ಎರಡು ವರ್ಷದೊಳಗೆ ಪೂರ್ತಿಗೊಳಿಸಲು ಖಡಕ್ ಆದೇಶ
ಕಾಸರಗೋಡು: ಕಾಸರಗೋಡು ನಗರ ಸಹಿತ ಕೆಲವೊಂದು ಗ್ರಾಮ ಪಂಚಾಯತ್ ಪ್ರದೇಶಗಳಿಗೆ ನೀರು ಪೂರೈಸುವ ಬಾವಿಕ್ಕೆರೆ ಯೋಜನೆ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಶೀಘ್ರವೇ ಪೂರ್ತಿಗೊಳಿಸಲು ಕೇರಳ ಸರಕಾರ ತೀರ್ಮಾನಿಸಿದೆ. ಇದರಂತೆ ಯೋಜನೆ ಮೊತ್ತವನ್ನು 27.75 ಕೋಟಿ ರೂಪಾಯಿಗೆ ಹೆಚ್ಚಿಸಿದ್ದು, ಮುಂದಿನ ಎರಡು ವರ್ಷಗಳೊಳಗೆ ಪೂರ್ತಿಗೊಳಿಸುವಂತೆ ಖಡಕ್ ಆದೇಶ ನೀಡಿದೆ. ಆರಂಭದಲ್ಲಿ ಕೇವಲ 28 ಲಕ್ಷ ರೂಪಾಯಿ ಅಂದಾಜಿಸಲಾಗಿದ್ದ ಯೋಜನೆ ಮೊತ್ತ ಹಲವು ಬಾರಿ ಹೆಚ್ಚಳ ಮಾಡಿದ್ದು ಇದೀಗ ಈ ಮೊತ್ತ 27.75 ಕೋಟಿ ರೂಪಾಯಿಗೇರಿದೆ. ಬಾವಿಕ್ಕೆರೆ ರೆಗ್ಯೂಲೇಟರ್ ಕಂ ಬ್ರಿಡ್ಜ್ ನಿರ್ಮಾಣ ಯೋಜನೆಯ ಬಾಕಿ ಕಾಮಗಾರಿಗಾಗಿ ನೂತನ ಎಸ್ಟಿಮೇಟ್‌ಗೆ ಆಡಳಿತಾನುಮತಿಯನ್ನು ರಾಜ್ಯ ಜಲ ಸಂಪನ್ಮೂಲ ಇಲಾಖೆಯ ಮೈನರ್ ಇರಿಗೇಶನ್ ವಿಭಾಗ ನೀಡಿದ್ದಾಗಿ ಶಾಸಕ ಎನ್.ಎ. ನೆಲ್ಲಿಕುನ್ನು ತಿಳಿಸಿದ್ದಾರೆ.
ಕಾಸರಗೋಡು ನಗರಸಭೆ, ಚೆಂಗಳ, ಮೊಗ್ರಾಲ್ ಪುತ್ತೂರು, ಮುಳಿಯಾರು, ಚೆಮ್ನಾಡ್ ಪಂಚಾಯತ್‌ಗಳಿಗೆ ಕುಡಿಯುವ ನೀರು ವಿತರಣೆಗಾಗಿ ನೀರನ್ನು ಸಂಗ್ರಹಿಸಲು ಪಯಸ್ವಿನಿ ನದಿ ಮತ್ತು ಕರಿಚ್ಚೇರಿ ನದಿಗಳ ಸಮೀಪ ಪ್ರದೇಶದ 407 ಹೆಕ್ಟರ್ ಭೂಪ್ರದೇಶಕ್ಕೆ ನೀರಾವರಿ ಸೌಕರ್ಯ ಉತ್ತಮ ಪಡಿಸಲು ಈ ಯೋಜನೆಯಿಂದ ಸಾಕಷ್ಟು ಪ್ರಯೋಜನವಾಗಲಿದೆ. ಈ ಹಿಂದೆ ಹಲವು ಬಾರಿ ಈ ಮಹತ್ವಾಕಾಂಕ್ಷೆಯ ಯೋಜನೆಗೆ ಆಡಳಿತಾನುಮತಿಯೂ, ಟೆಂಡರ್ ಪ್ರಕ್ರಿಯೆಯೂ ಪೂರ್ತಿಯಾಗಿದ್ದರೂ ಈ ವರೆಗೆ ಕೇವಲ ಶೇ.30 ರಷ್ಟು ಮಾತ್ರವೇ ಕಾಮಗಾರಿ ಪೂರ್ತಿಗೊಳಿಸಲು ಸಾಧ್ಯವಾಗಿದೆ. ಇದಕ್ಕಾಗಿ ಈಗಾಗಲೇ 4.41 ಕೋಟಿ ರೂಪಾಯಿ ವ್ಯಯಿಸಲಾಗಿದೆ. ಎರಡು ವರ್ಷಗಳೊಳಗೆ ನಿರ್ಮಾಣ ಕಾಮಗಾರಿ ಪೂರ್ತಿಗೊಳಿಸಬೇಕೆಂಬ ಖಡಕ್ ಆದೇಶದೊಂದಿಗೆ ನೂತನವಾಗಿ ಟೆಂಡರ್ ಕರೆಯಲಾಗಿದೆ. 2017-18 ನೇ ಹಣಕಾಸು ವರ್ಷದೊಳಗೆ ಕಾಮಗಾರಿಯ ಶೇ.40 ಪೂರ್ತಿಗೊಳಿಸ ಬೇಕು. ಉಳಿದ ಕಾಲಾವಧಿಯಲ್ಲಿ ಶೇ.60 ಕಾಮಗಾರಿ ಪೂರ್ತಿಗೊಳಿಸುವಂತೆ ಟೆಂಡರ್ ಪ್ರಕ್ರಿಯೆಯಲ್ಲಿ ನಿರ್ದೇಶಿಸಲಾಗಿದೆ.
ಬಾವಿಕ್ಕೆರೆ ಕುಡಿಯುವ ನೀರು ಯೋಜನೆ ಹಲವು ವರ್ಷಗಳಿಂದ ಕಾಮಗಾರಿ ಪೂರ್ತಿಯಾಗದಿರುವುದರಿಂದ ಪ್ರತಿ ವರ್ಷವೂ ಮಾರ್ಚ್, ಎಪ್ರಿಲ್, ಮೇ, ಜೂನ್ ತಿಂಗಳಲ್ಲಿ ನಳ್ಳಿ ನೀರು ಬಳಸುವವರು ಉಪ್ಪು ನೀರನ್ನು ಕುಡಿಯಬೇಕಾಗಿ ಬಂದಿತ್ತು. 2018ನೇ ವರ್ಷದ ಮಾರ್ಚ್, ಎಪ್ರಿಲ್, ಮೇ, ಜೂನ್ ತಿಂಗಳಲ್ಲಿ ಇದೇ ಸಮಸ್ಯೆಯನ್ನು ಅನುಭವಿಸಬೇಕಾಗಿ ಬರಲಿದೆ. ಪ್ರತೀ ವರ್ಷವೂ ಕಾಸರಗೋಡು ನಗರ ಮತ್ತು ಸಮೀಪದ ಗ್ರಾಮ ಪಂಚಾಯತ್‌ಗಳಲ್ಲಿ ಉಪ್ಪು ನೀರು ಕುಡಿಯುವ ಗತಿಗೇಡು ಉಂಟಾಗುತ್ತಿದ್ದು, ಈ ಸಮಸ್ಯೆ ಪರಿಹರಿಸಲು ತುರ್ತು ಕ್ರಮ ತೆಗೆದುಕೊಳ್ಳುವಂತೆ ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ನಿರಂತರವಾಗಿ ವಿಧಾನಸಭಾ ಅಧಿವೇಶನ ಸಂದರ್ಭದಲ್ಲಿ ಬೇಡಿಕೆಯನ್ನು ಮುಂದಿಟ್ಟಿದ್ದರು.
ಪ್ರತಿ ವರ್ಷವೂ ಉಪ್ಪು ನೀರು ಕುಡಿಸುತ್ತಿರುವ ಸಂಬಂಧಪಟ್ಟವರ ಕ್ರಮವನ್ನು ಪ್ರತಿಭಟಿಸಿ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಧರಣಿ ಮೊದಲಾದವು ನಡೆಯುತ್ತಲೇ ಬಂದಿತ್ತು. ಆದರೆ ಬಾವಿಕ್ಕೆರೆ ಕುಡಿಯುವ ನೀರು ಯೋಜನೆ ಸಮಸ್ಯೆಗೆ ಈ ವರೆಗೂ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ನಿರಂತರವಾಗಿ ವಿಧಾನಸಭೆಯ ಅಧಿವೇಶನ ಸಂದರ್ಭದಲ್ಲಿ ಬೇಡಿಕೆಯನ್ನು ಮುಂದಿಟ್ಟಿದ್ದ ಶಾಸಕ ಎನ್.ಎ.ನೆಲ್ಲಿಕುನ್ನು ಅವರು ಈ ಬೇಡಿಕೆಯನ್ನು ಅವಗಣಿಸಿದರೆ ವಿಧಾನಸಭಾ ಅಂಗಣದಲ್ಲಿ ಸತ್ಯಾಗ್ರಹ ಹೂಡುವುದಾಗಿಯೂ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ಹೊಸದಾಗಿ ಎಸ್ಟಿಮೇಟ್ ಸಿದ್ಧಪಡಿಸಿ ಶೀಘ್ರವೇ ಉಳಿದ ಕಾಮಗಾರಿಗಾಗಿ ಆಡಳಿತಾನುಮತಿ ನೀಡುವುದಾಗಿ ನೀರಾವರಿ ಸಚಿವರು ವಿಧಾನಸಭೆಯಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಅವರಿಗೆ ಭರವಸೆ ನೀಡಿದ್ದರು. ಇದೀಗ ಹೆಚ್ಚಿನ ಮೊತ್ತ ನೀಡಿರುವುದರಿಂದ ಇನ್ನಾದರೂ ಬಾವಿಕ್ಕೆರೆ ಕುಡಿಯುವ ನೀರು ಯೋಜನೆ ಪೂರ್ತಿಯಾಗಬಹುದೆಂಬ ನಿರೀಕ್ಷೆ ಸ್ಥಳೀಯರದ್ದು.
ಮರಳು ಚೀಲ ತುಂಬಿ ನೀರಿಗೆ ತಡೆ
ಪ್ರತಿ ವರ್ಷವೂ ಬೇಸಗೆ ಕಾಲದಲ್ಲಿ ಪಯಸ್ವಿನಿ ಹೊಳೆಗೆ ಗೋಣಿ ಚೀಲಗಳಲ್ಲಿ ಮರಳು ತುಂಬಿ ಅಡ್ಡವಿರಿಸಿ ನೀರನ್ನು ತಡೆಯುವ ಪ್ರಕ್ರಿಯೆ ನಡೆಯುತ್ತಿದ್ದು, ಇದಕ್ಕಾಗಿ ಲಕ್ಷಾಂತರ ರೂಪಾಯಿ ವ್ಯಯವಾಗತ್ತಿತ್ತು. ಈ ಗೋಣಿ ಚೀಲ ಕೆಲವೇ ದಿನವಿದ್ದು ನೀರಿನಲ್ಲಿ ಕೊಚ್ಚಿ ಹೋಗುತ್ತಿತ್ತು. ಇದರಿಂದಾಗಿ ಸಮುದ್ರ ನೀರು ಹೊಳೆಗೆ ಸೇರಿ ಪ್ರತೀ ವರ್ಷವೂ ಉಪ್ಪು ನೀರು ಕುಡಿಯಬೇಕಾದ ಅವಸ್ಥೆ ಕಾಸರಗೋಡಿನ ಜನರ ಪಾಲಿಗೆ ದುರಂತವೇ ಆಗಿದೆ.