ಬೆಂಗಳೂರು: ನಗರದಲ್ಲಿ ವಾಣಿಜ್ಯ ಜಾಹೀರಾತು ಪ್ರದರ್ಶನ ನಿಷೇಧಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ರೂಪಿಸಿದ್ದ “ಹೊರಾಂಗಣ ಸೈನೇಜ್ ಮತ್ತು ಸಾರ್ವಜನಿಕ ಸಂದೇಶ ನೀತಿ ಹಾಗೂ ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ-2018′ ಅನ್ನು ಇನ್ನು ಮೂರು ತಿಂಗಳಲ್ಲಿ ಅನುಷ್ಠಾನಕ್ಕೆ ತರುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.
ನಗರದಲ್ಲಿ ಎಲ್ಲೆಂದರಲ್ಲಿ ಜಾಹೀರಾರು ಪ್ರದರ್ಶನಕ್ಕೆ ಅವಕಾಶ ನೀಡಿದ್ದ ಬಿಬಿಎಂಪಿ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಹೈಕೋರ್ಟ್, ಜಾಹೀರಾತು ನಿಷೇಧಕ್ಕೆ ಸ್ಪಷ್ಟ ಬೈಲಾ ರೂಪಿಸುವಂತೆ ಬಿಬಿಎಂಪಿಗೆ ಸೂಚಿಸಿತ್ತು. ಅದರಂತೆ 2019ರ ಜನವರಿಯಲ್ಲಿ ಬಿಬಿಎಂಪಿ ಹೊಸ ಬೈಲಾ ರೂಪಿಸಿ ಸರ್ಕಾರಕ್ಕೆ ಸಲ್ಲಿಸಿತ್ತು. ಈ ನಡುವೆ ನಗರಾಭಿವೃದ್ಧಿ ಇಲಾಖೆ “ಬಿಬಿಎಂಪಿ ಜಾಹೀರಾತು ಕರಡು-2019′ ನಿಯಮವನ್ನು ಪ್ರಕಟಿಸಿತ್ತು. ಇದಕ್ಕೆ ಬಿಬಿಎಂಪಿ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈಗ ಹೈಕೋರ್ಟ್ ಬಿಬಿಎಂಪಿ ರೂಪಿಸಿರುವ ಬೈಲಾಗೆ ಅನುಮೋದನೆ ನೀಡುವಂತೆ ಸೂಚಿಸಿದೆ.
ನಿಯಂತ್ರಣ ಸಮಿತಿ ರಚನೆ: ಅಕ್ರಮ ಜಾಹೀರಾತು ಪ್ರದರ್ಶನ ತಡೆಯುವ ಉದ್ದೇಶದಿಂದ ಬಿಬಿಎಂಪಿ ಆಯುಕ್ತರ ನೇತೃತ್ವದಲ್ಲಿ ಜಾಹೀರಾತು ನಿಯಂತ್ರಣ ಸಮಿತಿ ರಚಿಸಲಾಗುತ್ತದೆ. ಇದರಲ್ಲಿ ಪೊಲೀಸ್ ಆಯುಕ್ತರು, ಬೆಸ್ಕಾಂ ಎಂಡಿ, ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ, ಜಾಹೀರಾತು ವಿಭಾಗದ ಜಂಟಿ ಆಯುಕ್ತ, ಆಸ್ತಿ ವಿಭಾಗದ ವಿಶೇಷ ಆಯುಕ್ತರು ಸದಸ್ಯರು ಇರಲಿದ್ದಾರೆ. ಬಿಬಿಎಂಪಿ ರಸ್ತೆ ಮೂಲ ಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಸದಸ್ಯ ಕಾರ್ಯದರ್ಶಿಗಳಾಗಿ ಕೆಲಸ ಮಾಡಲಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಅನುಮತಿ ಕಡ್ಡಾಯ: ಬಿಬಿಎಂಪಿಯ 2018ರ ಬೈಲಾ ಅನ್ವಯ ನಗರದಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅನುಮತಿ ನೀಡುವ ಮತ್ತು ತಿರಸ್ಕರಿಸುವ ಅಧಿಕಾರವನ್ನು ಬಿಬಿಎಂಪಿ ಆಯುಕ್ತರಿಗೆ ನೀಡಲಾಗಿದೆ. ಯಾವುದೇ ಜಾಹೀರಾತು ಪ್ರದರ್ಶನ ಮಾಡಬೇಕಾದರೂ ಆಯುಕ್ತರಿಂದ ಅನುಮತಿ ಪಡೆದಿರಬೇಕು. ಎಲ್ಲ ಏಜೆನ್ಸಿಯೂ ಬಿಬಿಎಂಪಿಯಲ್ಲಿ ನೋಂದಣಿ ಮಾಡಿಕೊಂಡಿರಬೇಕು. ಇದಕ್ಕೆ ಆಯುಕ್ತರಿಂದ ಅನುಮತಿ ಪಡೆದು, ಪ್ರತಿ ಮೂರು ವರ್ಷಕ್ಕೆ ಪರವಾನಗಿ ನವೀಕರಣ ಮಾಡಿಕೊಳ್ಳಬೇಕು. ಅನುಮತಿ ಪಡೆಯದೆ ಜಾಹೀರಾತು ಪ್ರದರ್ಶಿಸಿದರೆ ಅದನ್ನು ಅಕ್ರಮ ಎಂದು ಪರಿಗಣಿಸಿ ಕಾನೂನು ಕ್ರಮ ತೆಗೆದುಕೊಳ್ಳುಲು ಅವಕಾಶ ನೀಡಲಾಗಿದೆ.
ಮುಂದುವರಿದ ಖಾಸಗಿ ಜಾಹೀರಾತು ಗೊಂದಲ: ಬಿಬಿಎಂಪಿ ರೂಪಿಸಿದ 2018ರ ಜಾಹೀರಾತು ಬೈಲಾ ಜಾರಿಗೆ ತರುವಂತೆ ಹೈಕೋರ್ಟ್ ಸೂಚಿಸಿದೆ. ಆದರೆ, ಎಲ್ಲ ಗೊಂದಲಗಳಿಗೆ ಇನ್ನೂ ಪೂರ್ಣವಿರಾಮ ಬಿದ್ದಿಲ್ಲ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ (ಪಿಪಿಪಿ)ದಲ್ಲಿ ನಿರ್ಮಾಣವಾಗಿರುವ ಮತ್ತು ಈಗಾಗಲೇ ನಿರ್ಮಾಣವಾಗಿರುವ ಸ್ಕೈವಾಕ್, ಶೌಚಾಲಯ ಮತ್ತು ಬಸ್ ನಿಲ್ದಾಣಗಳಲ್ಲಿ ಖಾಸಗಿ ಜಾಹೀರಾತು ಪ್ರದರ್ಶಿಸಲು ಅವಕಾಶ ನೀಡುವ ಬಗ್ಗೆ ಬಿಬಿಎಂಪಿಯಲ್ಲಿ ಗೊಂದಲ ಮುಂದುವರಿದಿದೆ. ಈ ಸ್ಥಳಗಳಲ್ಲೂ ಖಾಸಗಿ ಜಾಹೀರಾತು ಪ್ರದರ್ಶನವನ್ನು ನಿಷೇಧಿಸಬೇಕು ಎಂದು ಪಾಲಿಕೆ ಸದಸ್ಯರು ಒತ್ತಾಯಿಸಿದ್ದಾರೆ.
ಅಗತ್ಯವಿರುವ ಪ್ರದೇಶಗಳಲ್ಲಿ ಮಾತ್ರ ಸ್ಕೈವಾಕ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಪಿಪಿಪಿ ಮಾದರಿಯಲ್ಲಿ ಅವಕಾಶ ನೀಡುವ ಜಾಹೀರಾತಿಗೆ ಪ್ರದರ್ಶನ ಕಾಲಾವಧಿ ಕಡಿಮೆ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ. ಮುಂದೆ ಪಾಲಿಕೆಯ ಆರ್ಥಿಕ ಸ್ಥಿತಿ ನೋಡಿಕೊಂಡು ಎಲ್ಲ ಜಾಹೀರಾತಿಗೂ ಕಡಿವಾಣ ಹಾಕಲಿದ್ದೇವೆ.
-ಗಂಗಾಂಬಿಕೆ ಮಲ್ಲಿಕಾರ್ಜುನ್, ಮೇಯರ್