Advertisement

ಬಿಬಿಎಂಪಿ ಕಸದ ಲಾರಿಗೆ ತಿಂಗಳಲ್ಲಿ ಮೂವರು ಸಾವು: ಯಮರೂಪಿ ಲಾರಿಗೆ ಇನ್ನೆಷ್ಟು ಬಲಿಯಾಗಬೇಕು?

01:00 PM Apr 20, 2022 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ಪಾಲಿಕೆ ಕಸದ ವಾಹನ ಹರಿದು ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಸಾವಿಗೀಡಾಗುತ್ತಿರುವ ಘಟನೆಗಳು ಮುಂದುವರಿದೆ.

Advertisement

ಕಳೆದ 30 ದಿನಗಳ ಅಂತರದಲ್ಲಿ ಬಿಬಿಎಂಪಿ ಕಸದ ಲಾರಿಗೆ ಮೂವರು ಬಲಿಯಾಗಿದ್ದಾರೆ. ಕೇವಲ ತಿಂಗಳಲ್ಲಿ ಮೂವರ ಆಹುತಿ ಪಡೆದ ಪಾಲಿಕೆಯ ಕಸದ ವಾಹನಗಳ ಅವ್ಯವಸ್ಥೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿ ಘಟನೆಯಲ್ಲೂ ಚಾಲಕರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ತೋರಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದ್ದು, ಇನ್ನೆಷ್ಟು ಜನ ಹೀಗೆ ಆಹುತಿಯಾಗಬೇಕು ಎಂದು ಪಾಲಿಕೆ ವಿರುದ್ಧ ಜನರು ಹರಿಹಾಯ್ದಿದ್ದಾರೆ.

ರಸ್ತೆಗಳಲ್ಲಿ ಸೃಷ್ಟಿಯಾಗಿರುವ ಗುಂಡಿಗಳಿಗೆ ಬಿದ್ದು ವಾಹನ ಸವಾರರು ಸಾವನ್ನಪ್ಪುತ್ತಿರುವ ಬೆನ್ನಲ್ಲೇ, ಪಾಲಿಕೆಯ ಕಸ ವಿಲೇವಾರಿ ವಾಹನಗಳೂ ಕೂಡ ಜನರನ್ನು ಬಲಿಪಡೆಯುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ಭುಗಿಲೆದ್ದಿದೆ.

ಇದನ್ನೂ ಓದಿ:15 ವರ್ಷದ ಬಾಲಕನಿಂದ 13 ವರ್ಷದ ಬಾಲಕಿ ಮೇಲೆ ಎರಡು ವರ್ಷಗಳಿಂದ ಅತ್ಯಾಚಾರ

ಸೋಮವಾರ ರಾತ್ರಿ ನಾಯಂಡಹಳ್ಳಿ ಬಳಿ ರಾತ್ರಿ ಬಿಬಿಎಂಪಿ ಕಸದ ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಮೃತಪಟ್ಟ ಸ್ಟೇಟ್‌ ಬ್ಯಾಂಕ್‌ ಇಂಡಿಯಾದ ಮ್ಯಾನೇಜರ್‌ ಪದ್ಮಿನಿ (40) ಸಾವನ್ನಪ್ಪಿದ್ದು ಅವರ 4 ವರ್ಷದ ಮಗ ಯುವಾನ್‌ ಪೋಷಕರಿಲ್ಲದೆ ಅನಾಥನಾಗಿದ್ದಾನೆ. ಮೂಲತಃ ಆಂಧ್ರಪ್ರದೇಶದವರಾದ ಪದ್ಮಿನಿ (40)ಅವರು ಕಳೆದ ಐದು ವರ್ಷದ ಹಿಂದೆ ಪತಿಯನ್ನು ಕಳೆದುಕೊಂಡಿದ್ದರು. ಆ ಹಿನ್ನೆಲೆ ಯಲ್ಲಿ ರಾಜರಾಜೇಶ್ವರಿ ನಗರದಲ್ಲಿ ಪುತ್ರ ಮತ್ತು ಪೋಷಕರ ಜತೆಗೆ ವಾಸವಾಗಿದ್ದರು. ಸೋಮವಾರ ರಾತ್ರಿ 7 ರ ವೇಳೆ ಸ್ಕೂಟರ್‌ನಲ್ಲಿ ಚಂದ್ರಾ ಲೇಔಟ್‌ನ ಬ್ಯಾಂಕ್‌ನ ಶಾಖೆಯಿಂದ ಕೆಲಸ ಮುಗಿಸಿಕೊಂಡು ಹೋಗುವಾಗ ನಾಯಂಡಹಳ್ಳಿ ಬಳಿ ಬಿಬಿಎಂಪಿ ಕಸ ಸಾಗಣೆ ಲಾರಿ ಚಾಲಕನ ನಿರ್ಲಕ್ಷ್ಯ ದಿಂದ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದರು.

Advertisement

ಪಾಲಿಕೆ ಕಸದ ವಾಹನಕ್ಕೆ 3 ಬಲಿ: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಕಸದ ವಾಹನಕ್ಕೆ ಸಿಲುಕಿ ಕೇವಲ ಒಂದು ತಿಂಗಳ ಅಂತರದಲ್ಲಿ ಮೂವರು ಬಲಿಯಾಗಿದ್ದಾರೆ. ಕಳೆದ ಮಾ.21 ರಂದು ಶಾಲೆ ಹೋಗುವ 14 ವರ್ಷದ ಬಾಲಕಿ ಅಕ್ಷಯಾ ರಸ್ತೆ ದಾಟುತ್ತಿದ್ದ ವೇಳೆ ಚಾಲಕ ನಿಯಂತ್ರಣ ತಪ್ಪಿದ ಪಾಲಿಕೆ ಕಸದ ವಾಹನ ಆಕೆಯ ಮೇಲೆ ಹರಿದ ಪರಿಣಾಮ ಸಾವನ್ನಪ್ಪಿದ್ದಳು. ಈ ಘಟನೆಗೆ ಪರಿಹಾರ ನೀಡಿ ಆಕೆಯ ಪೋಷಕರನ್ನು ಸಮಾಧಾನ ಪಡಿಸಿದ ಬೆನ್ನಲ್ಲೆ ಬಾಗಲೂರಿನಲ್ಲಿ ಮಾ.31ರಂದು ರೇವಾ ಕಾಲೇಜ್‌ ಬಳಿ ಬಾಗಲೂರು ನಿವಾಸಿ ರಾಮಯ್ಯ ಮೇಲೆ ಕಸದ ಲಾರಿ ಹರಿದು ಮೃತಪಟ್ಟಿದ್ದರು.

ಈ ಎರಡೂ ಘಟನೆಗಳು ಮಾಸುವ ಮುನ್ನವ ಸೋಮವಾರ ನಾಯಂಡಹಳ್ಳಿಯಲ್ಲಿ ಕಸದ ಲಾರಿ ಹರಿದು ಪದ್ಮಿನಿ ಸಾವನ್ನಪ್ಪಿದ್ದಾರೆ. ಅಪಘಾತದ ಬಳಿಕ ಚಾಲಕ ಸ್ಥಳದಲ್ಲೆ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಘಟನೆಯ ಹಿನ್ನೆಲೆಯಲ್ಲಿ ಬ್ಯಾಟರಾಯನಪುರ ಸಂಚಾರಿ ಠಾಣೆ ಪೊಲೀಸರು ಲಾರಿ ಜಪ್ತಿ ಮಾಡಿದ್ದು ಲಾರಿ ಚಾಲಕನ ಬಂಧನಕ್ಕೆ ಬಲೆ ಬೀಸಿದ್ದಾರೆ.

ಪತಿ-ಪತ್ನಿ ದುರ್ಮರಣ, 4ವರ್ಷದ ಪುತ್ರ ಅನಾಥ: ಪದ್ಮಿನಿ ಸೋಮವಾರ ರಾತ್ರಿ ಕೆಲಸ ಮುಗಿಸಿ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಕಸದ ವಾಹನ ಚಕ್ರಗಳು ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದರು. 2010ರಲ್ಲಿ ಕೆಲಸದ ಮೇಲೆ ನಗರಕ್ಕೆ ವರ್ಗಾವಣೆಯಾಗಿದ್ದ ಪದ್ಮಿನಿ ಅವರ ಪತಿ ಒಳಾಂಗಣ ವಿನ್ಯಾಸಕಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಐದು ವರ್ಷಗಳ ಹಿಂದೆ ಒಳಾಂಗಣ ವಿನ್ಯಾಸದ ಕೆಲಸದ ವೇಳೆ ತಲೆ ಮೇಲೆ ಕಲ್ಲು ಬಿದ್ದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಪತಿ ಸಾವನ್ನಪ್ಪಿದಾಗ ಗರ್ಭಿಣಿಯಾಗಿದ್ದ ಪದ್ಮಿನಿ ಗಂಡು ಮಗು ಜನಿಸಿದ ಬಳಿಕ ಪತಿ ಮನೆಯನ್ನು ಬಿಟ್ಟು ಪೋಷಕರ ಜತೆಗೆ ರಾಜರಾಜೇಶ್ವರಿ ನಗರದಲ್ಲಿ ನೆಲೆಸಿದ್ದರು ಎಂದು ಮೂಲಗಳು ತಿಳಿಸಿವೆ. ಜನಿಸುವ ಮೊದಲೇ ತಂದೆಯನ್ನು ಕಳೆದುಕೊಂಡಿದ್ದ ಮಗ ಯುವಾನ್‌ ನಾಲ್ಕು ವರ್ಷಕ್ಕೆ ಅಮ್ಮನ ಪ್ರೀತಿಯನ್ನು ಕಳೆದುಕೊಂಡು ಅನಾಥನಾಗಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next