Advertisement

ಮಾತುಕತೆಗೆ ಬಂದು ಕೊಲೆಗೈದ: ಕೌಟುಂಬಿಕ ವಿಚಾರಕ್ಕೆ ಬಾಮೈದನ ಪತ್ನಿಕೊಂದ!

10:00 AM Nov 16, 2020 | keerthan |

ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ವ್ಯಕ್ತಿಯೊಬ್ಬ ತನ್ನ ಬಾಮೈದನ ಪತ್ನಿಯ ಕತ್ತು ಕೊಯ್ದು ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯ ಟಿನ್‌ ಫ್ಯಾಕ್ಟರಿ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ಭಾನುವಾರ ನಡೆದಿದೆ.

Advertisement

ಲಾವಣ್ಯ (37) ಕೊಲೆಯಾದ ಮಹಿಳೆ. ಕೃತ್ಯ ಎಸಗಿದ ವಿಜಯ್‌ ಕುಮಾರ್‌ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂಬಂಧ ಲಾವಣ್ಯ ಪತಿ ವಾಸುದೇವನ್‌ ಎಂಬವರು ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದರು.

ವಾಸುದೇವನ್‌ ಮಾಜಿ ಸೈನಿಕರಾಗಿದ್ದು, ಬೆಸ್ಕಾಂ ಉದ್ಯೋಗಿ ಲಾವಣ್ಯ ಅವರನ್ನು ಹಲವು ವರ್ಷಗಳ ಹಿಂದೆಯೇ ಮದುವೆಯಾಗಿದ್ದರು. ರಾಮಮೂರ್ತಿ ನಗರದ ‌ಅಪಾರ್ಟ್‌ಮೆಂಟ್‌ ವೊಂದರಲ್ಲಿ ವಾಸವಿದ್ದಾರೆ. ಅವರ ತಂದೆ-ತಾಯಿ ಗಾಂಧಿನಗರದ ಲಕ್ಷ್ಮೀ ಣಪುರದಲ್ಲಿದ್ದಾರೆ. 2011ರಲ್ಲಿ ಸಹೋದರಿ ಲಕ್ಷ್ಮೀ ಅವರನ್ನು ವಿಜಯ್‌ ಕುಮಾರ್‌ ಜತೆ ವಿವಾಹ ಮಾಡಿದ್ದರು. ಆರಂಭದಲ್ಲಿ ಅನ್ಯೋನ್ಯವಾಗಿದ್ದರೂ, ಆರೋಪಿ ವರದಕ್ಷಿಣಿ ಕಿರುಕುಳ ನೀಡಲು ಆರಂಭಿಸಿದ್ದಾನೆ. ಅಲ್ಲದೆ, ಪತ್ನಿ ಮೇಲೆ ಹಲ್ಲೆಯನ್ನೂ ನಡೆಸಿದ್ದ.

ಈ ಸಂಬಂಧ ಪತ್ನಿ ಲಕ್ಷ್ಮೀ ಕೆಲತಿಂಗಳ ಹಿಂದೆ ಬಸವನಗುಡಿ ಮಹಿಳಾ ಠಾಣೆಯಲ್ಲಿ ಪತಿ ವಿಜಯ್‌ ಕುಮಾರ್‌ ವಿರುದ್ದ ವರದಕ್ಷಿಣಿ ಕಿರುಕುಳ ಮತ್ತು ದೌರ್ಜನ್ಯ ಆರೋಪದಡಿ ದೂರು ದಾಖಲಿಸಿ, ಆತನಿಂದ ದೂರಾಗಿ ಗಾಂಧಿನಗರದಲ್ಲಿರುವ ಪೋಷಕರ ಜತೆ ನೆಲೆಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.

ಈ ಹಿನ್ನೆಲೆಯಲ್ಲಿ ಆರೋಪಿ ವಿಜಯ್‌ಕುಮಾರ್‌ ಪದೇ ಪದೆ ವಾಸುದೇವನ್‌ ಅವರಿಗೆ ಕರೆ ಮಾಡಿ ಪತ್ನಿಯನ್ನು ಮನೆಗೆ ಕಳುಹಿಸುವಂತೆ ಒತ್ತಾಯಿಸುತ್ತಿದ್ದ. ಯಾವುದೇ ತೊಂದರೆ ನೀಡದಂತೆ ಚೆನ್ನಾಗಿ ನೋಡಿಕೊಳ್ಳುವಂತೆ ಭರವಸೆ ನೀಡಿದ್ದ, ಆದರೆ, ಲಕ್ಷ್ಮೀ ಆತನ ಜತೆ ಹೋಗಲು ನಿರಾಕರಿಸಿದ್ದರು. ಜತೆಗೆ ವಾಸುದೇವನ್‌ ಸೋದರಿಯನ್ನು ಕಳುಹಿಸಲು ಹಿಂದೇಟು ಹಾಕಿದ್ದರು ಎಂದು ಹೇಳಲಾಗಿದೆ.

Advertisement

ಅದರಿಂದ ಆಕ್ರೋಶಗೊಂಡ ಆರೋಪಿ, ವಾಸುದೇವನ್‌ಗೆ, “ತನ್ನ ವಿರುದ್ಧ ಆಕೆ ದೂರು ನೀಡಲು ನೀನು ಮತ್ತು ನಿನ್ನ ಪತ್ನಿ ಕಾರಣ. ನನ್ನಿಂದ ನನ್ನ ಪತ್ನಿಯನ್ನು ದೂರ ಮಾಡಿದಂತೆ ನಿನ್ನನ್ನು ನಿನ್ನ ಪತ್ನಿಯಿಂದ ದೂರು ಮಾಡುತ್ತೇನೆ.’ ಎಂದು ಒಂದೆರಡು ಬಾರಿ ಬೆದರಿಕೆ ಹಾಕಿದ್ದ ಎಂದು ಪೊಲೀಸರು ಹೇಳಿದರು.

ಮಾತುಕತೆಗೆ ಬಂದು ಕೊಲೆಗೈದ

ಆರೋಪಿ ವಿಜಯ್‌ ಕುಮಾರ್‌ ತನ್ನ ವಿರುದ್ಧದ ಆರೋಪ ಸಂಬಂಧ ಮಾತುಕತೆಗೆ ಭಾನುವಾರ ವಾಸುದೇವನ್‌ ಅಪಾರ್ಟ್‌ಮೆಂಟ್‌ಗೆ ಬಂದಿದ್ದಾನೆ. ವಾಸುದೇವನ್‌ ಕಾರ್ಯನಿಮಿತ್ತ ಹೊರಗಡೆ ಹೋಗಿದ್ದರು. ಆಗ ಆರೋಪಿ, ಲಾವಣ್ಯ ಜತೆ ಕೌಟುಂಂಬಿಕ ವಿಚಾರದ ಕುರಿತು ವಾಗ್ವಾದ ನಡೆಸಿದ್ದಾನೆ. ಅದು ವಿಕೋಪಕ್ಕೆ ಹೋದಾಗ, ತನ್ನ ಬಳಿ ತಂದಿದ್ದ ಚಾಕುವಿನಿಂದ ಲಾವಣ್ಯ ಅವರ ಕುತ್ತಿಗೆ ಕೊಯ್ದುದ್ದಿದ್ದಾನೆ. ಲಾವಣ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳೀಯರು ಈ ವಿಚಾರವನ್ನು ವಾಸುದೇವನ್‌ಗೆ ತಿಳಿಸಿದ್ದಾರೆ.

ಕೂಡಲೇ ಸ್ಥಳಕ್ಕೆ ಬಂದು ಮನೆ ಬಾಗಿಲು ಬಡಿದರೂ ಯಾರು ತೆಗೆದಿಲ್ಲ. ಬಳಿಕ ‌ಕಿಟಕಿಯಲ್ಲಿ ನೋಡಿದಾಗ ಆರೋಪಿ ನೇಣಿಗೆ ಶರಣಾಗಲು ಯತ್ನಿಸುತ್ತಿದ್ದ. ಹಾಲ್ ನಲ್ಲಿ ಪತ್ನಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಸ್ಥಳೀಯರ ನೆರವಿನೊಂದಿಗೆ ಮನೆಯ ಬಾಗಿಲು ಒಡೆದು ಒಳ ಹೋಗಿ ಪತ್ನಿಯನ್ನು ಬೌರಿಂಗ್‌ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಆರೋಪಿ ವಿಜಯ್‌ ಕುಮಾರ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದರು. ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next