Advertisement

ಸಾಧನೆಗೆ ಅಡ್ಡಿಯಾಗದ ಅಂಧತ್ವ: ಉದಯವಾಣಿಯಲ್ಲಿ “ಮಾನವ ಕಂಪ್ಯೂಟರ್‌’

01:24 AM Dec 13, 2022 | Team Udayavani |

ಮಣಿಪಾಲ : ಮಾಹಿತಿಗ ಳನ್ನು ಕ್ಷಣಾರ್ಧದಲ್ಲಿ ತಿಳಿಯಲು ಕಂಪ್ಯೂಟರ್‌ ಮೊರೆ ಹೋಗುವುದೇ ಹೆಚ್ಚು. ಈ ಜ್ಞಾನ ಮನುಷ್ಯರಿಗೆ ಸಿದ್ಧಿಸಿದರೆ ಹೇಗಾಗಬೇಡ…? ಇಂತಹದ್ದೇ ಒಂದು ಜ್ಞಾನ ಭಂಡಾರ ಇರುವುದು ಬೆಳಗಾವಿ ಜಿಲ್ಲೆ ಅಥಣಿಯ ಬಸವರಾಜ ಶಂಕರ ಉಮ್ರಾಣಿ ಅವರಿಗೆ.

Advertisement

ಉದಯವಾಣಿಯ ಮಣಿಪಾಲ ಕೇಂದ್ರ ಕಚೇರಿಗೆ ಆಗ ಮಿಸಿದ್ದ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಹುಟ್ಟು ಕುರುಡರಾದ ಇವರ ಸಾಧನೆಗೆ ಅದು ಯಾವತ್ತೂ ಅಡ್ಡಿ ಎನಿಸಿದ್ದೇ ಇಲ್ಲವಂತೆ!

28 ವರ್ಷದ ಇವರು ಎಂಎ, ಬಿಎಡ್‌ ಪದವೀಧರರು. ಬೆಂಗಳೂರಿನ ಆದರ್ಶ ಗ್ರೂಪ್‌ ಆಫ್ ಇನ್‌ಸ್ಟಿಟ್ಯೂಟ್‌ನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. 1900ರಿಂದ 2100ರ ವರೆಗಿನ ಯಾವುದೇ ವರ್ಷದ ಕ್ಯಾಲೆಂಡರ್‌ ದಿನವನ್ನು ಕ್ಷಣಾರ್ಧದಲ್ಲಿ ಹೇಳಬಲ್ಲರು. ಹುಟ್ಟಿದ ದಿನಾಂಕ, ದಿನ ಕೂಡ!

ಗಣಿತ ವಿಚಾರಗಳೆಲ್ಲವೂ ಲೀಲಾಜಾಲ. 30 ಅಂಕಿಗಳನ್ನು ಒಟ್ಟಿಗೆ ಹೇಳಿದರೂ ಅದನ್ನು ಏರಿಕೆ ಮತ್ತು ಇಳಿಕೆ ಕ್ರಮದಲ್ಲಿ ಹೇಳಬಲ್ಲರು. ಗಡಿಯಾರದ ಸಹಾಯವಿಲ್ಲದೆ ನಿಖರವಾಗಿ ಸಮಯ ಹೇಳುವ ನೈಪುಣ್ಯ ಇವರದ್ದು. ಬೇರೆ ಬೇರೆ ಮೌಲ್ಯದ ಕರೆನ್ಸಿ ನೋಟುಗಳನ್ನು ಕೈಯಲ್ಲಿ ಸ್ಪರ್ಶಿಸಿಯೇ ಅವುಗಳ ಒಟ್ಟು ಮೌಲ್ಯವನ್ನು ತಿಳಿಸುವ ಚಾತುರ್ಯ ಇವರಿಗಿದೆ. ಎಂದೋ… ಎಲ್ಲೋ ಕೇಳಿದ ದೂರವಾಣಿ ಸಂಖ್ಯೆಯನ್ನು ಹಾಗೂ ಭೇಟಿಯಾದ ದಿನಾಂಕ ಸಮಯವನ್ನೂ ಹೇಳಬಲ್ಲರು.

ಹಲವು ನಾಯಕರ ಭೇಟಿ
ಭಾರತದ ಬಹುತೇಕ ಜಿಲ್ಲೆ ಹಾಗೂ ರಾಜ್ಯಗಳನ್ನು ಸುತ್ತಿರುವ ಇವರು ಸೌದಿ ಅರೇಬಿಯಾ, ದುಬಾೖ, ಶಾರ್ಜಾ ಸಹಿತ ಹಲವಾರು ವಿದೇಶಿ ತಾಣಗಳಿಗೂ ಭೇಟಿ ನೀಡಿ ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಮಾಜಿ ರಾಷ್ಟ್ರಪತಿ ಡಾ| ಎಪಿಜೆ ಅಬ್ದುಲ್‌ ಕಲಾಂ, ದುಬಾೖ ದೊರೆ… ಹೀಗೆ ಇವರು ಭೇಟಿ ಮಾಡಿರುವ ಗಣ್ಯರ ಪಟ್ಟಿ ಬೆಳೆಯುತ್ತದೆ.
ಏಕಾಗ್ರತೆ, ಯೋಗ, ಧ್ಯಾನ, ಪ್ರಾಣಾಯಾಮವೇ ಯಶಸ್ಸಿನ ಮೂಲ. ನಾವು ಮಾಡುವ ಕೆಲಸದ ಮೇಲೆ ಏಕಾಗ್ರತೆ ಇದ್ದರೆ ನಮ್ಮ ಸಾಧನೆಗೆ ಯಾರೂ ಅಡ್ಡಿಯಾಗಲಾರರು ಎನ್ನುತ್ತಾರೆ ಅವರು.

Advertisement

ಅಧಿಕಾರಿಯಾಗುವಾಸೆ
ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆದು ಉನ್ನತ ಅಧಿಕಾರಿಯಾಗುವ ಆಸೆ ಇವರದ್ದು. ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಗಣಿತದ ಬಗ್ಗೆ ಇರುವ ಭಯವನ್ನು ಹೋಗಲಾಡಿಸುವ ಉದ್ದೇಶ ಹೊಂದಿದ್ದಾರೆ. ವಿದ್ಯಾರ್ಥಿಗಳನ್ನು ಹ್ಯೂಮನ್‌ ಕಂಪ್ಯೂಟರ್‌ಗಳನ್ನಾಗಿಸಿ ಆ ಮೂಲಕ ಗಿನ್ನೆಸ್‌ ದಾಖಲೆ ಸ್ಥಾಪಿಸುವ ಉದ್ದೇಶವನ್ನೂ ಹೊಂದಿದ್ದಾರೆ.

ಹೊಸದನ್ನು ಸಾಧಿಸುವ ಹಂಬಲ ಪ್ರತಿಯೊಬ್ಬರಲ್ಲಿಯೂ ಇರಬೇಕು. ಏಕಾಗ್ರತೆಯಿಂದ ಇದನ್ನು ಸಾಧಿಸಬೇಕು. ದೂರದ ಊರಿಗೆ ಹೋಗುವಾಗ ನಾವು ಮಾಡುವ ಸಿದ್ಧತೆಯಂತೆ. ಪ್ರತಿದಿನ, ಪ್ರತಿಕ್ಷಣವೂ ಸಿದ್ಧ ಎಂಬ ಭಾವನೆಯೇ ಯಶಸ್ಸಿನ ಗುಟ್ಟು.
– ಬಸವರಾಜ ಶಂಕರ ಉಮ್ರಾಣಿ

Advertisement

Udayavani is now on Telegram. Click here to join our channel and stay updated with the latest news.

Next