Advertisement

ಮರಗಳ ಸ್ಥಳಾಂತರಕ್ಕೆ ಸಜ್ಜಾದ ಬಿಬಿಎಂಪಿ

11:51 AM Dec 19, 2017 | Team Udayavani |

ಬೆಂಗಳೂರು: ಕೇಂದ್ರೀಯ ಸದನದಿಂದ ಈಜಿಪುರ ಮುಖ್ಯರಸ್ತೆವರೆಗಿನ ಮೇಲ್ಸೇತುವೆ ಕಾಮಗಾರಿಗೆ ಚಾಲನೆ ನೀಡಿರುವ ಬಿಬಿಎಂಪಿ, ಕಾಮಗಾರಿಗೆ ಅಡ್ಡಿಯಾಗಿರುವ ಮರಗಳ ಸ್ಥಳಾಂತರಿಸಲು ಮುಂದಾಗಿದೆ. ಮುಖ್ಯಮಂತ್ರಿ ನಗರೋತ್ಥಾನ ಯೋಜನೆ ಅಡಿಯಲ್ಲಿ 203 ಕೋಟಿ ರೂ. ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಿಸಲು ಪಾಲಿಕೆ ಮುಂದಾಗಿದೆ.

Advertisement

ಆ ಹಿನ್ನೆಲೆಯಲ್ಲಿ ಮೇಲ್ಸೇತುವೆಗಾಗಿ ಕೋರಮಂಗಲ 100 ಅಡಿ ರಸ್ತೆಯಲ್ಲಿ ಕಂಬಗಳನ್ನು ನಿರ್ಮಿಸಬೇಕಿದ್ದು, ರಸ್ತೆ ವಿಭಜಕದಲ್ಲಿನ ಮರಗಳನ್ನು ಬೇರೆಡೆ ಸ್ಥಳಾಂತರಿಸಲು ಅಧಿಕಾರಿಗಳು ಪಾಲಿಕೆಯ ಅರಣ್ಯ ವಿಭಾಗದ ಅಧಿಕಾರಿಗಳಿಗೆ ಪತ್ರ ಬರೆಯಲು ಮುಂದಾಗಿದ್ದಾರೆ.

ಮೇಲ್ಸೇತುವೆಗಾಗಿ ನಿರ್ಮಾಣವಾಗುವ ವಿಸ್ತೀರ್ಣದಲ್ಲಿ ಬರುವ ಮರಗಳು ಹಾಗೂ ಸ್ಥಳಾಂತರಿಸವ ಮರಗಳನ್ನು ನೆಡಲು ಸ್ಥಳ ಗುರುತಿಸುವಂತೆ ಅರಣ್ಯ ವಿಭಾಗದ ಅಧಿಕಾರಿಗಳಿಗೆ ಶೀಘ್ರದಲ್ಲಿಯೇ ಪತ್ರ ಬರೆಯಲಾಗುವುದು ಎಂದು ಪಾಲಿಕೆಯ ಯೋಜನಾ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ. 

ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಲು ಸಿದ್ಧತೆ ನಡೆಸಿರುವ ಅಧಿಕಾರಿಗಳು ಶುಕ್ರವಾರ ಮಣ್ಣಿನ ಸದೃಢತೆ ಅಳೆಯಲು ಕೇಂದ್ರೀಯ ಸದನ ಜಂಕ್ಷನ್‌ ಹಾಗೂ ಈಜಿಪುರ ಮುಖ್ಯರಸ್ತೆಯಲ್ಲಿ ಮಣ್ಣಿನ ಪರೀಕ್ಷೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಅದರಂತೆ ಒಂದು ತಿಂಗಳ ಕಾಲ ಮಣ್ಣಿನ ಪರೀಕ್ಷೆ ನಡೆಯಲಿದ್ದು, ಜನವರಿಯಿಂದ ಕಾಮಗಾರಿ ಆರಂಭವಾಗಿ 2020ರ ವೇಳೆಗೆ ಪೂರ್ಣಗೊಳ್ಳವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೇಲ್ಸೇತುವೆಯಿಂದ ಸಮೀಪದ ಭಾಗಗಳಿಗೆ ಸಂಚರಿಸಲು ನಾಲ್ಕು ರ್‍ಯಾಂಪ್‌ಗ್ಳನ್ನು ನಿರ್ಮಿಸಲು ಉದ್ದೇಶಿಸಿದ್ದು, ದೊಮ್ಮಲೂರು, ಹೊಸೂರು ರಸ್ತೆ, ಮಡಿವಾಳ ಹಾಗೂ

Advertisement

ಕೇಂದ್ರೀಯ ಸದನ ಕಡೆಗೆ ಹೋಗುವ ವಾಹನಗಳಿಗೆ ಈ ರ್‍ಯಾಂಪ್‌ಗ್ಳು ಅನುಕೂಲವಾಗಲಿವೆ. ಯೋಜನೆಯಿಂದಾಗಿ ಈಜೀಪುರ ಜಂಕ್ಷನ್‌ನಿಂದ ಕೇಂದ್ರೀಯ ಸದನದ ಮಾರ್ಗದಲ್ಲಿನ 3 ಪ್ರಮುಖ ಹಾಗೂ 4 ಸಣ್ಣ ಜಂಕ್ಷನ್‌ಗಳಲ್ಲಿ ದಟ್ಟಣೆ ಸಮಸ್ಯೆಗೆ ಪರಿಹಾರ ದೊರೆಯಲಿದ್ದು, ಹೊಸೂರು ರಸ್ತೆ ಕಡೆಗೆ ಹೋಗುವ ವಾಹನಗಳಿಗೂ ಅನುಕೂಲವಾಗಲಿದೆ ಎಂದು ಪಾಲಿಕೆಯ ಯೋಜನೆ ವಿಭಾಗದ ಮುಖ್ಯ ಎಂಜಿನಿಯರ್‌ ಕೆ.ಟಿ.ನಾಗರಾಜ್‌ ಮಾಹಿತಿ ನೀಡಿದ್ದಾರೆ. 

ನಗರದ ಎರಡನೇ ಅತಿ ಉದ್ದದ ಮೇಲ್ಸೇತುವೆ: ಕೇಂದ್ರೀಯ ಸದನದಿಂದ ಈಜಿಪುರ ಮುಖ್ಯರಸ್ತೆಯವರೆಗೆ 2.4 ಕಿ.ಮೀ. ಉದ್ದದ ಮೇಲ್ಸೇತುವೆ ನಿರ್ಮಾಣ ಕಾರ್ಯ ಪೂರ್ಣಗೊಂಡರೆ, ನಗರದ ಎರಡನೇ ಅತಿ ಉದ್ದದ ಮೇಲ್ಸೇತುವೆ ಎಂಬ ಹೆಗ್ಗಳಿಕೆ ಮೇಲ್ಸೇತುವೆ ಪಾತ್ರವಾಗಲಿದೆ. ಬೆಂಗಳೂರು ಸ್ಥಳೀಯ ಆಡಳಿತದಿಂದ ಈ ಹಿಂದೆ ಮೈಸೂರು ರಸ್ತೆಯಲ್ಲಿ ನಿರ್ಮಿಸಿರುವ 2.65 ಕಿ.ಮೀ. ಉದ್ದದ ಮೇಲ್ಸೇತುವೆ ನಗರದ ಅತಿಉದ್ದದ ಮೇಲ್ಸೇತುವೆಯಾಗಿದೆ. 

ಸೈಕಲ್‌ ಪಥ ನಿರ್ಮಾಣ: ಕೇಂದ್ರೀಯ ಸದನದಿಂದ ಈಜಿಪುರ ಮುಖ್ಯರಸ್ತೆಯವರೆಗಿನ ಮೇಲ್ಸೇತುವೆಯ ದ್ವಿಮುಖ ಸಂಚಾರದ್ದಾಗಿದ್ದು, ಒಟ್ಟು ನಾಲ್ಕು ಪಥಗಳಿರಲಿವೆ. ಅದರೊಂದಿಗೆ ಸೈಕಲ್‌ ಸವಾರರ ಅನುಕೂಲಕ್ಕಾಗಿ ಮೇಲ್ಸೇತುವೆಯ ಎರಡೂ ಬದಿಯಲ್ಲಿ 2 ಮೀಟರ್‌ ಅಗಲದ ಸೈಕಲ್‌ ಪಥವೂ ನಿರ್ಮಾಣವಾಗಲಿದ್ದು, ಸೈಕಲ್‌ ಪಥ ಹೊಂದಿರುವ ಪ್ರಥಮ ಮೇಲ್ಸೇತುವೆ ಇದಾಗುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next