ಕೋಲ್ಕತಾ :5 ನೇ ಬಾರಿ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಸೋತು ಮತ್ತೊಮ್ಮೆ ಚೋಕರ್ಸ್ ಎನಿಸಿಕೊಂಡಿದೆ. ಆಸ್ಟ್ರೇಲಿಯ ವಿರುದ್ಧ ಸೋಲಿನ ಬಳಿಕ ದುರದೃಷ್ಟಕ್ಕೆ ಸಿಲುಕಿದ ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬ ಬಾವುಮಾ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ.
ದಕ್ಷಿಣ ಆಫ್ರಿಕಾ 1992 ರಲ್ಲಿ ಸೆಮಿಫೈನಲ್ ನಲ್ಲಿ ಸಿಡ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ 19 ರನ್ ಗಳ ಸೋಲು ಅನುಭವಿಸಿತ್ತು. ಆಬಳಿಕ 1999ರಲ್ಲಿ ಬರ್ಮಿಂಗ್‌ಹ್ಯಾಮ್ ನಲ್ಲಿ ಆಸ್ಟ್ರೇಲಿಯ ವಿರುದ್ದದ ಪಂದ್ಯ ಟೈ ಆಗಿತ್ತು. ಆ ಪಂದ್ಯದಲ್ಲಿ ಆಸ್ಟ್ರೇಲಿಯ ಲೆಕ್ಕಾಚಾರದ ಮೂಲಕ ಫೈನಲ್ ಪ್ರವೇಶಿಸಿ ಕಪ್ ಗೆದ್ದಿತ್ತು. 2007 ರಲ್ಲಿ ಆಸ್ಟ್ರೇಲಿಯ ವಿರುದ್ಧ ಗ್ರಾಸ್ ಐಲೆಟ್ ನಲ್ಲಿ 7 ವಿಕೆಟ್ ಸೋಲು ಅನುಭವಿಸಿ ಆಘಾತಕ್ಕೆ ಗುರಿಯಾಗಿತ್ತು. 2015 ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಆಕ್ಲೆಂಡ್ ನಲ್ಲಿ 4 ವಿಕೆಟ್ ಸೋಲು ಅನುಭವಿಸಿ ಚೋಕರ್ಸ್ ಎಂದು ಮತ್ತೆ ಕರೆಸಿಕೊಳ್ಳುವ ಸ್ಥಿತಿ ಹರಿಣಗಳ ಪಾಲಿಗೆ ಬಂದೊದಗಿತ್ತು.
ವಿಶ್ವಕಪ್ ನ ಆರಂಭದಿಂದಲೂ ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬ ಬವುಮಾ ಅವರ ನಾಯಕತ್ವದ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳು ಮೂಡಿದ್ದವು. ಹಲವು ವಿಚಾರಗಳಿಗೆ ಸಂಬಂಧಿಸಿ ನಿರಂತರವಾಗಿ ಟ್ರೋಲ್ ಗಳಿಗೆ ಆಹಾರವಾಗುತ್ತಲೇ ಬಂದಿದ್ದರು. ನೆದರ್ ಲ್ಯಾಂಡ್ಸ್ ಎದುರಿನ ಸೋಲಿನ ಬಳಿಕ ಇನ್ನಷ್ಟು ಟೀಕೆಗಳು ಬಂದಿದ್ದವು.
ಸದ್ಯ ಬವುಮಾ ನಾಯಕತ್ವವೇ ಅತೀ ಹೆಚ್ಚು ಟೀಕೆಗೆ ಒಳಗಾಗುತ್ತಿದ್ದು, ವಿಶ್ವಕಪ್‌ನಲ್ಲಿ ಅವರ ಬ್ಯಾಟ್ ಸದ್ದು ಮಾಡದಿರುವ ಬಗ್ಗೆಯೂ ಚರ್ಚಿಸಲಾಗುತ್ತಿದೆ. ಕೈಬಿಟ್ಟ ಕ್ಯಾಚ್‌ಗಳು ಚರ್ಚೆಗೆ ಗ್ರಾಸವಾಗಿವೆ. ಎಲ್ಲಾ ವಿಷಯಗಳನ್ನು ಒಟ್ಟುಗೂಡಿ ದಕ್ಷಿಣ ಆಫ್ರಿಕಾದ ನಿರಾಶೆಗೊಂಡ ಕ್ರಿಕೆಟ್ ಅಭಿಮಾನಿಗಳ ಆಕ್ರೋಶಕ್ಕೂ ಸಿಲುಕಿದೆ.
ವಿಶ್ವಕಪ್‌ನಲ್ಲಿ ಕಳಪೆ ಫಾರ್ಮ್ ಮುಂದುವರಿಸಿದ ಬವುಮಾ 8 ಇನ್ನಿಂಗ್ಸ್‌ಗಳಲ್ಲಿ ಕೇವಲ 145 ರನ್‌ಗಳನ್ನು ಮಾತ್ರ ಗಳಿಸಿರುವುದೂ ಟೀಕೆಗಳಿಗೆ ಪ್ರಮುಖ ಆಸ್ಪದವಾಗಿದೆ, ಲೀಗ್ ಹಂತದ ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ 35 ರನ್ ಗರಿಷ್ಠ ಸ್ಕೋರ್ ಆಗಿದೆ.
33 ರ ಹರೆಯದ ಬವುಮಾ 2021ರಲ್ಲಿ ದಕ್ಷಿಣ ಆಫ್ರಿಕಾದ ಸೀಮಿತ ಓವರ್‌ಗಳ ತಂಡದ ನಾಯಕರಾಗಿ ಆಯ್ಕೆಯಾಗಿದ್ದರು. ಕ್ವಿಂಟನ್ ಡಿ ಕಾಕ್ ಅವರಿಂದ ನಾಯಕತ್ವವನ್ನು ವಹಿಸಿಕೊಂಡಿದ್ದರು. ದಕ್ಷಿಣ ಆಫ್ರಿಕಾದ ಖಾಯಂ ನಾಯಕನಾಗಿ ನೇಮಕಗೊಂಡ ಕಪ್ಪು ವರ್ಣೀಯ ತಂಡದ ಮೊದಲ ಆಫ್ರಿಕನ್ ಆಟಗಾರ ಎನಿಸಿಕೊಂಡಿದ್ದರು.