್ಡಿ : ಸಚಿವ ಬಿ.ಸಿ. ಪಾಟೀಲ್‌

12:27 AM Jun 02, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಲಾಕ್‌ಡೌನ್‌ ಜಾರಿ ಯಲ್ಲಿದ್ದರೂ ಕೃಷಿ ಚಟುವಟಿಕೆಗಳು ನಿರಂತರ ನಡೆಯುತ್ತಿ ರುವುದರಿಂದ ಈ ಸಂದರ್ಭದಲ್ಲಿ ಕೃಷಿ ಇಲಾಖೆ ರೈತರ ಅನು ಕೂಲಕ್ಕಾಗಿ ಕೈಗೊಂಡ ಕ್ರಮಗಳು, ಬೀಜ, ಗೊಬ್ಬರ ಒದಗಿ ಸುವುದು, ಗ್ರಾಮೀಣ ಭಾಗದಲ್ಲಿ ರೈತರ ಉತ್ಪನ್ನ ಮಾರಾಟಕ್ಕೆ ಮಾಡಿರುವ ಹೊಸ ವ್ಯವಸ್ಥೆಗಳ ಬಗ್ಗೆ ಕೃಷಿ ಸಚಿವ ಬಿ.ಸಿ. ಪಾಟೀಲ್‌ ಉದಯವಾಣಿಯೊಂದಿಗೆ ಮಾತನಾಡಿದ್ದಾರೆ.

Advertisement

– ನಿಮ್ಮ ಇಲಾಖೆಯಿಂದ ರೈತರಿಗೆ ಯಾವ ರೀತಿ ಸಹಾಯ ಮಾಡುತ್ತಿದ್ದೀರಿ?
ಲಾಕ್‌ಡೌನ್‌ ಜಾರಿಯಲ್ಲಿದ್ದರೂ ರೈತರು ಬೆಳಗ್ಗೆ 6ರಿಂದ 10 ರವರೆಗೆ ಮಾರುಕಟ್ಟೆಗೆ ಹಣ್ಣು ತರಕಾರಿ ಮಾರಾಟ ಮಾಡಲು ಯಾವುದೇ ತೊಂದರೆ ಇಲ್ಲ. ಕೃಷಿ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಲು ಯಾವುದೇ ಅಡ್ಡಿಯಿಲ್ಲ. ಗೊಬ್ಬರ ದಾಸ್ತಾನು ಹಾಗೂ ಬಿತ್ತನೆ ಬೀಜ ಪಡೆದುಕೊಳ್ಳಲು ರೈತರಿಗೆ ನಿರ್ಬಂಧ ಇಲ್ಲ. ಬಿತ್ತನೆ ಕಾರ್ಯ ಸರಾಗವಾಗಿ ನಡೆಯುತ್ತಿದೆ.

– ರೈತರಿಗೆ ವಾರ್‌ ರೂಂ ಮಾಡಿದ್ದೀರಿ, ಇದರಿಂದ ರೈತರಿಗೆ ಅನುಕೂಲವಾಗುತ್ತಿದೆಯಾ?
ಕೃಷಿ ವಾರ್‌ ರೂಂ ಮೂಲಕ ರೈತರಿಗೆ ಏನಾದರೂ ಸಮಸ್ಯೆ ಇದ್ದರೆ, ಅವರಿಗೆ ಪರಿಹಾರ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಬೀಜ ಮತ್ತು ಗೊಬ್ಬರ ಖರೀದಿ ಮಾಡಲು ಗ್ರೀನ್‌ ಪಾಸ್‌ ಅವಕಾಶ ನೀಡಲಾಗಿದೆ. ನಾಲ್ಕು ವಿಶ್ವ ವಿದ್ಯಾನಿಲಯಗಳಲ್ಲಿ ಕಾಲ್‌ಸೆಂಟರ್‌ ಮಾಡಿ, ವಿವಿಗಳ ಪ್ರಾಧ್ಯಾಪಕರು ಸೂಕ್ತ ನಿರ್ದೇಶನ ಹಾಗೂ ಸಲಹೆ ನೀಡುತ್ತಿದ್ದಾರೆ.

– ರೈತರು ಬೆಳೆದ ತರಕಾರಿ, ಹಣ್ಣು ಗ್ರಾಹಕರಿಗೆ ತಲುಪಿಸಲು ಏನು ವ್ಯವಸ್ಥೆ ಮಾಡಿದ್ದೀರಿ?
ತೋಟಗಾರಿಕೆ ಇಲಾಖೆ ಹಣ್ಣು ಮತ್ತು ತರಕಾರಿಗಳನ್ನು ಹಾಪ್‌ಕಾಮ್ಸ್‌ ಮೂಲಕ ಮಾರಾಟಕ್ಕೆ ವ್ಯವಸ್ಥೆ ಮಾಡಿದೆ. ಕಳೆದ ಬಾರಿಯಂತೆ ಈ ವರ್ಷ ಪೂರ್ಣ ಪ್ರಮಾಣದ ಲಾಕ್‌ಡೌನ್‌ ಇಲ್ಲ. ಬೆಳಗ್ಗೆ 10ರವರೆಗೆ ಮಾರಾಟಕ್ಕೆ ಅವಕಾಶ ಇದೆ. ಅದರ ಜತೆಗೆ ಹೂವು, ಹಣ್ಣು, ತರಕಾರಿ ಬೆಳೆದವರಿಗೆ ಪ್ರತೀ ಹೆಕ್ಟೇರ್‌ಗೆ 10 ಸಾವಿರ ರೂ. ಪರಿಹಾರವನ್ನು ಮುಖ್ಯಮಂತ್ರಿ ಘೋಷಣೆ ಮಾಡಿದ್ದಾರೆ.

– ನಗರ ಪ್ರದೇಶದಿಂದ ಬಂದಿರುವವರಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ವಿಶೇಷ ಯೋಜನೆ ಘೋಷಣೆ ಮಾಡಿದ್ದೀರಾ ?
ಹಳ್ಳಿಗಳಿಗೆ ವಾಪಸ್‌ ಹೋದವರು ಬಹುತೇಕರು ಇದುವರೆಗೂ ಪಾಳು ಬಿಟ್ಟಿದ್ದ ಜಮೀನು ಸಾಗುವಳಿ ಮಾಡುತ್ತಿದ್ದಾರೆ. ಇದರಿಂದ ಕಳೆದ ವರ್ಷ ರಾಜ್ಯದ ಇತಿಹಾಸದಲ್ಲಿಯೇ 153.08 ಲಕ್ಷ ಮೆಟ್ರಿಕ್‌ ಟನ್‌ ಆಹಾರ ಉತ್ಪಾದನೆಯಾಗಿದೆ. ಇದರಿಂದ ರೈತರಿಗೆ ಕಾರ್ಮಿಕರ ಸಮಸ್ಯೆ ಇಲ್ಲದಂತಾಗಿದೆ.

Advertisement

– ಗ್ರಾಮೀಣ ಪ್ರದೇಶದಲ್ಲಿ ಅಗ್ರಿ ಸ್ಟಾರ್ಟ್‌ ಅಪ್‌ ಮಾಡಲು ಏನಾದರೂ ಯೋಜನೆ ಮಾಡಿದ್ದೀರಾ ?
ಕೃಷಿ ಇಲಾಖೆಯಲ್ಲಿ ಗ್ರಾಮೀಣ ಭಾಗದಲ್ಲಿ ಎಫ್ಪಿಒ (ಕೃಷಿ ಉತ್ಪಾದಕ ಸಂಘಗಳು) ಇವೆ. ಆತ್ಮನಿರ್ಭರ ಯೋಜನೆಯಲ್ಲಿ ಕೇಂದ್ರ ಸರಕಾರ 10 ಸಾವಿರ ಕೋಟಿ ರೂ. ಪ್ಯಾಕೇಜ್‌ ಘೋಷಣೆ ಮಾಡಿದ್ದಾರೆ. 70 ಲಕ್ಷ ರೂ. ವರೆಗೂ ಸಾಲ ಪಡೆದು ಫ‌ುಡ್‌ ಪ್ರೊಸೆಸಿಂಗ್‌ ಕಂಪೆನಿಗಳನ್ನು ತೆರೆಯಲು ಅವಕಾಶವಿದೆ. ಅವರಿಗೆ ಶೇ.35 ರಿಯಾಯಿತಿ ನೀಡಲಾಗುತ್ತಿದೆ. ಯಾವುದೇ ರೈತರು ಎಫ್ಪಿಒ ಆರಂಭಿಸಬಹುದು.

– ಕೃಷಿ ಇಲಾಖೆ ಸಿಬ್ಬಂದಿಯನ್ನು ಕೊರೊನಾ ವಾರಿಯರ್ಸ್‌ ಎಂದು ಪರಿಗಣಿಸಲು ಏನು ಕ್ರಮ ಕೈಗೊಂಡಿದ್ದೀರಾ ?
ಈ ವರ್ಷ 500 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 9 ಜನ ಸಾವಿಗೀಡಾಗಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳನ್ನು ಕೊರೊನಾ ವಾರಿಯರ್ಸ್‌ ಎಂದು ಪರಿಗಣಿಸಲು ಸಿಎಂಗೆ ಮನವಿ ಮಾಡಿದ್ದೇನೆ.

Advertisement

Udayavani is now on Telegram. Click here to join our channel and stay updated with the latest news.

Next