Advertisement

ಘನತ್ಯಾಜ್ಯಕ್ಕೆ ವಿಶೇಷ ವಿಭಾಗ ರಚನೆಗೆ ಬಿಬಿಎಂಪಿ ಚಿಂತನೆ

12:32 PM Jun 19, 2017 | |

ಬೆಂಗಳೂರು: ನಗರದಲ್ಲಿ ತ್ಯಾಜ್ಯ ಸಮಸ್ಯೆ ನಿವಾರಣೆಗೆ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿರುವ ಬಿಬಿಎಂಪಿ, ಈಗ ಘನತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ವಿಭಾಗ ಆರಂಭಿಸಲು ಚಿಂತನೆ ನಡೆಸಿದೆ. ಪಾಲಿಕೆಯಲ್ಲಿ ತ್ಯಾಜ್ಯ ನಿರ್ವಹಣೆಗಾಗಿ 2009ರಲ್ಲೇ ಪ್ರತ್ಯೇಕ ಪರಿಸರ ಕೋಶ ಎಂಬ ಹೊಸ ವಿಭಾಗ ಸ್ಥಾಪಿಸಲಾಗಿತ್ತು.

Advertisement

ಆದರೆ, ಕಾರಣಾಂತರಗಳಿಂದ 2012ರಲ್ಲಿ ಅದನ್ನು ಆರೋಗ್ಯ ವಿಭಾಗಕ್ಕೆ ಸೇರಿಸಲಾಗಿತ್ತು. ಇದರಿಂದಾಗಿ ಘನತ್ಯಾಜ್ಯ ನಿರ್ವಹಣೆ ಹೊಣೆ ಸಿವಿಲ್‌ ಎಂಜಿನಿಯರ್‌ಗಳ ಹೆಗಲಿಗೇರಿತ್ತು. ಆದರೆ, ತ್ಯಾಜ್ಯ ನಿರ್ವಹಣೆ ಉದ್ದೇಶ ಮಾತ್ರ ಈಡೇರಿರಲಿಲ್ಲ. ಈ ನಡುವೆ ವಲಯ ಮಟ್ಟದಲ್ಲಿ ಘನತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರುಗಳು ಹೆಚ್ಚಾಗಿ ಕೇಳಿ ಬಂದಿದ್ದರಿಂದ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಗೆ ಈಗ ಪ್ರತ್ಯೇಕ ವಿಭಾಗ ರಚಿಸಲು ಪಾಲಿಕೆ ಮುಂದಾಗಿದೆ. 

ಪಾಲಿಕೆಯಿಂದ ರಚಿಸಲಾಗುವ ನೂತನ ವಿಭಾಗಕ್ಕೆ ಕೇಂದ್ರ ಮತ್ತು ವಲಯ ಮಟ್ಟದ ತಂಡಗಳನ್ನು ರಚಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ. ಅದರಂತೆ, ಕೇಂದ್ರ ತಾಂತ್ರಿಕ ಕೋಶದಲ್ಲಿ ಒಬ್ಬರು ಮುಖ್ಯ ಎಂಜಿನಿಯರ್‌, 3 ಕಾರ್ಯಪಾಲಕ ಎಂಜಿನಿಯರ್‌, 3 ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಹಾಗೂ 3 ಪರಿಸರ ಎಂಜಿನಿಯರ್‌ ಸೇರಿ ಇನ್ನಿತರ 24 ಅಧಿಕಾರಿಗಳು ಇರಲಿದ್ದಾರೆ.

ಇನ್ನು ವಲಯ ಮಟ್ಟದ ಅನುಷ್ಠಾನ ಕೋಶದಲ್ಲಿ ವಾರ್ಡ್‌ ಮಟ್ಟದಲ್ಲಿ ತ್ಯಾಜ್ಯ ನಿರ್ವಹಣೆಗಾಗಿ 8 ಅಧೀಕ್ಷಕ ಎಂಜಿನಿಯರ್‌, 85 ಪರಿಸರ ಎಂಜಿನಿಯರ್‌ ಹಾಗೂ 198 ಕಿರಿಯ ಆರೋಗ್ಯ ಪರಿವೀಕ್ಷಕರನ್ನು ಹಾಗೂ ಬೃಹತ್‌ ಸಗಟು ಉತ್ಪಾದಕ ತ್ಯಾಜ್ಯ ನಿರ್ವಹಣೆಗಾಗಿ 14 ಆರೋಗ್ಯ ವೈದ್ಯಾಧಿಕಾರಿ 64 ಹಿರಿಯ ಆರೋಗ್ಯ ಪರಿವೀಕ್ಷಕರನ್ನು ನೇಮಿಸಿಕೊಳ್ಳಲು ತೀರ್ಮಾನಿಸಲಾಗಿದೆ. 

ಕಳೆದ ಬಾರಿಯ ಕೌನ್ಸಿಲ್‌ ಸಭೆಯಲ್ಲಿಯೇ ವಿಭಾಗ ರಚನೆಗೆ ಅನುಮೋದನೆ ಪಡೆಯಲು ಆಡಳಿತ ಪಕ್ಷ ಮುಂದಾಗಿತ್ತು. ಆದರೆ, ಮಹಿಳಾ ಸದಸ್ಯರು ಶಾಸಕರೊಬ್ಬರಿಂದ ತಮ್ಮ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಪ್ರತಿಭಟನೆಗೆ ಮುಂದಾದರು. ಇದರಿಂದಾಗಿ ವಿಷಯವನ್ನು ಪ್ರಸ್ತಾಪಿಸಲು ಆಡಳಿತ ಪಕ್ಷ ಮುಂದಾಗಲಿಲ್ಲ. ಮುಂದಿನ ಕೌನ್ಸಿಲ್‌ ಸಭೆಯಲ್ಲಿ ವಿಷಯ ಮಂಡನೆಯಾಗಲಿದ್ದು ಕೌನ್ಸಿಲ್‌ ಅನುಮತಿ ಪಡೆಯಲಾಗುವುದು ಎಂದು ಘನತ್ಯಾಜ್ಯ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next