ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸದಾಗಿ 1,322 ಜನ ಆಶಾ ಕಾರ್ಯಕರ್ತೆಯರ ಹುದ್ದೆ ಮಂಜೂರು ಮಾಡಿ ಸರ್ಕಾರ ಆದೇಶ ಮಾಡಿದೆ. ರಾಜ್ಯದ 11 ಮಹಾನಗರ ಪಾಲಿಕೆಗಳಿಗೆ 1,786 ಆಶಾ ಕಾರ್ಯಕರ್ತೆಯರ ಹುದ್ದೆ ಮುಂಜೂರು ಮಾಡಲಾಗಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ಈ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಬಿಬಿಎಂಪಿಯಲ್ಲಿ 1,229 ಮಂದಿ ಆಶಾ ಕಾರ್ಯಕರ್ತೆಯರು ಕಾರ್ಯ ನಿರ್ವಹಿಸುತ್ತಿದ್ದು, ಈಗ 1,322 ಜನ ಸೇರ್ಪಡೆ ಆಗಿದ್ದು, ಆಶಾ ಕಾರ್ಯಕರ್ತೆಯರ ಸಂಖ್ಯೆ 2,551ಕ್ಕೆ ಏರಿಕೆಯಾಗಿದೆ. 5 ಸಾವಿರ ಜನಸಂಖ್ಯೆಗೆ ಒಬ್ಬರು ಆಶಾ ಕಾರ್ಯಕರ್ತೆ ಲೆಕ್ಕದಲ್ಲಿ ಹೊಸ ನೇಮಕಾತಿ ಆಗಿದೆ.
ರಾಜ್ಯದ 11 ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 1.90 ಕೋಟಿ ಜನಸಂಖ್ಯೆ ಇದ್ದು, ಈಗ ಮಂಜೂರು ಮಾಡಲಾದ 1,786 ಹೊಸ ಹುದ್ದೆಗಳಿಂದ ಸರ್ಕಾರಕ್ಕೆ ವಾರ್ಷಿಕ 23.58 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯಲ್ಲಿ ಪ್ರಸ್ತುತ ರಾಜ್ಯದಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನೊಳಗೊಂಡಂತೆ 10 ಸಾವಿರ ಜನಸಂಖ್ಯೆಗೆ ಒಬ್ಬರು ಆಶಾ ಕಾರ್ಯಕರ್ತೆಯಂತೆ ಒಟ್ಟು 42,524 ಮಂದಿ ಆಶಾ ಕಾರ್ಯರ್ತೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಪಾಲಿಕೆಗಳ ವ್ಯಾಪ್ತಿಯಲ್ಲಿ ಪ್ರತಿ 5 ಸಾವಿರ ಜನಸಂಖ್ಯೆಗೆ ಒಬ್ಬರು ಆಶಾ ಕಾರ್ಯರ್ತೆಯರ ನೇಮಕ ಮಾಡಬೇಕು ಎಂದು ಇತ್ತೀಚೆಗೆ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಸರ್ಕಾರಕ್ಕೆ ಮನವಿ ಮಾಡಿದ್ದರು.
………………………………………………………………………………………………………………………………………………………
ಜನವರಿಯಿಂದ ಜುಲೈವರೆಗೆ 35,307 ಜನರ ಮರಣ : ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಜನವರಿಯಿಂದ ಜುಲೈವರೆಗೆ 35,307 ಜನ ಮೃತಪಟ್ಟಿದ್ದಾರೆ ಎಂದು ಬಿಬಿಎಂಪಿ (ಸಾಂಖ್ಯಿಕ) ವಿಭಾಗ ತಿಳಿಸಿದೆ. ಮಾಜಿ ಸಚಿವ ಎಚ್. ಕೆ.ಪಾಟೀಲ್ ಅವರು ಇತ್ತೀಚೆಗೆ ಬಿಡುಗಡೆ ಮಾಡಿದ್ದ ಪತ್ರಿಕಾ ಹೇಳಿಕೆ ಪ್ರಕಾರ ನಗರದಲ್ಲಿ ಜನವರಿ-ಜುಲೈವರೆಗೆ 49,135 ಸಾವಿನ ಪ್ರಕರಣಗಳು ವರದಿಯಾಗಿವೆ ಎಂದು ಹೇಳಲಾಗಿತ್ತು.
ಇನ್ನು ಕಳೆದ ವರ್ಷ ಇದೇ ಅವಧಿಯಲ್ಲಿ 37,001 ಸಾವಿನ ಪ್ರಕರಣಗಳು ವರದಿಯಾಗಿವೆ. ಅಂದರೆ, ಈ ವರ್ಷ 12,134 ಸಾವು ಪ್ರಕರಣ ಹೆಚ್ಚಾಗಿವೆ ಎಂದು ಉಲ್ಲೇಖೀಸಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಾಲಿಕೆ ಇ -ಜನ್ಮ ತಂತ್ರಾಂಶದ ಮಾಹಿತಿ ಅನ್ವಯ ಕಳೆದ ವರ್ಷ ಜನವರಿಯಿಂದ ಜುಲೈ ವರೆಗೆ ನಗರದಲ್ಲಿ 37,004 ಸಾವಿನ ಪ್ರಕರಣ ವರದಿಯಾಗಿವೆ, ಪ್ರಸಕ್ತ ವರ್ಷ ಇದೇ ಅವಧಿಯಲ್ಲಿ 35,307 ಸಾವಿನ ಪ್ರಕರಣ ವರದಿಯಾಗಿವೆ. ಆದರೆ, ಎಚ್. ಕೆ.ಪಾಟೀಲ್ ಅವರು ನೀಡಿರುವ ಮಾಹಿತಿಯ ಮೂಲ ಯಾವುದು ಎಂಬುದು ಸ್ಪಷ್ಟತೆ ಇಲ್ಲ. ಪಾಲಿಕೆಯ ಜನನ – ಮರಣ ಮುಖ್ಯ ನೋಂದಣಾಧಿಕಾರಿ ಕಚೇರಿಯ ಜಾಲತಾಣದ ಮಾಹಿತಿ ನಿಖರವಾಗಿದೆ ಎಂದು ತಿಳಿಸಿದೆ.