Advertisement

ಪಾಲಿಕೆ “ಬಿಜೆಪಿ ಬಜೆಟ್‌’ಗೆ ಅನುಮೋದನೆ

12:57 AM Aug 29, 2019 | Lakshmi GovindaRaj |

ಬೆಂಗಳೂರು: ಬಿಬಿಎಂಪಿಯ 2019-20ನೇ ಸಾಲಿನ ಬಜೆಟ್‌ಗೆ ರಾಜ್ಯ ಸರ್ಕಾರ ಬುಧವಾರ ಅನುಮೋದನೆ ನೀಡಿದೆ. ಈ ಹಿಂದೆ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿದ್ದ 11,649 ಕೋಟಿ ರೂ. ಮೊತ್ತದ ಬಜೆಟ್‌ಗೆ ಅನುಮೋದನೆ ನೀಡಲಾಗಿದೆ.

Advertisement

ಆದರೆ, ಕಾಂಗ್ರೆಸ್‌-ಜೆಡಿಎಸ್‌ನ ಬಿಜೆಪಿ ಸದಸ್ಯರು ಹಾಗೂ ವಿಧಾನಸಭೆ ಸದಸ್ಯರಿಗೆ ಈ ಹಿಂದೆ ಬಜೆಟ್‌ನಲ್ಲಿ ನಿಗಿದಪಡಿಸಲಾಗಿದ್ದ ಅನುದಾನದಲ್ಲಿ ಕಡಿತಗೊಳಿಸಿ, ಅದನ್ನು ಬಿಜೆಪಿ ಸದಸ್ಯರಿಗೆ ವರ್ಗಾಯಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಗೆ ಬರುವ ಅನರ್ಹತೆಗೊಂಡಿರುವ ಶಾಸಕರ ಕ್ಷೇತ್ರಗಳಿಗೆ ಕೊಟ್ಟಿದ್ದ ಅನುದಾನದಲ್ಲಿ ಯವುದೇ ಬದಲಾವಣೆಯಾಗಿಲ್ಲ.

ಪಾಲಿಕೆಯ ಮೈತ್ರಿ ಆಡಳಿತ 2019-20ನೇ ಸಾಲಿನಲ್ಲಿ 12,958 ಕೋಟಿ ರೂ. ಮೊತ್ತದ ಭಾರೀ ಗಾತ್ರದ ಬಜೆಟ್‌ ಮಂಡಿಸಿತ್ತು. ನಗರಾಭಿವೃದ್ಧಿ ಇಲಾಖೆ, 1,308.89 ಕೋಟಿ ರೂ. ಕಡಿತಗೊಳಿಸಿ, 11,648.90 ಕೋಟಿ ರೂ.ಗೆ ಅನುಮೋದಿಸಿತ್ತು. ಇದಕ್ಕೆ ರಾಜ್ಯ ಸರ್ಕಾರ ಈಗ ಅನುಮೋದನೆ ನೀಡಿದ್ದು, ಉಳಿದ 1,309 ಕೋಟಿ ರೂ.ಗೆ ತನ್ನ ಆದಾಯ ನೋಡಿಕೊಂಡು ಪೂರಕ ಬಜೆಟ್‌ ಸಿದ್ಧಪಡಿಸುವಂತೆ ಪಾಲಿಕೆಗೆ ಸೂಚಿಸಿದೆ.

ಮೂಲ ಸ್ವರೂಪ ಬದಲು: ಬಜೆಟ್‌ನ ಮೂಲ ಸ್ವರೂಪವೇ ಬದಲಾಗಿದ್ದು, ಬಿಜೆಪಿ ಶಾಸಕರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅತಿ ಹೆಚ್ಚು ಅನುದಾನ ನೀಡಲಾಗಿದೆ. ಯಲಹಂಕ ಕ್ಷೇತ್ರಕ್ಕೆ 33 ಕೋಟಿ ರೂ. ಹಾಗೂ ಬೊಮ್ಮನಹಳ್ಳಿಗೆ 30 ಕೋಟಿ ರೂ. ನೀಡಲಾಗಿದೆ. ಮಹದೇವಪುರ, ಬೆಂಗಳೂರು ದಕ್ಷಿಣಕ್ಕೆ ತಲಾ 20 ಕೋಟಿ ರೂ., ಸಿ.ವಿ.ರಾಮನ್‌ನಗರ, ಪದ್ಮನಾಭನಗರ, ಯಲಹಂಕ, ಚಿಕ್ಕಪೇಟೆ, ರಾಜಾಜಿನಗರ, ಮಲ್ಲೇಶ್ವರ ಕ್ಷೇತ್ರಗಳಿಗೆ ತಲಾ 10 ಕೋಟಿ ರೂ. ನಿಗದಿ ಮಾಡಲಾಗಿದೆ.

ಆರ್ಥಿಕ ಹೊರೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ ಪೂರ್ಣಗೊಂಡ ಬಾಕಿರುವ ಬಿಲ್ಲುಗಳ ಮೊತ್ತ 2,954.83 ಕೋಟಿ ರೂ.ಗಳಷ್ಟಿದೆ. ಜತೆಗೆ 4,167 ಕೋಟಿ ರೂ.ಗಳ ಮೊತ್ತದ ಕಾಮಗಾರಿ ಪ್ರಗತಿಯಲ್ಲಿದೆ. ಕಾರ್ಯಾದೇಶ ಪಡೆದು ಪ್ರಾರಂಭವಾಗಬೇಕಿರುವ ಕಾಮಗಾರಿಗಳ ಮೊತ್ತು 728.10 ಕೋಟಿ ರೂ.ಗಳಾಗಿದ್ದು, ಕಾಮಗಾರಿ ಸಂಖ್ಯೆ ನೀಡಿ ಪ್ರಗತಿಯಲ್ಲಿರುವ ಕಾಮಗಾರಿಗಳ ಮೊತ್ತವು 1,996 ರೂ.ಗಳಷ್ಟಿದೆ.

Advertisement

ಕಾಮಗಾರಿ ಸಂಖ್ಯೆ ನೀಡಲಾಗಿರುವ ಟೆಂಡರ್‌ ಕರೆಯಬೇಕಾಗಿರುವ ಕಾಮಗಾರಿಗಳ ಮೊತ್ತ 1,801.28 ಕೋಟಿ ರೂ. ಹಾಗೂ ಆಡಳಿತಾತ್ಮಕ ಅನುಮೋದನೆಗೊಂಡು ಕಾಮಗಾರಿ ಸಂಖ್ಯೆ ನೀಡಬೇಕಾಗಿರುವ ಮೊತ್ತ 1193.66 ಕೋಟಿ ರೂ. ಸೇರಿ ಒಟ್ಟು 12,841 ಕೋಟಿ ರೂ.ಗಳ ಕಾಮಗಾರಿ ಮೊತ್ತವನ್ನು ಪಾವತಿಸಬೇಕಾಗಿದೆ. ಇದೆಲ್ಲವೂ ಹಿಂದಿನ ಬಜೆಟ್‌ನಲ್ಲಿ ಘೋಷಿಸಿದ್ದ ಕಾರ್ಯಕ್ರಮಗಳ ಬಾಬ್ತು. ಇಷ್ಟೆಲ್ಲ ಆರ್ಥಿಕ ಹೊರೆಯಿದ್ದರೂ, 13 ಸಾವಿರ ಕೊಟಿ ರೂ. ಮೊತ್ತದ ಬಜೆಟ್‌ಗೆ ಅನುಮೋದನೆ ನೀಡಿರುವುದು ಬಿಬಿಎಂಪಿ ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆಗಳೂ ಇವೆ ಎಂಬ ಮಾತುಗಳು ಕೇಳಿಬರುತ್ತಿವೆ.

ಅನರ್ಹತೆಗೊಂಡವರ ಅನುದಾನ ಸೇಫ್: ಅನರ್ಹತೆಗೊಂಡಿರುವ ಶಾಸಕರು ಪ್ರತಿನಿಧಿಸಿದ್ದ ರಾಜರಾಜೇಶ್ವರಿನಗರ, ಯಶವಂತಪುರ, ಮಹಾಲಕ್ಷ್ಮೀಲೇಔಟ್‌, ಕೆ.ಆರ್‌.ಪುರ, ಶಿವಾಜಿನಗರ ಕ್ಷೇತ್ರಗಳಿಗೆ ಈ ಹಿಂದೆ ನಿಗದಿಯಾಗಿದ್ದ 5 ಕೋಟಿ ರೂ. ಅನುದಾನದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ, ಹೆಬ್ಟಾಳ, ವಿಜಯನಗರ, ಪುಲಕೇಶಿನಗರ, ಚಾಮರಾಜಪೇಟೆ, ಶಾಂತಿನಗರ, ಗಾಂಧಿನಗರ ಕ್ಷೇತ್ರಗಳಿಗೆ ಮೀಸಲಿರಿಸಿದ್ದ 5 ಕೋಟಿ ರೂ. ಅನುದಾನವನ್ನು 2 ಕೋಟಿಗೆ ಇಳಿಸಲಾಗಿದೆ.

ಮೇಯರ್‌, ಉಪಮೇಯರ್‌ ಅನುದಾನವೂ ಕಡಿತ: ಮೇಯರ್‌ ಮತ್ತು ಉಪಮೇಯರ್‌ ಪ್ರತಿನಿದಿಸುವ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ನಿಗದಿ ಮಾಡಲಾಗಿದ್ದ ಅನುದಾನದಲ್ಲೂ ಕಡಿತ ಮಾಡಲಾಗಿದ್ದು, ಮೇಯರ್‌ ಗಂಗಾಂಬಿಕೆ ಪ್ರತಿನಿಧಿಸುವ ವಾರ್ಡ್‌ಗೆ ನೀಡಿದ್ದ 15 ಕೋಟಿ ರೂ. ಅನುದಾನವನ್ನು 5 ಕೋಟಿ ರೂ.ಗೆ ಮತ್ತು ಉಪಮೇಯರ್‌ ಭದ್ರೇಗೌಡರ ವಾರ್ಡ್‌ಗೆ ನೀಡಿದ್ದ 10 ಕೋಟಿ ರೂ.ಗಳನ್ನು 5 ಕೋಟಿ ರೂ.ಗೆ ಇಳಿಸಲಾಗಿದೆ. ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌ ವಾರ್ಡ್‌ ಅನುದಾನ 7 ಕೋಟಿಯಿಂದ 3 ಕೋಟಿ ರೂ.ಗೆ ಇಳಿದಿದೆ.

ಅನುಷ್ಠಾನಕ್ಕೆ ಆದಾಯ ಸಂಗ್ರಹ ಆಗಲೇಬೇಕು: 2018-19ನೇ ಸಾಲಿನಲ್ಲಿ ಬಿಬಿಎಂಪಿಯು ವಿವಿಧ ಮೂಲಗಳಿಂದ 3,766.64 ಕೋಟಿ ರೂ. ಆದಾಯ ನಿರೀಕ್ಷಿಸಿತ್ತು. ಆದರೆ, ಸಂಗ್ರಹವಾಗಿದ್ದು 2,419 ಕೋಟಿ ರೂ. ಮಾತ್ರ. 2019-20ನೇ ಸಾಲಿನಲ್ಲಿ 9,351.68 ಕೋಟಿ ರೂ.ಗಳ ಆದಾಯ ಬರಲಿದೆ ಎಂದು ಉಲ್ಲೇಖೀಸಲಾಗಿದೆಯಾದರೂ, ಈ ಮೊತ್ತ ಸಂಗ್ರಹಕ್ಕೆ ಬೇಕಾದ ಸಿದ್ಧತೆಗಳನ್ನು ಬಿಬಿಎಂಪಿ ಮಾಡಿಕೊಂಡಿಲ್ಲ. ಜತೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ 3,606 ಕೋಟಿ ರೂ. ಅನುದಾನ ನಿರೀಕ್ಷಿಸಲಾಗಿದೆ. ಸರ್ಕಾರಗಳಿಂದ ಅನುದಾನ ಬಂದರೂ, ಬಿಬಿಎಂಪಿ ಮೂಲಗಳಿಂದ ನಿರೀಕ್ಷಿಸಿದಷ್ಟು ಆದಾಯ ಬರುವ ಸಾಧ್ಯತೆ ತೀತಾ ಕಡಿಮೆ. ಹೀಗಾಗಿ, ಈ ಬಾರಿಯೂ ಬಜೆಟ್‌ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಲ್ಲ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next