Advertisement

ಬಸ್ರೂರು ಮೂರುಕೈ: ಲೆವೆಲ್‌ ಕ್ರಾಸಿಂಗ್‌ ಅವಕಾಶ ಕೊಡಿ

06:10 AM Oct 23, 2018 | Team Udayavani |

ಕುಂದಾಪುರ: ಬಸ್ರೂರು ಮೂರುಕೈಯಲ್ಲಿ ಮಾಡುತ್ತಿರುವ ಅಂಡರ್‌ಪಾಸ್‌ನ ಅಗಲ ಹಾಗೂ ಎತ್ತರ ಹೆಚ್ಚಿಸಬೇಕು. ಇಲ್ಲದಿದ್ದರೆ ಅಂಡರ್‌ಪಾಸ್‌ ರದ್ದು ಮಾಡಿ ಲೆವೆಲ್‌ ಕ್ರಾಸಿಂಗ್‌ ಅವಕಾಶ ಕೊಡಬೇಕು ಎಂದು ಎಂಜಿನಿಯರ್ಸ್‌ ಅಸೋಸಿಯೇಶನ್‌ನವರು ಹಾಗೂ ಸ್ಥಳೀಯರು  ಆಗ್ರಹಿಸಿದ್ದಾರೆ.

Advertisement

ಸೋಮವಾರ ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ ಅವರ ಸಲಹೆ ಮೇರೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸ್ಯಾಮ್ಸನ್‌ ವಿಜಯಕುಮಾರ್‌ ಅವರು ಆಗಮಿಸಿದ್ದರು. ಗುತ್ತಿಗೆದಾರ ಸಂಸ್ಥೆ ನವಯುಗ ಕಂಪೆನಿಯ ಪ್ರತಿನಿಧಿಗಳಾದ ರಾಘವೇಂದ್ರ , ಶಂಕರ್‌ ಅವರಿದ್ದರು. 

ನಾಗರಿಕ ಸಮಿತಿಯ ಕಿಶೋರ್‌ ಕುಮಾರ್‌ ಅವರು, ಮಲ್ಟಿ ಎಕ್ಸೆಲ್‌ ಬಸ್ಸುಗಳು, ಕೆಎಸ್‌ಆರ್‌ಟಿಸಿ ಬಸ್ಸುಗಳು, ಬುಲೆಟ್‌ ಟ್ಯಾಂಕರ್‌ಗಳು ಶಿವಮೊಗ್ಗ ಹೆದ್ದಾರಿ ಸಂಪರ್ಕಿಸಲು ಈ ಅಂಡರ್‌ಪಾಸ್‌ ಮೂಲಕವೇ ಹೋಗಬೇಕಾಗುತ್ತದೆ. ಅಂಡರ್‌ಪಾಸ್‌ನ ಅಗಲ ಕಡಿಮೆಯಿದ್ದರೆ ದೊಡ್ಡ ವಾಹನಗಳು ತಿರುಗುವುದಿಲ್ಲ ಎಂದರು.

ರದ್ದು ಮಾಡಿ
ಪ್ರಸ್ತುತ ವಿನ್ಯಾಸದ ಪ್ರಕಾರ 7 ಮೀ. ಅಗಲದ ರಸ್ತೆ, ಎರಡು ಕಡೆ ತಲಾ 1.5 ಮೀ. ಅಗಲದ ಪಾದಚಾರಿ ರಸ್ತೆಯಿದೆ. ಇದನ್ನು 15 ಮೀ. ಮಾಡಬೇಕು, 12 ಮೀ. ವಾಹನ ಹೋಗಲು, 3 ಮೀ. ಪಾದಚಾರಿಗೆ ಎನ್ನುವುದು ಎಂಜಿನಿಯರ್ಸ್‌ ಎಸೋಸಿಯೇಶನ್‌ನ ಅಧ್ಯಕ್ಷ ಬಿ.ಎಂ. ಗುರುರಾಜ್‌ ರಾವ್‌ ತಂಡದವರ ಬೇಡಿಕೆ. ಎಂಜಿನಿಯರ್‌ ನರೇಂದ್ರ ಶೆಟ್ಟಿ, ಕುಂದಾಪುರ ಭಾಗದಲ್ಲಿ ಆಗುವ ಅಗ್ನಿ ಅನಾಹುತಗಳಿಗೆ ಅಗ್ನಿಶಾಮಕ ವಾಹನ ಬರದಂತಾಗುತ್ತದೆ. ಅಗ್ನಿಶಾಮಕ ಠಾಣೆ ಕೂಡಾ ಬಸೂÅರು ರಸ್ತೆಯಲ್ಲಿಯೇ ಇರುವುದು ಎಂದು ಗಮನಕ್ಕೆ ತಂದರು. 

ಎಂಜಿನಿಯರ್‌ ಕೌಶಿಕ್‌ ಯಡಿಯಾಳ್‌, ಶಿರಾಡಿ ಹಾಗೂ ಚಾರ್ಮಾಡಿ ಘಾಟಿ ಸಂಚಾರ ನಿರ್ಬಂಧ ವಿಧಿಸಿದಾಗ ಘನ ವಾಹನಗಳ ಸಂಚಾರಕ್ಕೆ ಈ ರಸ್ತೆ ಆವಶ್ಯಕವಾಗಿದ್ದು  ಅಂಡರ್‌ಪಾಸ್‌ ಗಾತ್ರ ಕಿರಿದಾದರೆ ಶಿವಮೊಗ್ಗ ಹಾಗೂ ಕುಂದಾಪುರ ಸಂಪರ್ಕವೇ ಕಡಿತವಾಗುವ ಭೀತಿಯಿದೆ. ಆದ್ದರಿಂದ ಗಾತ್ರದಲ್ಲಿ ವ್ಯತ್ಯಾಸ ಮಾಡಲಾಗದಿದ್ದರೆ ಅಂಡರ್‌ಪಾಸ್‌ ರದ್ದು ಮಾಡಿ, ಅಂಬಲಪಾಡಿಯಲ್ಲಿ ನೀಡಿದಂತೆ ಲೆವೆಲ್‌ ಕ್ರಾಸಿಂಗ್‌ ಕೊಡಿ ಎಂದರು.

Advertisement

ಪ್ರಯೋಜನ ಶೂನ್ಯ
ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ ಅವರು ಯೋಜನಾ ನಿರ್ದೇಶಕರ ಬಳಿ ಮಾತನಾಡಿ, ಎಂಆರ್‌ಪಿಎಲ್‌ ಸೇರಿದಂತೆ ಬೇರೆ ಬೇರೆ ಕೈಗಾರಿಕೆಗಳಿಗೆ ಸೇರಿದ ಘನ ವಾಹನಗಳು ಕುಡಾ ಈ ಮಾರ್ಗದ ಮೂಲಕ ಚಲಿಸುತ್ತವೆ. ಕೇವಲ ಒಂದೆರಡು ವರ್ಷದ ವಾಹನಗಳ ಓಡಾಟದ ಅಂದಾಜಿನ ಮೇರೆಗೆ ಇಂತಹ ರಚನೆಗಳನ್ನು ಮಾಡುವುದು ಸರಿಯಲ್ಲ. ಭವಿಷ್ಯದ ಸಂಚಾರದ ಒತ್ತಡವನ್ನು ಗಮನಿಸಿವುದು ಕೂಡಾ ಅಗತ್ಯ. ಈಗಾಗಲೇ ಕೊಟೆಶ್ವರ ಹಾಗೂ ಬ್ರಹ್ಮಾವರದಲ್ಲಿ ನಿರ್ಮಾಣ ಮಾಡಿದ ಅಂಡರ್‌ಪಾಸ್‌ಗಳು ಸಾರ್ವಜನಿಕ ಉಪಯೋಗಕ್ಕೆ ಇಲ್ಲದಂತಾಗಿದೆ. ಅದರ ಮೇಲ್ಭಾಗದಲ್ಲಿ ವಾಹನ ಸಂಚರಿಸಿದರೂ ಸ್ಥಳೀಯರಿಗೆ ಉಪಯೋಗಕ್ಕೆ ದೊರೆಯದಂತಾಗಿದೆ ಎಂದರು. 

ಮಾತಿನ ಚಕಮಕಿ
ಒಂದು ಹಂತದಲ್ಲಿ ನವಯುಗ ಸಂಸ್ಥೆಯವರಿಗೂ ಸ್ಥಳೀಯರಿಗೂ ಮಾತಿನ ಚಕಮಕಿ ನಡೆಯಿತು. ಊರವರ ಎಲ್ಲ ಬೇಡಿಕೆಗೆ ನವಯುಗ ಸಂಸ್ಥೆ ಅಸಾಧ್ಯ ಎಂದೇ ತಲೆಯಾಡಿಸುತ್ತಿದ್ದ ಕಾರಣ ಜನ ಸಹನೆ ಕಳೆದುಕೊಳ್ಳಲಾರಂಭಿಸಿದರು. ಸಂಸದೆ ಶೋಭಾ, ಶಾಸಕ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಪ್ರಿಯಾಂಕಾ ಬಂದು ಹೇಳಿದರೂ ನವಯುಗ ಸಂಸ್ಥೆ ತನ್ನದೇ ಹಠ ಹಿಡಿಯುತ್ತಿದೆ ಎಂದರು. ಆಗ ಜಯಪ್ರಕಾಶ್‌ ಹೆಗ್ಡೆ ಅವರು ನೀವು ಜನರಿಗಾಗಿ ಕೆಲಸ ಮಾಡುತ್ತಿರುವುದು ಎನ್ನುವುದು ಗಮನದಲ್ಲಿರಲಿ ಎಂದರು.

ಪುರಸಭೆ ಸದಸ್ಯ ಗಿರೀಶ್‌ ಎಚ್‌., ಎಂಜಿನಿಯರ್ ಅಸೋಸಿಯೇಶನ್‌ ಅಧ್ಯಕ್ಷ ಬಿ.ಎಂ. ಗುರುರಾಜ ರಾವ್‌, ಅರ್ಕಿಟೆಕ್ಟರ್‌ ಇಕ್ಬಾಲ್‌, ಚೇತನ್‌ ಹೆಗ್ಡೆ, ರಮೇಶ್‌ ಆಚಾರ್‌, ಸತೀಶ್‌, ಕೌಶಿಕ್‌ ಯಡಿಯಾಳ್‌, ಅರುಣ್‌ ಶೆಟ್ಟಿ, ನಾಗರಿಕ ಸಮಿತಿಯ ಕಿಶೋರ್‌ ಕುಮಾರ್‌, ನರೇಂದ್ರ ಶೆಟ್ಟಿ ಉಪಸ್ಥಿತರಿದ್ದರು. 

ಹೊಸದು ಕಷ್ಟ
ಹೊಸದಾಗಿ ಯಾವುದೇ ಮಾರ್ಪಾಡು ಮಾಡಿದರೂ ಅದು ದಿಲ್ಲಿಗೆ ಹೋಗಿ ಅಲ್ಲಿ ಒಪ್ಪಿಗೆ ಪಡೆದಾಗಬೇಕು. ಆಗ ತಡವಾಗುತ್ತದೆ. ಜತೆಗೆ ಈಗಾಗಲೇ ಇಲ್ಲಿ ಅನುಮೋದಿತ ನಕ್ಷೆಗೆ ಕಾಮಗಾರಿ ಆರಂಭಿಸಿದ್ದು ಕಾಮಗಾರಿಯ ನಕ್ಷೆ ಬದಲಿಸಿದರೆ ಅವರಿಗೆ ಪರಿಹಾರ ಕೊಡಬೇಕಾಗುತ್ತದೆ. ಹೆದ್ದಾರಿ ಸಂಬಂಧಿಸಿದ ನಕ್ಷೆಗಳಲ್ಲಿ ಒಂದೊಂದು ಕಡೆಗೆ ಒಂದೊಂದು ಮಾದರಿಯ ಅಂಡರ್‌ಪಾಸ್‌, ಫ್ಲೈ ಓವರ್‌ ಎಂದು ವಿನ್ಯಾಸ ಕಷ್ಟ. ಆದ್ದರಿಂದ ಈಗ ಇರುವ ವಿನ್ಯಾಸದ ಬದಲಿಸುವುದು ಕಷ್ಟ ಎಂದು ಸ್ಯಾಮ್ಸನ್‌ ವಿಜಯಕುಮಾರ್‌ ಹೇಳಿದರು.

ಬದಲಿಗೆ ಒಪ್ಪಿಗೆ
ಈಗ ಇರುವ 7.5 ಮೀ. ಅಗಲದ ಜತೆಗೆ 3 ಮೀ. ಅಗಲದ ಪಾದಚಾರಿ ರಸ್ತೆಯನ್ನು ಸೇರಿಸಿ ಪಾದಚಾರಿಗಳಿಗೆ ಬದಲಿ ವ್ಯವಸ್ಥೆ ಮಾಡಿಕೊಡಿ ಎಂದು ಜಯಪ್ರಕಾಶ್‌ ಹೆಗ್ಡೆ ಅವರು ಮಾಡಿದ ಮನವಿಗೆ ವಿಜಯಕುಮಾರ್‌ ಒಪ್ಪಿದರು. ಎತ್ತರವನ್ನು ಅರ್ಧ ಮೀ. ಹೆಚ್ಚಿಸಲು ತಾತ್ವಿಕ ಒಪ್ಪಿಗೆ ದೊರಕಿದ್ದು ಈ ಸಂಬಂಧ ಪತ್ರವ್ಯವಹಾರ ನಡೆಸಲು ಒಪ್ಪಿದರು. ಆದರೆ ಸ್ಥಳೀಯರು ಇದನ್ನು ಒಪ್ಪುತ್ತಿಲ್ಲ. ಬದಲಿಗೆ 12 ಮೀ. ಅಗಲವೇ ಬೇಕು, 5.5ಮೀ. ಎತ್ತರವೇ ಬೇಕು, ಸಾಧ್ಯವಾಗ ದಿದ್ದರೆ ಲೆವೆಲ್‌ಕ್ರಾಸಿಂಗ್‌ ಮಾಡಿ ಎಂದು ಒತ್ತಾಯಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next