ಬೆಂಗಳೂರು: ಬಿಬಿಎಂಪಿಯಲ್ಲಿ ಸುಮಾರು 4ರಿಂದ 5 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದ್ದು, ಮೂರ್ನಾಲ್ಕು ದಿನಗಳಲ್ಲಿ ಈ ಕುರಿತ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಹೆಬ್ಟಾಳ ಕ್ಷೇತ್ರದ ಬಿಜೆಪಿ ಶಾಸಕ ವೈ.ಎ.ನಾರಾಯಣಸ್ವಾಮಿ ಅವರು ಶಾಸಕರಾಗಿ ಒಂದು ವರ್ಷ ಅಧಿಕಾರ ಪೂರೈಸಿದ ಹಿನ್ನೆಲೆಯಲ್ಲಿ ಸಾಧನೆ ಕುರಿತು ಹೊರತಂದಿರುವ ಜನ ಸಂವೇದನೆ ಮತ್ತು ದೃಢ ಸಂಕಲ್ಪದ ಹೆಜ್ಜೆಗಳು ಕುರಿತ ಪುಸ್ತಕ ಬಿಡುಗಡೆ ಸಮಾರಂಭ ಮತ್ತು ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಿಂದ ಜನರಿಂದ ಸಂಗ್ರಹವಾದ ತೆರಿಗೆ ಹಣವನ್ನು ಪಾಲಿಕೆ ಖಾತೆಗೆ ಹಾಕದೆ ಕೆಲವು ಅಧಿಕಾರಿಗಳೇ ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಇಂತಹದ್ದೇ ಸುಮಾರು 4ರಿಂದ 5 ಸಾವಿರ ಕೋಟಿ ರೂ. ಹಣ ದುರುಪಯೋಗವಾಗಿದ್ದು, ಈ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದ್ದೇನೆ. ಕೆಲವೇ ದಿನಗಳಲ್ಲಿ ಅವುಗಳನ್ನು ಬಿಡುಗಡೆ ಮಾಡುತ್ತೇನೆ ಎಂದರು.
ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಬಿಎಂಪಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ನಂತರ ಆ ಜಾಗಕ್ಕೆ ಸಚಿವ ಕೆ.ಜೆ.ಜಾರ್ಜ್ ಬಂದರು. ಅವರ ಮೂಗಿನ ಕೆಳಗೆ ಬಿಬಿಎಂಪಿ ಅಧಿಕಾರಿಗಳು ಪಾಲಿಕೆ ಹಣವನ್ನು ತಮ್ಮ ಖಾತೆಗೆ ಹಾಕಿಕೊಳ್ಳುತ್ತಾರೆ ಎಂದರೆ ಈ ಸರ್ಕಾರ ಬದುಕಿದೆಯೇ? ಸತ್ತಿದೆಯೇ ಎಂಬುದನ್ನು ಪ್ರಶ್ನೆ ಮಾಡಬೇಕಾಗಿದೆ. ಜತೆಗೆ ನಗರದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ತೆರಳಿ ದಾಖಲೆಗಳ ಸಹಿತ ಅವರ ಅಕ್ರಮವನ್ನು ಜನರ ಮುಂದಿಡಬೇಕಾಗುತ್ತದೆ. ಇದಕ್ಕೆ ನಮ್ಮ ಪಕ್ಷ ಸಿದ್ಧವಾಗಿದೆ ಎಂದರು.
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಜನಪ್ರತಿನಿಧಿಯಾಗಿದ್ದವರು ತಮ್ಮ ಅವಧಿಯಲ್ಲಿ ಏನು ಕೆಲಸ ಮಾಡಿದ್ದೇವೆ ಎಂಬುದನ್ನು ಜನರ ಮುಂದಿಡುವುದು ಆತನ ಜವಾಬ್ದಾರಿ. ಆ ನಿಟ್ಟಿನಲ್ಲಿ ನಾರಾಯಣಸ್ವಾಮಿ ಕೆಲಸ ಮಾಡಿದ್ದಾರೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದರೂ ಆ ಪಕ್ಷದ ಶಾಸಕರು ತಮ್ಮ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡುತ್ತಿಲ್ಲ. ಏಕೆಂದರೆ, ಬಿಡುಗಡೆ ಮಾಡುವಂತಹ ಒಳ್ಳೆಯ ಕೆಲಸವನ್ನು ಅವರು ಮಾಡಿಲ್ಲ.
ಹೀಗಾಗಿ ಬಿಜೆಪಿಯವರೇ ಕಾಂಗ್ರೆಸ್ ಶಾಸಕರ ಕೆಟ್ಟ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡುವ ಮೂಲಕ ಜನರಿಗೆ ನಿಜ ಸ್ಥಿತಿ ತಿಳಿಸುವ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಜನ ಸಂವೇದನೆ ಮತ್ತು ದೃಢ ಸಂಕಲ್ಪದ ಹೆಜ್ಜೆಗಳು ಕುರಿತ ಪುಸ್ತಕ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಬಿಜೆಪಿ ಬೆಳೆದುಬಂದ ದಾರಿ ಮತ್ತು ಆ ಪಕ್ಷದ ನಾಯಕರ ಪರಿಚಯ ಮಾಡಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ವೈ.ಎ.ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ರಾಮಚಂದ್ರಗೌಡ, ಲೆಹರ್ ಸಿಂಗ್, ಮುಖಂಡ ಅಬ್ದುಲ್ ಅಜೀಂ ಹಾಜರಿದ್ದರು.