ಬೆಂಗಳೂರು: ನಗರದಲ್ಲಿ ಅಕ್ರಮ ಕಟ್ಟಡಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಹೈದರಾಬಾದ್ ಮಾದರಿಯಲ್ಲಿ ಕಠಿಣ ನಿಯಮ ಜಾರಿಗೆ ತರಲು ಬಿಬಿಎಂಪಿ ಚಿಂತನೆ ನಡೆಸಿದೆ. ಹೈದರಾಬಾದ್‌ನಲ್ಲಿ ಅಕ್ರಮವಾಗಿ ತಲೆಯೆತ್ತುವ ಕಟ್ಟಡದಲ್ಲಿ ಸುಮಾರು ಶೇ. 20ರಷ್ಟು ಜಾಗವನ್ನು ಅಲ್ಲಿನ ಸ್ಥಳೀಯ ಸಂಸ್ಥೆ ವಶಕ್ಕೆ ಪಡೆಯುತ್ತದೆ.
ಇದೇ ಮಾದರಿಯಲ್ಲಿ ಅನುಮೋದಿತ ಯೋಜನೆ ಮೀರಿ ನಗರದಲ್ಲಿ ತಲೆಯೆತ್ತುವ ಕಟ್ಟಡಗಳಲ್ಲಿ ಶೇ. 10ರಷ್ಟು ಜಾಗವನ್ನು ವಶಕ್ಕೆ ಪಡೆಯಲು ಬಿಬಿಎಂಪಿ ಚಿಂತನೆ ನಡೆಸಿದೆ ಎಂದು ಬಿಬಿಎಂಪಿ ತೆರಿಗೆ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಗುಣಶೇಖರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಸಂಬಂಧ ಬೈಲಾ ತಿದ್ದುಪಡಿ ಮಾಡಿ, ನಂತರ ಅನುಮೋದನೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಉದ್ದೇಶಿ ಸಲಾಗಿದೆ.
ಹಾಗೊಂದು ವೇಳೆ ಈ ಚಿಂತನೆ ಕಾರ್ಯರೂಪಕ್ಕೆ ಬಂದರೆ, ನಗರದಲ್ಲಿ ಇನ್ಮುಂದೆ ತಲೆಯೆತ್ತುವ ಕಟ್ಟಡಗಳ ಮಾಲಿಕರೊಂದಿಗೆ ಕರಾರುಪತ್ರ ಮಾಡಿಕೊಳ್ಳಲಾಗುವುದು. ಆ ಕರಾರು ನಿಯಮ ಉಲ್ಲಂ ಸಿ ನಿರ್ಮಾಣಗೊಳ್ಳುವ ಕಟ್ಟಡಗಳಲ್ಲಿನ ಶೇ. 10ರಷ್ಟು ಜಾಗವನ್ನು ಪಾಲಿಕೆ ವಶಕ್ಕೆ ಪಡೆಯಲಿದೆ. ಇದರ ಉದ್ದೇಶ ನಗರದಲ್ಲಿ ತಲೆಯೆತ್ತುತ್ತಿರುವ ಅಕ್ರಮ ಕಟ್ಟಡಗಳಿಗೆ ಕಡಿವಾಣ ಹಾಕುವುದಾಗಿದೆ ಎಂದರು.
ವಾಸ್ತವಿಕ ಬಜೆಜ್
ಇದಕ್ಕೂ ಮುನ್ನ ಬಜೆಟ್ ಕುರಿತ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಗುಣಶೇಖರ್, ಬಿಬಿಎಂಪಿ ರಚನೆಯಾದ ನಂತರದಿಂದ ಇದುವರೆಗೆ ವಾಸ್ತವ ಬಜೆಟ್ ಮಂಡನೆ ಆಗಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ವಾಸ್ತವ ಬಜೆಟ್ ಮಂಡನೆ ಆಗಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳು ನಡೆದಿವೆ. ಬಜೆಟ್ ಮಂಡನೆ ಹಾಗೂ ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ಸಂಬಂಸಿದಂತೆ ಮಾರ್ಚ್ 13ರಂದು ಬಿಬಿಎಂಪಿ ವಿಶೇಷ ಸಭೆ ಕರೆಯಲಾಗಿದೆ.
ಮತ್ತೂಂದೆಡೆ ಬಜೆಟ್ ಕುರಿತು ಸಾರ್ವಜನಿಕರಿಂದಲೂ ಸಲಹೆ-ಸೂಚನೆಗಳನ್ನು ಸಂಗ್ರಹಿಸಲಾಗಿದೆ. ರಸ್ತೆ ದುರಸ್ತಿ, ಕಸ ವಿಲೇವಾರಿ, ಕೆರೆ ಒತ್ತುವರಿ ತೆರವು ಸೇರಿದಂತೆ ಹಲವು ಅಂಶಗಳಿಗೆ ಒತ್ತುನೀಡಬೇಕು ಎಂದು ಜನರಿಂದ ಸಲಹೆಗಳು ಬಂದಿವೆ. ಇವುಗಳನ್ನು ಆಧರಿಸಿ ವಾಸ್ತವ ಬಜೆಟ್ ಮಂಡನೆಗೆ ಸಿದ್ಧತೆ ನಡೆದಿದೆ ಎಂದು ತಿಳಿಸಿದರು.