ದೇವದುರ್ಗ: ಸಮೀಪದ ಗಬ್ಬೂರು ಗ್ರಾಮದ ಎಸ್‌ಸಿ ಕಾಲೋನಿ ಸ್ಲಂ ನಿವಾಸಿಗಳು ಮೂಲ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಎಸ್‌ಸಿ ಕಾಲೋನಿ ಚನ್ನಬಸವ ಮಠದ ಮುಂದಿರುವ ರಸ್ತೆಯು ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ.
ಆದರೆ ಈ ರಸ್ತೆಯಲ್ಲಿ ಯಾವಾಗಲೂ ಚರಂಡಿ ನೀರು ನಿಲ್ಲುತ್ತಿರುವುದರಿಂದ ತೀವ್ರ ತೊಂದರೆಯಾಗಿದೆ. ಈ ಮಾರ್ಗದಲ್ಲಿ ಅಕ್ಕಪಕ್ಕ ಹೋಟೆಲ್‌ಗಳು ಇರುವುದರಿಂದ ಸಮಸ್ಯೆ ಎದುರಿಸುವಂತಾಗಿದೆ. ಎಸ್‌ಸಿ ಕಾಲೋನಿಯಲ್ಲಿ ಹರಿಜನ ಗಿರಿಜನ ಕಲ್ಯಾಣ ಯೋಜನೆಯಡಿ ಕೈಗೊಂಡ ಚರಂಡಿ, ಸಿಸಿರಸ್ತೆ ಕಾಮಗಾರಿ ಕಳಪೆಮಟ್ಟದ್ದಾಗಿದೆ ಎಂದು ಮುಖಂಡರು ದೂರು ನೀಡಿದಾಗ ಲೋಕೋಪಯೋಗಿ ಇಲಾಖೆ ಎಇಇ ಸ್ಥಳಕ್ಕೆ ಬಂದು ಪರಿಶೀಲಿಸಿ ಹೋಗಿದ್ದಾರೆ. ಆದರೆ ಮತ್ತೆ ತಿರುಗಿಯೂ ನೋಡಿಲ್ಲ.
ಎಸ್‌ಸಿ ಕಾಲೋನಿ ಮಹಿಳೆಯರಿಗಾಗಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ. ಆದರೆ ನೀರಿನ ವ್ಯವಸ್ಥೆ ಇಲ್ಲದೇ ಇರುವುದರಿಂದ ಬೀಗ ಜಡಿಯಲಾಗಿದೆ. ಸ್ವತ್ಛ ಭಾರತ ಯೋಜನೆಯಡಿ ಪ್ರತಿ ಕುಟುಂಬಕ್ಕೂ ಒಂದು ಶೌಚಾಲಯ ಎಂದು ಹೇಳಲಾಗಿದ್ದರೂ ಒಂದೋ, ಎರಡೋ ರೆಡಿಮೇಡ್ ಶೌಚಗೃಹ ನೀಡಿ ಅವುಗಳಿಗೆ ಗುಂಡಿಯ ಸಂಪರ್ಕ ಕಲ್ಪಿಸದೇ ಕೈತೊಳೆದುಕೊಳ್ಳಲಾಗಿದೆ. ಇವು ಬಳಕೆಗೆ ಬರದೇ ಇರುವುದರಿಂದ ಬಯಲು ಶೌಚಾಲಯ ಅನಿವಾರ್ಯವಾಗಿದೆ.
ಗಬ್ಬೂರು ಗ್ರಾಮದ ಎಸ್‌ಸಿ ಕಾಲೋನಿ ನಿವಾಸಿಗಳು ಹಲವು ಸಮಸ್ಯೆಗಳು ಎದುರಿಸುತ್ತಿದ್ದಾರೆ. ಅಭಿವೃದ್ಧಿಗೆ ಒತ್ತು ನೀಡಬೇಕಾದ ಗ್ರಾಪಂ ನಿರ್ಲಕ್ಷ್ಯ ವಹಿಸಿದೆ. ಗ್ರಾಪಂ ಸದಸ್ಯರೂ ಇಲ್ಲಿನ ಸಮಸ್ಯೆ ಕುರಿತು ಮೌನ ವಹಿಸಿದ್ದಾರೆ.
-ರಾಜಪ್ಪ ಸಿರವಾರ, ದಲಿತ ಮುಖಂಡ
ಗಿರಿಜನ ಹರಿಜನ ಕಲ್ಯಾಣ ಯೋಜನೆಯಡಿ ಕೈಗೊಂಡ ಚರಂಡಿ, ಸಿಸಿ ರಸ್ತೆ ಕಳಪೆ ಕಾಮಗಾರಿ ಕುರಿತು ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಸ್ಥಳಕ್ಕೆ ಬಂದು ಪರಿಶೀಲಿಸಿ ಹೋದವರು ತಿರುಗಿಯೂ ನೋಡಿಲ್ಲ. ಶೌಚಗೃಹ ಇದೆ. ನೀರಿನ ವ್ಯವಸ್ಥೆ ಇಲ್ಲದೇ ಇರುವುದರಿಂದ ಬಹಿರ್ದೆಸೆಗೆ ಬಯಲಿಗೆ ಹೋಗಬೇಕಿದೆ.
-ಶಾಂತಕುಮಾರ ಹೊನ್ನಟಗಿ, ಎಂಆರ್‌ಎಚ್‌ಎಸ್ ತಾಲೂಕಾಧ್ಯಕ್ಷ
ರಸ್ತೆ ಮೇಲೆ ಹರಿಯುತ್ತಿರುವ ಚರಂಡಿ ನೀರು, ಬೀಗ ಹಾಕಿರುವ ಸಾರ್ವಜನಿಕ ಮಹಿಳೆಯರ ಶೌಚಾಲಯ ಸಮಸ್ಯೆ ಕುರಿತು ಕೂಡಲೇ ಗಮನ ಹರಿಸುತ್ತೇನೆ. ಸೂಕ್ತ ಕ್ರಮ ಕೈಗೊಳ್ಳಲು ಸಿಬ್ಬಂದಿಗೆ ಸೂಚನೆ ನೀಡುತ್ತೇನೆ.
-ಶಿವುಕುಮಾರ, ಗ್ರಾಪಂ ಅಭಿವೃದ್ಧಿ ಅಧಿಕಾರಿನಾಗರಾಜ ತೇಲ್ಕರ್