ಬೆಂಗಳೂರು: ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಂಡಿಸಿದ 2019-20ನೇ ಸಾಲಿನ ಬಜೆಟ್ ಗಾತ್ರಕ್ಕೆ ಸರ್ಕಾರದಿಂದ ಕತ್ತರಿ ಬೀಳಲಿದ್ದು, ಶೀಘ್ರದಲ್ಲಿಯೇ ಈ ಕುರಿತು ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸುವ ಸಾಧ್ಯತೆಯಿದೆ.
ಫೆಬ್ರವರಿಯಲ್ಲಿ ಸತತ ನಾಲ್ಕನೇ ಅವಧಿಗೆ ಪಾಲಿಕೆಯಲ್ಲಿ ಮೈತ್ರಿ ಆಡಳಿತ ಬಜೆಟ್ ಮಂಡಿಸಿತ್ತು. ಆರಂಭದಲ್ಲಿ 10,688 ಕೋಟಿ ರೂ. ಗಾತ್ರವಿದ್ದ ಬಜೆಟ್, ಚರ್ಚೆ ಬಳಿಕ ಏಕಾಏಕಿ 12,957 ಕೋಟಿ ರೂ.ಗಳಿಗೆ ಏರಿಕೆಯಾಗಿತ್ತು. ಈ ಕುರಿತು ಬಿಜೆಪಿಯಿಂದ ವಿರೋಧ ವ್ಯಕ್ತವಾದರೂ ಕೌನ್ಸಿಲ್ ಸಭೆಯಲ್ಲಿ ಬಜೆಟ್‌ಗೆ ಅನುಮೋದನೆ ಪಡೆದು ಸರ್ಕಾರಕ್ಕೆ ಕಳುಹಿಸಲಾಗಿತ್ತು.
ಏಕಾಏಕಿ 3 ಸಾವಿರ ಕೋಟಿ ರೂ. ಏರಿಕೆಯಾದ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್, “ಬಜೆಟ್ ಅವೈಜ್ಞಾನಿಕವಾಗಿರುವ ಕಾರಣ, ಅನುಷ್ಠಾನ ಸಾಧ್ಯವಾಗುವುದಿಲ್ಲ. ಬಜೆಟ್ ಗಾತ್ರವನ್ನು 9 ಸಾವಿರ ಕೋಟಿಗೆ ಇಳಿಸಿದಾಗ ಮಾತ್ರ ಅನುಷ್ಠಾನ ಸಾಧ್ಯ’ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು.
ಆಯುಕ್ತರ ಪತ್ರದ ಆಧಾರದ ಮೇಲೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಬಜೆಟ್ ಗಾತ್ರವನ್ನು 9 ಸಾವಿರ ಕೋಟಿ ರೂ.ಗೆ ಸೀಮಿತಗೊಳಿಸಬೇಕು ಎಂದು ಕೋರಿ ಬಜೆಟ್‌ನ್ನು ನಗರಾಭಿವೃದ್ಧಿ ಇಲಾಖೆ ಸಚಿವರ ಮುಂದೆ ಮಂಡಿಸಿದ್ದಾರೆ. ಸಚಿವರು ಒಪ್ಪಿದ ಕೂಡಲೇ ಇಲಾಖೆ ಆದೇಶ ಹೊರಡಿಸಲಿದೆ.
ಮೇಯರ್ ರಾಜಿನಾಮೆ ನೀಡಲಿ: ಪ್ರಸಕ್ತ ಸಾಲಿನಲ್ಲಿ ಬಿಬಿಎಂಪಿ ಮಂಡಿಸಿದ್ದ 13 ಸಾವಿರ ಕೋಟಿ ರೂ. ಗಾತ್ರದ ಬಜೆಟ್ ಅನ್ನು ಸರ್ಕಾರ 9 ಸಾವಿರ ಕೋಟಿ ರೂ.ಗೆ ಇಳಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಅವೈಜ್ಞಾನಿಕ ಬಜೆಟ್ ಮಂಡನೆಗೆ ಕಾರಣರಾದ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ಒತ್ತಾಯಿಸಿದ್ದಾರೆ.