Advertisement

ಹಿಜಾಬ್‌ಗಾಗಿ ಪರೀಕ್ಷೆ ಬಹಿಷ್ಕರಿಸಿದರೆ ಮತ್ತೆ ಬರೆಯಲು ಅವಕಾಶವಿಲ್ಲ : ಬಿ.ಸಿ.ನಾಗೇಶ್ ಸೂಚನೆ

08:50 PM Mar 27, 2022 | Team Udayavani |

8.74 ಲಕ್ಷ ವಿದ್ಯಾರ್ಥಿಗಳಿಗೆ 3444 ಪರೀಕ್ಷೆ ಕೇಂದ್ರ ಸ್ಥಾಪನೆ
ಬಾಗಲಕೋಟೆ : ರಾಜ್ಯಾದ್ಯಂತ ಮಾ.28ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು, ಸುಮಾರು 8.74 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪ್ರತಿಯೊಬ್ಬರಿಗೂ ಸಮವಸ್ತ್ರ ಕಡ್ಡಾಯಗೊಳಿಸಲಾಗಿದೆ. ಹೈಕೋರ್ಟ್‌ ನಿರ್ದೇಶನದಂತೆ ಎಲ್ಲರೂ ಸಮವಸ್ತ್ರದೊಂದಿಗೆ ಆಗಮಿಸಿ ಪರೀಕ್ಷೆ ಬರೆಯಬೇಕು. ಒಂದು ವೇಳೆ ಯಾರಾದರೂ ಬಹಿಷ್ಕಾರ ಮಾಡಿದರೆ ಅಂತವರಿಗಾಗಿ ಪ್ರತ್ಯೇಕ ಪರೀಕ್ಷೆ ನಡೆಸಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ ಸ್ಪಷ್ಟಪಡಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮವಸ್ತ್ರ ವಿಷಯದಲ್ಲಿ ಹೈಕೋರ್ಟ್‌ ಮೂರು ವಿಷಯ ಸ್ಪಷ್ಟವಾಗಿ ಹೇಳಿದೆ. ಇದನ್ನು ಯಾರೂ ಉಲ್ಲಂಘಿಸುವಂತಿಲ್ಲ. ಅಲ್ಲದೇ ಮಕ್ಕಳ ಶೈಕ್ಷಣಿಕ ಭವಿಷ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಒಂದು ಮುಖ್ಯ ಘಟ್ಟ. ಎಲ್ಲ ವಿದ್ಯಾರ್ಥಿಗಳೂ ಸಮವಸ್ತ್ರದೊಂದಿಗೆ ಪರೀಕ್ಷೆ ಎದುರಿಸಲಿದ್ದಾರೆ. ಎಲ್ಲೋ 100 ವಿದ್ಯಾರ್ಥಿಗಳು ಮಾತ್ರ ವಿರೋಧಿಸಿದ್ದು, ಅವರೂ ಪರೀಕ್ಷೆ ವಿಷಯದಲ್ಲಿ ವಿರೋಧ ಮಾಡಲ್ಲ ಎಂಬ ವಿಶ್ವಾಸವಿದೆ. ರಾಜ್ಯದಲ್ಲಿ 8.74 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಅವರಿಗಾಗಿ 3444 ಪರೀಕ್ಷೆ ಕೇಂದ್ರ ಸ್ಥಾಪಿಸಲಾಗಿದೆ. 48 ಸಾವಿರ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಎರಡು ವರ್ಷ ಕೋವಿಡ್‌ ಸಮಸ್ಯೆ ಎದುರಿಸಿದ್ದು, ಈ ಬಾರಿಯೂ ಮುಂಜಾಗ್ರತಾ ಕ್ರಮವಾಗಿ ಕೊಠಡಿಗಳನ್ನು ಸಾನಿಟೈಜೇಶನ್‌ ಮಾಡಲಾಗಿದೆ. ಎಲ್ಲ ಸುರಕ್ಷತೆಗಳೊಂದಿಗೆ ಪರೀಕ್ಷೆ ಶಿಸ್ತುಬದ್ಧವಾಗಿ ನಡೆಯಲಿವೆ. ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದರು.

ಹಿಜಾಬ್‌ ವಿಷಯದಲ್ಲಿ ಶಿಕ್ಷಕರು, ಪರೀಕ್ಷೆ ಅಧೀಕ್ಷಕರು ಸಹಿತ ಅಧಿಕಾರಿಗಳಿಗೆ ಯಾವುದೇ ರೀತಿಯ ಕಿರಿಕಿರಿ ಮಾಡಿದರೆ ಅದನ್ನು ಎದುರಿಸಲು ಪೊಲೀಸ್‌ ಇಲಾಖೆ ಸಿದ್ಧವಿದೆ. ಪರೀಕ್ಷೆ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಇರಲಿದೆ. ಹಿಜಾಬ್‌ ಧರಿಸುವವರು, ಶಾಲಾ ಆವರಣದವರೆಗೆ ಮಾತ್ರ ಹಾಕಿಕೊಂಡು ಬರಬಹುದು. ಪರೀಕ್ಷೆ ಕೊಠಡಿಯೊಳಗೆ ಸಮವಸ್ತ್ರದಲ್ಲೇ ಇರಬೇಕು. ಎಸ್ಸೆಸ್ಸೆಲ್ಸಿ ಮಕ್ಕಳು ಯಾವುದೇ ಭಯವಿಲ್ಲದೇ ಪರೀಕ್ಷೆ ಎದುರಿಸಬೇಕು.

ಇದನ್ನೂ ಓದಿ : ತಂದೆ ಮಕ್ಕಳ ನಡುವಿನ ಜಗಳ, ತಂದೆ ಸಾವಿನಲ್ಲಿ ಅಂತ್ಯ : ಕಿರಿಯ ಮಗಳು ಪೋಲೀಸರ ವಶಕ್ಕೆ

ಕೊರೊನಾ ಹಿನ್ನೆಲೆಯಲ್ಲಿ ಶೇ.80 ಪಠ್ಯಕ್ರಮ ಪೂರ್ಣಗೊಂಡಿದ್ದು, ಅದೇ ಪಠ್ಯಕ್ರಮ ಅನುಸಾರವಾಗಿ ಪ್ರಶ್ನೆ ಪತ್ರಿಕೆ ಇರಲಿವೆ. ಈ ಬಾರಿ ಆಯ್ಕೆ ಪ್ರಶ್ನೆಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಹೀಗಾಗಿ ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಸಮವಸ್ತ್ರ ನಿಗದಿಯಾಗಿದೆ. ಆಯಾ ಖಾಸಗಿ ಶಾಲೆಗಳಲ್ಲಿ ನಿಗದಿಪಡಿಸಿದ ಸಮವಸ್ತ್ರ ಹಾಕಿಕೊಂಡು ವಿದ್ಯಾರ್ಥಿಗಳು ಪರೀಕ್ಷೆಗೆ ಬರಬೇಕು. ಬಾಹ್ಯ ಮತ್ತು ರಿಪಿಟರ್ ವಿದ್ಯಾರ್ಥಿಗಳಿಗೆ ಇದು ಅನ್ವಯಿಸಲ್ಲ. ರೆಗ್ಯೂಲರ್‌ ವಿದ್ಯಾರ್ಥಿಗಳಿಗೆ ಸಮವಸ್ತ್ರ ಸಂಹಿತೆ ಅನ್ವಯಿಸಲಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next