Advertisement

ಹಾಳಕುಸುಗಲ್ಲದಲ್ಲಿ ಮೂಲ ಸೌಲಭ್ಯ ಮೂರಾಬಟ್ಟೆ

11:13 AM Jul 16, 2022 | Team Udayavani |

ನವಲಗುಂದ: ನೂರಾರು ಕೋಟಿ ಅನುದಾನ ಗ್ರಾಮೀಣ ಪ್ರದೇಶಕ್ಕೆ ಬಂದಿದೆ ಎಂಬುದು ಜನಪ್ರತಿನಿಧಿಗಳ ಧ್ವನಿಯಾದರೆ, ಮೂಲಸೌಕರ್ಯಗಳಿಲ್ಲ ಎಂದು ಜನರು ಆಳುವವರಿಗೆ ಹಿಡಿಶಾಪ ಹಾಕುವುದು ಹಾಳಕುಸುಗಲ್ಲ ಗ್ರಾಮದಲ್ಲಿ ಸಹಜವಾಗಿದೆ.

Advertisement

ಗ್ರಾಮದ ರಸ್ತೆಗಳ ಸ್ಥಿತಿ ಚಿಂತಾಜನಕವಾಗಿದೆ. ಪಟ್ಟಣದಿಂದ ಹಾಳಕುಸುಗಲ್ಲ ಗ್ರಾಮಕ್ಕೆ ಬರುವ ಮುಖ್ಯರಸ್ತೆ ಕಾಂಕ್ರಿಟ್‌ ಕಾಮಗಾರಿಗೆ ಚರಂಡಿ ಕೆಲಸಕ್ಕೆಂದು ತೆಗೆದಿರುವ ತಗ್ಗಿನಿಂದ ಗ್ರಾಮಕ್ಕೆ ಹೋಗಲು ಸಹ ರಸ್ತೆ ಇಲ್ಲದಂತಾಗಿದೆ. ಇನ್ನು ಒಳರಸ್ತೆಗಳ ಸ್ಥಿತಿಯಂತೂ ಹೇಳತೀರದು. ನಡೆದುಕೊಂಡು ಹೋಗಲು ಸಾಧ್ಯವೇ ಇಲ್ಲದಂತಾಗಿದೆ. ರೈತರ ಚಕ್ಕಡಿ, ಟ್ರಾಕ್ಟರ್‌ಗಳು ಮಣ್ಣಿನ ರಾಡಿಯಲ್ಲಿ ಸಿಲುಕಿಕೊಳ್ಳುತ್ತವೆ. ರೈತರು ತಮ್ಮ ಮನೆಗಳಿಗೆ ಹೋಗಬೇಕೆಂದರೆ ಹರಸಾಹಸ
ಪಡಬೇಕಾಗಿದೆ.

ಬೀಳುವ ಸ್ಥಿತಿಯಲ್ಲಿ ಅಂಗನವಾಡಿ: ರಸ್ತೆಗಳ ಸ್ಥಿತಿ ಒಂದು ಕಡೆಯಾದರೆ ಗ್ರಾಮದ ಅಂಗನವಾಡಿ ಕೇಂದ್ರ ಬೀಳುವ ಸ್ಥಿತಿಯಲ್ಲಿದೆ. ಇದರಲ್ಲಿಯೇ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಆದರೆ ಅದೇ ಆವರಣದಲ್ಲಿರುವ ಶಾಲಾ ಕೊಠಡಿಯಲ್ಲಿ ರಸ್ತೆ ಕಾಮಗಾರಿಗೆ ಬಂದ ಗುತ್ತಿಗೆದಾರರಿಗೆ ಒಳ್ಳೆಯ ಕೊಠಡಿ ನೀಡಿ ಅಂಗನವಾಡಿಯಲ್ಲಿ ಕಲಿಯುತ್ತಿರುವ ಮಕ್ಕಳ ಹಿತ ಕಾಪಾಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ.

ಮುಖ್ಯ ರಸ್ತೆಯ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರ ಶಾಲಾ ಕಾಂಪೌಂಡನ್ನೇ ಒಡೆದು ತನ್ನ ವಾಹನಗಳನ್ನು ನಿಲ್ಲಿಸಲು, ಪರಿಕರಗಳ ಸ್ಥಳ ಮಾಡಿಕೊಂಡಿದ್ದಾರೆ. ರಸ್ತೆ ಕಾಮಗಾರಿಗಾಗಿ ಶಾಲೆಯ ಕೊಠಡಿಗಳನ್ನು ಗೋದಾಮಾಗಿ ಪರಿವರ್ತನೆ ಮಾಡಿಕೊಂಡಿದ್ದಾರೆ.

ತರಾತುರಿ ಸ್ವಚ್ಛತೆಗೆ ತಡೆ: ಗ್ರಾಮದಲ್ಲಿ ತಹಶೀಲ್ದಾರ್‌ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕಾಗಿ ಜೆಸಿಬಿಯಿಂದ ಸ್ವತ್ಛತೆ ಕಾರ್ಯ ಮಾಡುತ್ತಿರುವುದನ್ನು ಸ್ಥಳೀಯರು ತಡೆದು ತಹಶೀಲ್ದಾರ್‌ ಹಾಗೂ ಅಧಿಕಾರಿಗಳು ಬರಲಿ, ಇಲ್ಲಿಯ ಪರಿಸ್ಥಿತಿ ಅವಲೋಕಿಸಲಿ ಎಂದು ಸ್ವಚ್ಛತೆಯ ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ. ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಮೂರು ಟ್ಯಾಂಕರ್‌ ವ್ಯವಸ್ಥೆಯಿದ್ದರೂ ಪೈಪ್‌ಲೈನ್‌ ಕಾಮಗಾರಿ ನೆಪದಲ್ಲಿ 15 ದಿನಕ್ಕೊಮ್ಮೆ ನೀರು ಪೂರೈಸುವ ಕೆಲಸ ಗ್ರಾಮ ಪಂಚಾಯತಿಯವರದ್ದಾಗಿದೆ ಎಂಬುದು ಸಾರ್ವಜನಿಕರ ದೂರಾಗಿದೆ.

Advertisement

ಜು.16ರಂದು ಹಾಳಕುಸುಗಲ್ಲ ಗ್ರಾಮದಲ್ಲಿ ತಹಶೀಲ್ದಾರ್‌ ನಡೆ ಹಳ್ಳಿ ಕಡೆ ಕಾರ್ಯಕ್ರಮ ನಡೆಯುತ್ತಿದೆ. ತಾಲೂಕಾಡಳಿತದ ಅಧಿಕಾರಿಗಳು ಗ್ರಾಮವಾಸ್ತವ್ಯ ಮಾಡಲಿದ್ದು, ಮೂಲಸೌಕರ್ಯ ಸಮಸ್ಯೆಗಳಿಗೆ ಪರಿಹಾರ ಸಿಗಬಹುದೆಂಬ ನಿರೀಕ್ಷೆಯಲ್ಲಿ ಗ್ರಾಮಸ್ಥರು ಕಾಯುತ್ತಿದ್ದಾರೆ.

ಸತತ ಮಳೆಯಿಂದ ರಸ್ತೆಗಳು ಹಾಳಾಗಿಲ್ಲ. ಆದರೆ ಗ್ರಾಮ ಅಭಿವೃದ್ಧಿ ಹೆಸರಿನಲ್ಲಿ ಹಾಳಾಗಿರುವುದು ಸತ್ಯ. ಹೆಸರಿಗೆ ಮಾತ್ರ ಅಭಿವೃದ್ಧಿ ಜಪವಾಗಿದೆ. ಗ್ರಾಮದ ಸಾರ್ವಜನಿಕರಿಗೆ ರಸ್ತೆ, ನೀರು ಇತರೆ ಸರಕಾರದ ಯೋಜನೆಗಳು ಸರಿಯಾಗಿ ತಲುಪಬೇಕಾಗಿದೆ.
ಪ್ರಕಾಶ ಪಾಟೀಲ, ಹಾಳಕುಸುಗಲ್ಲ ಗ್ರಾಮಸ್ಥ

*ಪುಂಡಲೀಕ ಮುಧೋಳೆ

Advertisement

Udayavani is now on Telegram. Click here to join our channel and stay updated with the latest news.

Next