Advertisement

ಪಾಲಿಕೆಗೆ ಬರಲಿದೆ “ಇ-ಆಫೀಸ್‌’ತಂತ್ರಾಂಶ

12:20 PM Dec 09, 2018 | |

ಬೆಂಗಳೂರು: ಭ್ರಷ್ಟಾಚಾರ, ಕಡತಗಳ ನಾಪತ್ತೆ, ಅನಗತ್ಯ ವಿಳಂಬ ತಡೆಯಲು “ಇ-ಆಫೀಸ್‌’ ತಂತ್ರಾಂಶದ ಮೊರೆ ಹೋಗಿರುವ ಬಿಬಿಎಂಪಿ, ಶೀಘ್ರವೇ ಪಾಲಿಕೆಯಲ್ಲಿ ಕಾಗದ ರಹಿತ ಆಡಳಿತ ವ್ಯವಸ್ಥೆ ಜಾರಿಗೊಳಿಸಲಿದೆ. ಬಿಬಿಎಂಪಿ ಕಾಮಗಾರಿಗಳು ಹಾಗೂ ಸಾರ್ವಜನಿಕರ ಅಹವಾಲು, ಅರ್ಜಿಗಳಿಗೆ ಸಂಬಂಧಿಸಿದ ಕಡತಗಳ ವಸ್ತುಸ್ಥಿತಿ ತಿಳಿಯುವುದು ಕಷ್ಟದ ಕೆಲಸವಾಗಿದೆ.

Advertisement

ಪರಿಣಾಮ, ಕಡತ ಎಲ್ಲಿದೆ, ಯಾವ ಕಾರಣದಿಂದ ವಿಳಂಬವಾಗಿದೆ, ಅನುಮೋದನೆ ಸಿಕ್ಕಿದೆಯೇ, ಇಲ್ಲವೆ ಎಂಬ ಮಾಹಿತಿ ತಿಳಿಯಲು ಸಾಕಷ್ಟು ಶ್ರಮವಹಿಸಬೇಕಾಗಿದೆ. ಆ ಹಿನ್ನೆಲೆಯಲ್ಲಿ ಕಡತಗಳ ಮಾಹಿತಿ ಸುಲಭವಾಗಿ ತಿಳಿಸಲು ಪಾಲಿಕೆ “ಇ-ಆಫೀಸ್‌’ ತಂತ್ರಾಂಶ ಜಾರಿಗೊಳಿಸಲು ನಿರ್ಧರಿಸಿದ್ದಾರೆ. ಪಾಲಿಕೆ ಬಜೆಟ್‌ಗಳಲ್ಲಿ ಕಾಗದ ರಹಿತ ಆಡಳಿತ ಜಾರಿಗೊಳಿಸುವುದಾಗಿ ಘೋಷಿಸಲಾಗಿದ್ದೂ, ಈವರಗೆ ಅದು ಜಾರಿಯಾಗಿಲ್ಲ.

ಕಳೆದ ಬಾರಿಯ ಬಜೆಟ್‌ನಲ್ಲಿಯೂ ಕಡತಗಳ ವಸ್ತುಸ್ಥಿತಿ ತಿಳಿಸುವ “ಫೈಲ್‌ ಟ್ರ್ಯಾಕಿಂಗ್‌ ಸಿಸ್ಟಂ’ನ ಉಲ್ಲೇಖವಿದ್ದರೂ ಪ್ರಯೋಜನವಾಗಿರಲಿಲ್ಲ. ಇದೀಗ ಪಾಲಿಕೆಯ ಆಡಳಿತ ವಿಭಾಗವು ಕಡತಗಳ ನಿರ್ವಹಣೆಗೆ ತಂತ್ರಾಂಶ ಜಾರಿಗೊಳಿಸುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗುವ ಜತೆಗೆ, ಪಾಲಿಕೆಯ ಆಡಳಿತಕ್ಕೂ ವೇಗ ದೊರೆಯಲಿದೆ. 

ಕೇಂದ್ರ ಸರ್ಕಾರದ ನ್ಯಾಷನಲ್‌ ಇನ್ಫಾಮ್ಯಾಟಿಕ್ಸ್‌ ಸೆಂಟರ್‌ (ಎನ್‌ಐಸಿ) ಸಹಯೋಗದಲ್ಲಿ ಇ-ಅಫೀಸ್‌ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದ್ದು, ಮುಂದಿನ ಆರ್ಥಿಕ ವರ್ಷ ಆರಂಭವಾಗುವ ಮೊದಲೇ ತಂತ್ರಜ್ಞಾನ ಅನುಷ್ಠಾನಗೊಳಿಸಲು ಯೋಜನೆ ರೂಪಿಸಲಾಗಿದೆ. ಇದರಿಂದಾಗಿ ಪಾಲಿಕೆಯ ಆಡಳಿತದಲ್ಲಿ ಪಾರದರ್ಶಕತೆ ತರಲು ಸಹಾಯಕವಾಗಲಿದೆ ಎನ್ನಲಾಗಿದೆ. 

ಬಿಬಿಎಂಪಿಯಲ್ಲಿ ಹಿಂದೆ ಹಲವಾರು ಭ್ರಷ್ಟಾಚಾರ ಪ್ರಕರಣಗಳು ನಡೆದಿದ್ದು, ಅವುಗಳ ತನಿಖೆ ನಡೆಸಲು ಮುಂದಾದಾಗ ಕಡತ ನಾಪತ್ತೆಯಾಗಿರುವ ಪ್ರಕರಣಗಳು ವರದಿಯಾಗಿವೆ. ಜತೆಗೆ, ಲೆಕ್ಕಪರಿಶೋಧಕರು ಹತ್ತಾರು ಬಾರಿ ಕಡತಗಳನ್ನು ಸಲ್ಲಿಸುವಂತೆ ತಿಳಿಸಿದರೂ ಅಧಿಕಾರಿಗಳು ಸಲ್ಲಿಸುವುದಿಲ್ಲ.

Advertisement

ಜತೆಗೆ ಕಡತಗಳಿಗೆ ಬೆಂಕಿ ಹಚ್ಚಿದಂತಹ ಉದಾಹರಣೆಗಳೂ ಪಾಲಿಕೆಯಲ್ಲಿವೆ. ಕಡತಗಳ ನಾಪತ್ತೆಯಿಂದಾಗಿ ಭ್ರಷ್ಟಾಚಾರ ಪ್ರಕರಣಗಳನ್ನು ಬೇಧಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇ-ಆಫೀಸ್‌ ತಂತ್ರಾಂಶ ಜಾರಿಗೊಳಿಸಲು ಪಾಲಿಕೆ ಮುಂದಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಸದ್ಯ ಕಡತ ವಿಲೇವಾರಿ ವ್ಯವಸ್ಥೆ ಹೇಗಿದೆ?: ಸಾಮಾನ್ಯವಾಗಿ ಸಾರ್ವಜನಿಕರು ಅರ್ಜಿಗಳನ್ನು ಟಪಾಲ್‌ಗೆ ನೀಡುತ್ತಾರೆ. ಅಲ್ಲಿಂದ ಅರ್ಜಿಗಳು ಸಂಬಂಧಿಸಿದ ವಿಭಾಗಕ್ಕೆ ಹೋಗುತ್ತವೆ. ಅಲ್ಲಿ ಪ್ರಥಮ ದರ್ಜೆ ಸಹಾಯಕ ಪರಿಶೀಲನೆ ನಡೆಸಿ ಶರಾ ಬರೆಯಲಿದ್ದು, ಅಲ್ಲಿಂದ ಸಹಾಯಕ ಆಯುಕ್ತರು, ಉಪ ಆಯುಕ್ತರು, ವಿಶೇಷ ಆಯುಕ್ತರು ಹೀಗೆ ಕೊನೆಗೆ ಆಯುಕ್ತರ ಬಳಿಗೆ ಹೋಗುತ್ತದೆ.

ಆದರೆ, ಈ ಮಧ್ಯ ಒಮ್ಮೆ ಕಡತ ತಪ್ಪಿದರೆ ಅಥವಾ ವಿಳಂಬವಾದರೆ, ಕಡತ ಎಲ್ಲಿದೆ ಎಂಬುದನ್ನು ತಿಳಿಯಲು ಹತ್ತಾರು ವಿಭಾಗಗಳಿಗೆ ಅಲೆಯಬೇಕಾಗುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ಕಡತಗಳೇ ಕಾಣೆಯಾಗಿರುವ ಉದಾಹರಣೆಗಳು ಇವೆ. 

“ಇ-ಆಫೀಸ್‌’ ಕಾರ್ಯ ವಿಧಾನ: ಸಾರ್ವಜನಿಕರು ಅರ್ಜಿಯನ್ನು ಟಪಾಲ್‌ಗೆ ನೀಡಿದ ಕೂಡಲೇ ಅದನ್ನು ಸ್ಕ್ಯಾನ್‌ ಮಾಡಿ ಕಂಪ್ಯೂಟರ್‌ಗೆ ಹಾಕಲಾಗುತ್ತದೆ. ಅಲ್ಲಿ ಅರ್ಜಿಯು ಡಿಜಿಟಲ್‌ ಕಡತವಾಗಿ ಮಾರ್ಪಟ್ಟು ಸಂಬಂಧಿಸಿದ ಇಲಾಖೆಯ ಎಫ್ಡಿಎಗೆ ಹೋಗಲಿದ್ದು, ಸ್ವಯಂಚಾಲಿತವಾಗಿ ನೋಟ್‌ಶೀಟ್‌ ಸೃಜಿಸುತ್ತದೆ.

ಅಲ್ಲಿ ಅಧಿಕಾರಿಗಳು ಕಡತಕ್ಕೆ ಸಂಬಂಧಿಸಿದ ಶರಾ ಬರೆಯಬೇಕಾಗುತ್ತದೆ. ಆಯುಕ್ತರು ಶರಾ ಬರೆದು ಸಹಿ ಹಾಕಬೇಕಾದ ಸಂದರ್ಭದಲ್ಲಿ ಮಾತ್ರವೇ ಅದನ್ನು ಪ್ರಿಂಟ್‌ ತೆಗೆಯಲಾಗುತ್ತದೆ. ಆನಂತರವೂ ಅದನ್ನು ಸ್ಕ್ಯಾನ್‌ ಮಾಡಿ ಮತ್ತೆ ಕಂಪ್ಯೂಟರ್‌ಗೆ ಅಪ್‌ಲೋಡ್‌ ಮಾಡಲಾಗುತ್ತದೆ. 

ತಂತ್ರಾಂಶ ಬಳಕೆ ಕುರಿತು ತರಬೇತಿ: ಬಿಬಿಎಂಪಿ ಆಯುಕ್ತರು ಹಾಗೂ ವಿಶೇಷ ಆಯುಕ್ತರ (ಆಡಳಿತ) ಕಚೇರಿ ಸಿಬ್ಬಂದಿಗೆ ಇ-ಆಫೀಸ್‌ ತಂತ್ರಾಂಶ ಬಳಕೆಯ ಕುರಿತಂತೆ ಸರ್ಕಾರ ಇ-ಆಡಳಿತ ಇಲಾಖೆಯಿಂದ ತರಬೇತಿ ನೀಡಲಾಗುತ್ತಿದೆ. ತರಬೇತಿ ಮುಗಿದ ನಂತರದಲ್ಲಿ ವ್ಯವಸ್ಥೆ ಅನುಷ್ಠಾನಕ್ಕೆ ಅಗತ್ಯ ಕಂಪ್ಯೂಟರ್‌ಗಳನ್ನು ಖರೀದಿಸಿ, ವ್ಯವಸ್ಥೆ ಜಾರಿಗೊಳಿಸಲು ಪಾಲಿಕೆ ನಿರ್ಧರಿಸಿದೆ. 

ಇ-ಆಫೀಸ್‌ ತಂತ್ರಾಂಶದ ಅನುಕೂಲಗಳೇನು?
– ಯಾರು ಬೇಕಾದರೂ ಕಡಿತದ ಸ್ಥಿತಿಗತಿ ಪರಿಶೀಲಿಸಬಹುದು
– ಕಡತ ನಾಪತ್ತೆಯಾಗುವ ಪ್ರಕರಣಗಳಿಗೆ ಕಡಿವಾಣ
– ಲೆಕ್ಕಪರಿಶೋಧನೆಗೆ ಸಹಾಯಕ
– ಕಡತ ಯಾರ ಬಳಿಯಿದೆ ಎಂಬ ನಿಖರ ಮಾಹಿತಿ
– ಕಡತ ವಿಲೇವಾರಿಯಾಗದಿರಲು ಕಾರಣ
– ಯಾವ ಅಧಿಕಾರಿ ಎಷ್ಟು ದಿನ ಕಡತ ಉಳಿಸಿಕೊಂಡಿದ್ದಾರೆ ಎಂಬ ಮಾಹಿತಿ
– ಪದೇ ಪದೇ ಅಧಿಕಾರಿಗಳ ಬಳಿಗೆ ಅಲೆಯುವುದು ತಪ್ಪುತ್ತದೆ

ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಬಿಬಿಎಂಪಿ ಇ- ಆಫೀಸ್‌ ತಂತ್ರಾಂಶ ಜಾರಿಗೆ ತರಲು ಉದ್ದೇಶಿಸಿಲಾಗಿದೆ. ತಾವು ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಮೈಸೂರು ಹಾಗೂ ವಿಜಯಪುರ ಸಂಪೂರ್ಣ ಕಾಗದ ರಹಿತಗೊಳಿಸಲಾಗಿದೆ. ಅದೇ ಮಾದರಿಯಲ್ಲಿ ಪಾಲಿಕೆಯಲ್ಲಿ ಕಾಗದ ರಹಿತ ವ್ಯವಸ್ಥೆ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಈಗಾಗಲೇ ಇ-ಆಫೀಸ್‌ ತಂತ್ರಾಂಶ ಸಿದ್ಧಪಡಿಸಲಾಗಿದ್ದು, ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. 
-ರಂದೀಪ್‌, ವಿಶೇಷ ಆಯುಕ್ತರು (ಆಡಳಿತ)

* ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next