ಬ್ಯಾಡಗಿ: ರೈತರೇ ಕಾರ್ಯನಿರ್ವಹಿಸುತ್ತಿರುವ ಸಹಕಾರಿ ಬ್ಯಾಂಕ್‌ಗಳು (ಫಾರ್ಮರ್ಸ್ ಸೊಸೈಟಿ) ದೇಶದ ಆರ್ಥಿಕ ಅಭ್ಯುದಯಕ್ಕೆ ಭದ್ರ ಬುನಾದಿ ಹಾಕಿವೆ. ಆದರೆ, ಇಡೀ ಬ್ಯಾಂಕ್ ವ್ಯವಸ್ಥೆಯನ್ನು, ಸಂಸ್ಥೆಯನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡಿರುವ ಕೆಲವರಿಂದ ಅವುಗಳು ವಿನಾಶದ ಅಂಚಿಗೆ ಬಂದಿರುವುದು ಖೇದಕರ ಸಂಗತಿ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಆತ್ಮನಿರ್ಭರ ಭಾರತ ಯೋಜನೆಯಡಿ ನಬಾರ್ಡ್ ಪ್ರಾಯೋಜಕತ್ವದಲ್ಲಿ ಪಟ್ಟಣದ ವ್ಯವಸಾಯೋತ್ಪನ್ನ ಸೇವಾ ಸಹಕಾರಿ(ವಿಎಸ್ ಎಸ್)ಬ್ಯಾಂಕ್ 65 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ಗೋದಾಮು ಹಾಗೂ ವಾಣಿಜ್ಯ ಸಂಕೀರ್ಣ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಆತ್ಮನಿರ್ಭರ ಯಶಸ್ವಿ ಹೆಜ್ಜೆ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿದ ಆತ್ಮನಿರ್ಭರ ಭಾರತ ಅತ್ಯಂತ ಯಶಸ್ಸಿನತ್ತ ದಾಪುಗಾಲು ಹಾಕಿದೆ. ಹೀಗಾಗಿ, ದೇಶದ ರೈತರ ಸಹಕಾರಿ ಬ್ಯಾಂಕ್‌ಗಳನ್ನು ಸ್ವಾಯತ್ವವಾಗಿ ಕಾರ್ಯ ನಿರ್ವಹಿಸುವುದು ಸೇರಿದಂತೆ ಸ್ವಂತ ನಿವೇಶನ ಹೊಂದಿರುವ ಕಡೆಗಳಲ್ಲಿ ಮೇಲ್ದರ್ಜೆಗೇರಿಸಲು ಅನುದಾನ ನೀಡಿದ್ದು ಅತ್ಯಂತ ಸ್ತುತ್ಯರ್ಹ ಹಾಗೂ ಸ್ವಾಗತಾರ್ಹ ಕ್ರಮವಾಗಿದೆ ಎಂದರು.
ಪ್ರಯೋಜನ ಪಡೆದುಕೊಳ್ಳಿ: ಸದರಿ ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಹಣ ಹೂಡಿಕೆ ಮಾಡುವ ಮೂಲಕ ಕಡಿಮೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಸಹಕಾರಿ ಬ್ಯಾಂಕ್‌ಗಳನ್ನು ಆದಾಯಕ್ಕೆ ತರುವುದೂ ಸಹ ನಿಮ್ಮೆಲ್ಲರ ಕೈಯಲ್ಲಿದೆ. ಸದರಿ ವಿಎಸ್ ಎಸ್ ಬ್ಯಾಂಕ್ ವ್ಯಾಪ್ತಿಗೆ ಬರುವ ಎಲ್ಲ ರೈತರು ಇದರ ಪ್ರಯೋಜನ ಪಡೆದುಕೊಳ್ಳುವ ಮೂಲಕ ಸರ್ಕಾರದ ಮೂಲ ಉದ್ದೇಶಕ್ಕೆ ಸಹಕರಿಸುವಂತೆ ಮನವಿ ಮಾಡಿದರು.
ಸಹಕಾರಿ ವ್ಯವಸ್ಥೆ ಗಟ್ಟಿಗೊಳ್ಳಲಿ: ಕಾಂಗ್ರೆಸ್ ಮುಖಂಡ ಎಸ್.ಆರ್.ಪಾಟೀಲ ಮಾತನಾಡಿ, ಸಹಕಾರಿ ವ್ಯವಸ್ಥೆ ಗಟ್ಟಿಗೊಳ್ಳಬೇಕಾದಲ್ಲಿ ರೈತರು ಇದರಲ್ಲಿ ಸಂಪೂರ್ಣವಾಗಿ ಹಣ ಹೂಡಿಕೆ ಮಾಡಬೇಕಾಗುತ್ತದೆ. ಜಿಲ್ಲೆಗೆ ಡಿಸಿಸಿ ಬ್ಯಾಂಕ್ ಸ್ಥಾಪನೆಯಾಗಬೇಕೆಂಬುದು ಜಿಲ್ಲೆಯ ರೈತರು ಮತ್ತು ಎಲ್ಲ ವಿಎಸ್‌ಎಸ್ ಬ್ಯಾಂಕ್ ಗಳ ಒತ್ತಾಸೆಯಾಗಿತ್ತು. ಆದರೆ, ಇಚ್ಛಾಶಕ್ತಿ ಕೊರತೆಯಿಂದ ಇಂದಿಗೂ ಸಾಧ್ಯವಾಗಿಲ್ಲ. ಹೀಗಾಗಿ, ರೈತರು ಸಾಲ ಸೌಲಭ್ಯದಿಂದ ವಂಚಿತರಾಗಿದ್ದು, ಈ ಕುರಿತು ಆಡಳಿತಾರೂಢ ಸರ್ಕಾರಗಳು ಚಿಂತನೆ ನಡೆಸಬೇಕಾಗಿದೆ ಎಂದರು.
ಮುಪ್ಪಿನೇಶ್ವರ ಮಠದ ಚನ್ನಮಲ್ಲಿಕಾರ್ಜುನ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷೆ ಫಕ್ಕೀರಮ್ಮ ಛಲವಾದಿ, ಉಪಾಧ್ಯಕ್ಷೆ ಮಲ್ಲಮ್ಮ ಪಾಟೀಲ, ಸದಸ್ಯ ಚಂದ್ರಣ್ಣ ಶೆಟ್ಟರ, ವಿಎಸ್‌ಎಸ್ ಬ್ಯಾಂಕ್ ಅಧ್ಯಕ್ಷ ಚಿಕ್ಕಪ್ಪ ಛತ್ರದ, ಮಾಜಿ ಅಧ್ಯಕ್ಷ ಗಂಗಣ್ಣ ಎಲಿ, ಉಪಾಧ್ಯಕ್ಷ ಕರಬಸಪ್ಪ ಬೆನಕನಕೊಂಡ, ಸದಸ್ಯರಾದ ಚನ್ನಬಸಪ್ಪ ಎಲಿ, ಉಮೇಶ ಸಂಕಣ್ಣನವರ ಚಂದ್ರಶೇಖರ ಛತ್ರದ, ರಾಜಶೇಖರಗೌಡ ಚನ್ನಗೌಡ್ರ, ಪೀರಸಾಬ್ ಮೆಡ್ಲೆರಿ, ಸಂತೋಷ
ಬಾಣಾಪೂರ, ಭಾಷಾಸಾಬ್ ಕಬ್ಬೂರ, ನೀಲಮ್ಮ ಹೊಸ್ಮನಿ, ಮಲ್ಲವ್ವ ಸಂಕಣ್ಣನವರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಪ್ರಕಾಶ ಗಣೇಶ್ಕರ, ಕೆಸಿಸಿ ಬ್ಯಾಂಕ್ ನಿರೀಕ್ಷಕ ಕೆ.ಬಿ.ಹೊನ್ನತ್ತೇರ, ವಿಎಸ್‌ಎಸ್ ಸಿಇಒ ರಾಜೇಂದ್ರ ಹಿರೇಮಠ ಉಪಸ್ಥಿತರಿದ್ದರು. ಪೂಜಾ ಸೋಗಿ ಸ್ವಾಗತಿಸಿ, ಕಿರಣ ಸೋಗಿ ವಂದಿಸಿದರು.