Advertisement

ಬಾವಿಗಿಳಿಯುತ್ತಿದೆ ಒಳಚರಂಡಿ ತ್ಯಾಜ್ಯ: ಜಲ ಮಾಲಿನ್ಯ

03:11 PM Apr 14, 2017 | |

ಕಾರ್ಕಳ: ಇಲ್ಲಿ ಒಳಚರಂಡಿಯ ತ್ಯಾಜ್ಯ ಬಾವಿಗಿಳಿದು ಜೀವ ಜಲವೆಲ್ಲ ಚರಂಡಿಯ ನೀರಾಗುತ್ತಿದೆ. ಸ್ಥಳೀಯರ ಬಾವಿಗಳೆಲ್ಲಾ ಚರಂಡಿಗಳಾಗುತ್ತಿವೆ. ಪುರಸಭಾ ವ್ಯಾಪ್ತಿಯ ಗಾಂಧೀ ಮೈದಾನ ಪ್ರದೇಶದ ಚರಂಡಿ ಹಾಗೂ ಬಾವಿಗಳ ಚಿಂತಾಜನಕ ಚಿತ್ರಣವಿದು.

Advertisement

ನಗರಕ್ಕೆ ಮುಖ್ಯವಾಗಿ ಬೇಕಾಗಿರುವ ಒಳಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ನೋಡಿಕೊಳ್ಳಲಾಗದೇ, ಸಮೃದ್ಧ ಜೀವಜಲವನ್ನು ಚರಂಡಿ ನೀರಾಗುವಂತೆ ಮಾಡಿಬಿಡುವಲ್ಲಿ ಕಾರ್ಕಳ ಪುರಸಭೆಯ ಅಸಮರ್ಪಕ ಕಾರ್ಯವೈಖರಿ, ಒಳಚರಂಡಿ ವ್ಯವಸ್ಥೆಗಳ ಬಗೆಗಿನ ದಿವ್ಯ ನಿರ್ಲಕ್ಷವೇ ಮುಖ್ಯ ಕಾರಣ.

ಬಾವಿಯೇ ಚರಂಡಿಯಾದಾಗ
ಮೊದಲೇ ಬೇಸಗೆಗೆ ನೀರಿಲ್ಲ  ಎನ್ನುವ ಕೂಗು ವಿವಿಧ ಭಾಗಗಳಿಂದ ಕೇಳಿ ಬರುತ್ತಿದ್ದರೆ,  ಇಲ್ಲಿನ ಸ್ಥಳೀಯರಿಗೆ ಕುಡಿಯುವ ನೀರಿದ್ದೂ ಅದನ್ನು ಕುಡಿಯಲಾಗದ ಪರಿಸ್ಥಿತಿ. ಅಸಮರ್ಪಕ ಒಳಚರಂಡಿ ವ್ಯವಸ್ಥೆಯೇ ಸರಿಯಿಲ್ಲದಿರುವಾಗ ಚರಂಡಿ ನೀರೆಲ್ಲಾ ಬಾವಿಗಿಳಿದು ಬಂದು ಅದು ಚರಂಡಿಯಾಗುತ್ತಿರುವುದನ್ನು ನೋಡಲಾಗದೇ, ನಿಯಂತ್ರಿಸಲೂ ಆಗದೇ ಮೂಗುಮುಚ್ಚಿ ಕೂರಬೇಕಾದ ಸನ್ನಿವೇಶದಲ್ಲಿ ಇಲ್ಲಿನ ಸ್ಥಳೀಯರು ಪರದಾಡುತ್ತಿದ್ದಾರೆ.

ಇಲ್ಲಿರುವ ನಾಲ್ಕೈದು ಮನೆಗಳಲ್ಲಿರುವ ಬಾವಿಗಳನ್ನು ಗಮನಿಸಿದರೆ ಬಾವಿಯೆಲ್ಲಾ ಗಬ್ಬುನಾತ ಬೀರಿ ಬಾವಿಯಲ್ಲವಿದು ಚರಂಡಿಯೇ ಎನ್ನುವ ಭಾವನೆ ಹುಟ್ಟಿಸುತ್ತಿದೆ. ಆದರೂ ಬೇರೆ ಗತಿ ಇಲ್ಲದೇ ಅದೇ ನೀರನ್ನು ಬಳಕೆ  ಮಾಡುತ್ತಿರುವ ಮನೆ ಮಂದಿಗೆ ಅನಾರೋಗ್ಯ ಸಮಸ್ಯೆ ಹುಟ್ಟಿಸುವಲ್ಲಿ  ಈ ಬಾವಿಗಳದ್ದು ಮೊದಲ ಸ್ಥಾನ. ಈಗಾಗಲೇ ಈ ಹಾಳು ಚರಂಡಿ ಬಾವಿಗಳಿಂದಾಗಿ ಮನೆ ಮಂದಿಗಳಿಗೆ ವಾಂತಿ, ಭೇಧಿ ಶುರುವಾಗಿದೆ. ಜೀವ ಜಲ ಚರಂಡಿ ನೀರಾಗಿ ಮಾರ್ಪಟ್ಟ ಪರಿಣಾಮವಿದು.

ಕೃಷಿ ಭೂಮಿಯೂ ಚರಂಡಿ
ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ ಸುತ್ತಲಿನ ಪ್ರದೇಶ ಹೇಗೆ ಬದಲಾಗುತ್ತದೆ, ಎನ್ನುವುದಕ್ಕೆ ಸಾಕ್ಷಿಯಾಗಿದೆ ಇಲ್ಲಿನ ಪ್ರದೇಶಗಳು. ನಗರದಲ್ಲಿ  ಸಮೃದ್ಧ ಕೃಷಿ ಭೂಮಿ ಹಾಗೂ ಕೆರೆಗಳಿಂದ ಗುರುತಿಸಲ್ಪಡುವ ಆನೆಕೆರೆ, ಹಿರಿಯಂಗಡಿ, ಕಾಬೆಟ್ಟು ಪರಿಸರದ ಫಲವತ್ತಾದ ಹೊಲಗಳು, ತೋಟಗಳೂ ಕೂಡ ಒಳಚರಂಡಿಯ ರಾಡಿ ನೀರಿಗೆ ಬಲಿಯಾಗಿದೆ. ಅವುಗಳಲ್ಲಿ ಕೃಷಿಭೂಮಿಗಳ ಪಾಲು ದೊಡ್ಡದು.ಉಳಿದಂತೆ ಕೆರೆಗಳಿಗೂ ಈ ತ್ಯಾಜ್ಯ ಹರಿದು ಸುತ್ತಲೂ ನೀರಿನ ಒರತೆಯೇ ಕ್ಷೀಣಿಸಿದೆ. ಆನೆಕೆರೆ ಮೂಲಕ ವಾಗಿ ಕಾಬೆಟ್ಟು ಸಂಪರ್ಕಿಸುವಲ್ಲಿ ಅಳವಡಿಸಲಾದ ಪೈಪ್‌ನಿಂದ ತ್ಯಾಜ್ಯಗಳು ಆನೆಕೆರೆ ಪರಿಸರದಲ್ಲಿಯೂ ಹರಡುತ್ತಿದ್ದು ಐತಿಹಾಸಿಕ ಕೆರೆಯಾದ ಆನೆಕೆರೆಗೂ ಇದರಿಂದ ಶನಿದೆಸೆ ಶುರುವಾಗಿ ಇಲ್ಲಿನ ನೀರು ಪೂರ್ತಿ ಚರಂಡಿಯಾದರೂ ಅಚ್ಚರಿಯಿಲ್ಲ.

Advertisement

ಕೈಕಟ್ಟಿ ಕುಳಿತ ಪುರಸಭೆ
ಇಷ್ಟೆಲ್ಲ ಆಗಿದ್ದರೂ ಪುರಸಭೆ ಕೈಕಟ್ಟಿ ಕುಳಿತಿದೆ. ಪುರಸಭೆ ವ್ಯಾಪ್ತಿಯಲ್ಲಿರುವ ವಿವಿಧೆಡೆಗಳಲ್ಲಿ ಮುಖ್ಯವಾಗಿ ಮಾರ್ಕೆಟ್‌ ರಸ್ತೆ, ಅನಂತ ಶಯನ, ವೆಂಕಟರಮಣ ದೇಗುಲದ ಪ್ರದೇಶದ ಸ್ಥಳೀಯ ಬಾವಿಯಲ್ಲಿಯೂ ತ್ಯಾಜ್ಯ ಹರಡುತ್ತಿದೆ. ಸುಮಾರು 27 ವರ್ಷಗಳ ಹಿಂದೆ ನಿರ್ಮಿಸಿದ ಈ ಒಳಚರಂಡಿ ವ್ಯವಸ್ಥೆ  ಅವೈಜ್ಞಾನಿಕವಾಗಿದ್ದು ಎಲ್ಲ ಸಮಸ್ಯೆಗಳ ಮೂಲ. ಕೆಲ ಕಡೆ ಪುರಸಭೆ ಒಳಚರಂಡಿ ಶುಚಿಗೊಳಿಸಿ ಬಾವಿಗಳ ಶುಚಿತ್ವ ಕಾರ್ಯವನ್ನು ಹಮ್ಮಿಕೊಂಡು ಬಾವಿಗಳ ನೀರನ್ನು ಮರುಬಳಕೆ ಮಾಡುತ್ತಿದ್ದರೂ, ಮಳೆಗಾಲ ಶುರುವಾಗುವ ಮೊದಲು ಪುರಸಭಾ ವ್ಯಾಪ್ತಿಯ ಮುಖ್ಯ ಪ್ರದೇಶಗಳಲ್ಲಿ ಶುಚಿತ್ವ ಕಾರ್ಯವನ್ನು ಕೈಗೊಂಡರೆ ಸಮೃದ್ಧ ಜೀವ ಜಲ ಮಲಿನವಾಗದು.

ಒಳಚರಂಡಿಗಳನ್ನು ಶೀಘ್ರವೇ ದುರಸ್ತಿಗೊಳಿಸಲಾಗುವುದು. ಪುರಸಭಾ ವ್ಯಾಪ್ತಿಯಲ್ಲಿ ಇದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ತ್ಯಾಜ್ಯ ಹರಡಿರುವ ಬಾವಿಗಳ ಬಗ್ಗೆ ಗಮನಹರಿಸಲಾಗುವುದು.
-ಮೇಬಲ್‌ ಡಿ’ಸೋಜಾ, ಮುಖ್ಯಾಧಿಕಾರಿ ಕಾರ್ಕಳ ಪುರಸಭೆ

ಇಂತಹ ಸಮಸ್ಯೆ ಹಿಂದೆಂದೂ ಆಗಿರಲಿಲ್ಲ. ಈ ಸಲ ನೀರು ಕಲುಷಿತಗೊಂಡಿದೆ. ಪುರಸಭೆ ಈ ಕುರಿತು ನಿರ್ಲಕ್ಷ್ಯ ವಹಿಸಿದ್ದೇ ಈ ಸಮಸ್ಯೆಗೆ ಮುಖ್ಯ ಕಾರಣ.
-ತಾರಾನಾಥ, ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next