Advertisement
ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರು ಕಡಿಮೆಯಿದ್ದು, ಸಭಿಕರು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಆದರೆ, ಕೆಂಪೇಗೌಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಭಿಕರಿಗಿಂತ ಪುರಸ್ಕೃತರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.
Related Articles
Advertisement
ಪ್ರಶಸ್ತಿ ಸಾಯಲು ಬಿಡಬೇಡಿ: “ಇದು ಹೀಗೇ ಮುಂದುವರಿದರೆ ಕೆಂಪೇಗೌಡ ಪ್ರಶಸ್ತಿ ಮೌಲ್ಯ ಕಳೆದುಕೊಳ್ಳುವುದಂತೂ ಸತ್ಯ. ಪ್ರಶಸ್ತಿಗೆ ಯಾರ್ಯಾರೋ ಬಂದು ಕೊರಳೊಡ್ಡಿದ್ದು, ಪ್ರಶಸ್ತಿ ಪುರಸ್ಕೃತರೇ ಮುಜುಗರ ಪಟ್ಟುಕೊಳ್ಳುವಂತೆ ಮಾಡಿದೆ. ನನ್ನ ಕಳಕಳಿ ಇಷ್ಟೇ, ಪ್ರಶಸ್ತಿ ಮೌಲ್ಯ ಉಳಿಯಬೇಕಾದರೆ, ಎಲ್ಲ ಕ್ಷೇತ್ರಗಳಿಂದಲೂ ತಲಾ ಇಬ್ಬರನ್ನು ಗುರುತಿಸಿ ಗೌರವಿಸುವ ಕಾರ್ಯಕ್ಕೆ ಪಾಲಿಕೆ ಮುಂದಾಗಲಿ. ಪ್ರಶಸ್ತಿಯ ಗೌರವ, ಮೌಲ್ಯವನ್ನು ದಯವಿಟ್ಟು ಸಾಯಲು ಬಿಡಬೇಡಿ’ ಎಂದು ಶ್ರೀನಿಧಿ ಒದಿಲಾ°ಳ ಎಂಬುವವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಂತೆಯಲ್ಲಿ ಪ್ರಸಾದ ಹಂಚಿದಂತೆ: “ಯಾವುದೇ ಅರ್ಹತೆ ಇಲ್ಲದವರಿಗೂ ಕೆಂಪೇಗೌಡ ಪ್ರಶಸ್ತಿ ಕೊಟ್ಟಿದ್ದಾರೆ. ಪ್ರಶಸ್ತಿ ನೀಡಲು ಯಾವೊಂದು ಮಾನದಂಡ ಕೂಡ ಇಲ್ಲವೇ? ಸಂತೆಯಲ್ಲಿ ಪ್ರಸಾದ ಹಂಚಿದ ಆಗಿತ್ತು ಕೆಂಪೇಗೌಡ ಪ್ರಶಸ್ತಿ ಪ್ರದಾನ ಸಮಾರಂಭ’ ಎಂದು ಅರುಣ್ ಕುಮಾರ್ ಎಂಬುವವರು ಎಫ್ಬಿ ವಾಲ್‌ನಲ್ಲಿ ಬರೆದುಕೊಂಡಿದ್ದಾರೆ.
ಬೂತ್‌ಗೆ 100 ಮಂದಿ ಆಯ್ಕೆ!: “2018ರಲ್ಲಿ 507 ಜನರಿಗೆ ಕೆಂಪೇಗೌಡ ಪ್ರಶಸ್ತಿ ಹಂಚಿಕೆ. ಮುಂದಿನ ಬಾರಿಯಿಂದ ಮತದಾರರ ಪಟ್ಟಿಯಿಂದ ಪ್ರತಿ ಬೂತ್‌ನ 100 ಜನರನ್ನು ಆಯ್ಕೆ ಮಾಡಲು ನಿರ್ಧಾರ. ವರ್ಷಕ್ಕೆ ಎರಡು ಬಾರಿ ಪ್ರಶಸ್ತಿ ನೀಡಲು ನಿರ್ಧರಿಸಿದ್ದಾರಂತೆ’ ಎಂದು ಬಿಜೆಪಿ ಸಹ ವಕ್ತಾರ ಎಸ್.ಪ್ರಕಾಶ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಸ್ಮರಣಿಕೆ, ಪ್ರಮಾಣ ಪತ್ರಕ್ಕಾಗಿ ದುಂಬಾಲು: ಶನಿವಾರದ ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಪುರಸ್ಕೃತರಿಗೆ ಸ್ಮರಣಿಕೆ ಹಾಗೂ ಪ್ರಮಾಣ ಪತ್ರ ಕೊರತೆಯಾಗಿತ್ತು. ಆ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ನೀಡುವುದಾಗಿ ಘೋಷಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಸೋಮವಾರದಿಂದಲೇ ಹತ್ತಾರು ಪುರಸ್ಕೃತರು ಪಾಲಿಕೆಗೆ ಬರಲಾರಂಭಿಸಿದ್ದು, ತಮಗೆ ಕೇವಲ ಶಾಲು, ಹಾರ ಮಾತ್ರ ಸಿಕ್ಕಿದೆ. ಸ್ಮರಣಿಕೆ ಕೊಡಿ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿಗಳಿಗೆ ದುಂಬಾಲು ಬಿದ್ದಿದ್ದಾರೆ. ಸ್ಮರಣಿಕೆ ಹಾಗೂ ಪ್ರಮಾಣಪತ್ರ ಬಂದ ಕೂಡಲೇ ಕರೆ ಮಾಡಿ ತಿಳಿಸುವುದಾಗಿ ಪಿಆರ್‌ಒ ಹೇಳಿ ಕಳುಹಿಸುತ್ತಿದ್ದಾರೆ. ಇನ್ನು ಕೆಲವರು ಕರೆ ಮಾಡಿ, “ನಗದು ಬಹುಮಾನ ಯಾವಾಗ ಕೊಡ್ತೀರಾ?’ ಎಂದು ಕೇಳುತ್ತಿದ್ದಾರೆ.
ಮೇಯರ್ ವಿರುದ್ಧ ಕಾಂಗ್ರೆಸ್ ಗರಂ: ಏಕಾಏಕಿ ಪ್ರಶಸ್ತಿ ಪುರಸ್ಕೃತರ ಪಟ್ಟಿಗೆ 200 ಜನರ ಹೆಸರು ಸೇರಿಸಿದ ಮೇಯರ್ ಆರ್.ಸಂಪತ್‌ರಾಜ್ ಅವರ ಏಕಪಕ್ಷೀಯ ನಿರ್ಧಾರದಿಂದ ಕಾಂಗ್ರೆಸ್ ತೀವ್ರ ಟೀಕೆಗೆ ಗುರಿಯಾಗಿದೆ. ಸಂಪತ್ ಅವರ ಈ ನಡೆಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ. ಜತೆಗೆ ಮೂರು ವರ್ಷಗಳಿಂದ ಕಾಪಾಡಿಕೊಂಡು ಬಂದ ಗೌರವವನ್ನು ಹಾಳು ಮಾಡಿದ್ದು, ಮೇಯರ್ ನಿರ್ಧಾರದಿಂದ ಕಾಂಗ್ರೆಸ್ ಮುಜುಗರಕ್ಕೆ ಒಳಗಾಗಿದೆ ಎಂದು ಕಾಂಗ್ರೆಸ್ ಪಾಲಿಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಕೆಪಿಸಿಸಿಯಲ್ಲೂ ಮೇಯರ್ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ ಎನ್ನಲಾಗಿದೆ.ಇದು ಅತ್ಯಂತ ಗೌರವಯುತ ಪ್ರಶಸ್ತಿ. ಯಾವ ಕಾರಣಕ್ಕೆ ಇಷ್ಟೊಂದು ಮಂದಿಗೆ ಪ್ರಶಸ್ತಿ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ, ಮುಂದಿನ ಬಾರಿ ಬಿಬಿಎಂಪಿ ಜತೆಗೆ ಚರ್ಚಿಸಿ ಎಷ್ಟು ಜನರಿಗೆ ಪ್ರಶಸ್ತಿ ನೀಡಬೇಕು ಎಂಬುದನ್ನು ನಿಗದಿಪಡಿಸಲಾಗುವುದು.
ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ