ಬೆಂಗಳೂರು: ಜನರಿಗೆ ರಿಯಾಯಿತಿ ದರದಲ್ಲಿ ಆಹಾರ ನೀಡುವ ಮಹತ್ವಾಕಾಂಕ್ಷಿ “ಇಂದಿರಾ ಕ್ಯಾಂಟೀನ್’ಯೋಜನೆಯ ಆರ್ಥಿಕ ಹೊರೆ ಬಿಎಂಪಿಯ ಮೇಲೆ ಬಿದ್ದಿದೆ. ಇಂದಿರಾ ಕ್ಯಾಂಟೀನ್ ಯೋಜನೆಗೆ ಸರ್ಕಾರದಿಂದ ಶೇ.30 ರಷ್ಟು ಅನುದಾನ ಬಿಡುಗಡೆಯಾಗುತ್ತಿದ್ದು, ಕಳೆದ ಮೂರು ತಿಂಗಳಿಂದ ಈ ಯೋಜನೆಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ, 30 ಕೋಟಿ ರೂ. ಹಣವನ್ನು ಪಾಲಿಕೆಯೇ ಭರಿಸುತ್ತಿದೆ.
ಬಿಬಿಎಂಪಿ ಈಗಾಗಲೇ ಆರ್ಥಿಕ ಹೊರೆಯನ್ನು ಎದುರಿಸುತ್ತಿದ್ದು, ಪ್ರಸಕ್ತ ಬಿಬಿಎಂಪಿ 481 ಕೋಟಿ. ರೂ ಸಾಲದಲ್ಲಿದ್ದು, ಈಗ ಮೊತ್ತೂಂದು ಹೊರೆ ಎದುರಾಗಿದೆ. 2011ರಲ್ಲಿ ಬಿಬಿಎಂಪಿ 1,700 ಕೋಟಿ ರೂ. ಸಲಾ ಮಾಡಿತ್ತು. ಇದರೊಂದಿಗೆ ಹಲವು ಕಟ್ಟಡಗಳನ್ನು ಅಡಮಾನವೂ ಇರಿಸಿತ್ತು.
ಸಾಲದ ಹೊರೆಯಿಂದ ಇತ್ತೀಚಿನ ವರ್ಷಗಳಲ್ಲಿ ಸುಧಾರಿಸಿಕೊಂಡಿದ್ದು, ಅಡಮಾನ ಇರಿಸಿದ್ದ ಕೆಲವು ಕಟ್ಟಡಗಳನ್ನು ಬಿಡಿಸಿಕೊಳ್ಳಲಾಗಿದ್ದು, ಇಂದಿಗೂ ಕೆ.ಆರ್ ಮಾರುಕಟ್ಟೆ, ಪೂರ್ವ ವಲಯದ ಬಿಬಿಎಂಪಿಯ ಕಚೇರಿ, ಯುಟಿಲಿಟಿ ಕಟ್ಟಡಗಳನ್ನು ಬಿಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಇಂತಹ ಸ್ಥಿತಿಯಲ್ಲಿ ಶೇ. 30ರಷ್ಟು ಹಣವೂ ನೀಡದೆ ಇರುವುದು ಬಿಬಿಎಂಪಿಗೆ ಮತ್ತೂಂದು ಹೊರೆ ಎದುರಾಗಿದೆ.
ಶೇ.30ರಷ್ಟು ಹಣವೂ ಪಾಲಿಕೆಗೆ: ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಕೆ ಮಾಡುವ ಗುತ್ತಿಗೆದಾರಿಗೆ 57 ರೂ.ವರೆಗೆ ದರ ನೀಡಲಾಗುತ್ತಿದೆ. ಒಬ್ಬ ವ್ಯಕ್ತಿಯಿಂದ ದಿನಕ್ಕೆ ಒಂದು ತಿಂಡಿ ಹಾಗೂ ಎರಡು ಊಟಕ್ಕೆ 25 ರೂ. ಸಂಗ್ರಹವಾಗುತ್ತಿದ್ದು, ವ್ಯತ್ಯಾಸ ಮೊತ್ತದ ಪೈಕಿ ಶೇ.70ರಷ್ಟು ಹಣ ಮಹಾನಗರ ಪಾಲಿಕೆಗಳು ತಮ್ಮ ಸ್ವಂತ ಅನುದಾನ ಅಥವಾ ಎಸ್‌ಎಫ್ಸಿ ಮುಕ್ತ ನಿಧಿಯಿಂದ ಪಾವತಿಸಬೇಕು ಹಾಗೂ ಉಳಿದ ಶೇ.30ರಷ್ಟು ಹಣ ಕಾರ್ಮಿಕರ ಇಲಾಖೆ ನೀಡುವುದೆಂದು ಈ ಹಿಂದೆ ತೀರ್ಮಾನಿಸಲಾಗಿತ್ತು.
ಅದರಂತೆ ಬಿಡುಗಡೆಯಾಗಬೇಕಾಗಿರುವ ಶೇ.30ರಷ್ಟು ಹಣವೂ ಏಪ್ರಿಲ್‌ನಿಂದ ಸಂದಾಯವಾಗಿಲ್ಲ. 2017ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನರಿಗೆ ಕಡಿಮೆ ದರದಲ್ಲಿ ತಿಂಡಿ-ಊಟ ನೀಡುವ ಉದ್ದೇಶದಿಂದ ಪಾಲಿಕೆಯ ವಾರ್ಡ್‌ಗಳಲ್ಲಿ ಕ್ಯಾಂಟೀನ್ ನಿರ್ಮಾಣ ಮತ್ತು ಸಂಚಾರಿ ಕ್ಯಾಂಟೀನ್‌ಗಳನ್ನು ಆರಂಭಿಸಿತ್ತು. ಆದರೆ, ಕ್ಯಾಂಟೀನ್‌ಗಳ ನಿರ್ವಹಣೆಗೆ ಸಮರ್ಪಕವಾಗಿ ಅನುದಾನ ನೀಡಿದ ಪರಿಣಾಮ ಪಾಲಿಕೆಗೆ ಹೊರೆ ಬೀಳುತ್ತಿದೆ.
ಹಣ ಬಾಕಿ ಇರುವ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಲಾಗಿದೆ. ತಿಂಗಳಿಗೆ 10 ಕೋಟಿ ರೂ. ಹಣವನ್ನು ಪಾಲಿಕೆಯ ನಿಧಿಯಿಂದ ಬಳಸಲಾಗುತ್ತಿದೆ.
-ಎನ್. ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ
ಈ ಯೋಜನೆಗೆ ದೊಡ್ಡ ಮಟ್ಟದಲ್ಲಿ ಪಾಲಿಕೆ ಹಣ ಮೀಸಲಿರಿಸುತ್ತಿರುವುದು ಹೊರೆಯಾಗಿರುವುದು ನಿಜ. ಈ ಹಿಂದೆಯೂ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಶೀಘ್ರದಲ್ಲಿ ಸರ್ಕಾರದಿಂದಲೇ ಅನುದಾನ ಪಡೆಯುವ ಬಗ್ಗೆ ಪಾಲಿಕೆಯ ನಿಯೋಗದ ಮೂಲಕ ಮನವಿ ಮಾಡಲಾಗುವುದು.
-ಎಸ್.ಪಿ. ಹೇಮಲತಾ, ತೆರಿಗೆ,ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ