ಬಾಗಲಕೋಟೆ: ಸದಾ ರಾಜಕೀಯ ಆರೋಪ-ಪ್ರತ್ಯಾರೋಪದಲ್ಲಿ ತೊಡಗುವ ಕಾಂಗ್ರೆಸ್, ಬಿಜೆಪಿ ನಾಯಕರಿಬ್ಬರು, ಶುಕ್ರವಾರ ಜಿಲ್ಲೆಯ ಬಾದಾಮಿ ತಾಲೂಕಿನ ಉಗಲವಾಟದಲ್ಲಿ ಅಪರೂಪದ ಘಟನೆಯೊಂದರಲ್ಲಿ ಗಮನ ಸೆಳೆದರು.
ಬಾದಾಮಿ ಮತ್ತು ಬೀಳಗಿ ಕ್ಷೇತ್ರದ 39 ಹಳ್ಳಿಗಳ 40 ಸಾವಿರ ಎಕರೆ ಭೂಮಿಗೆ ನೀರಾವರಿ ಕಲ್ಪಿಸುವ 528 ಕೋಟಿ ರೂ. ಮೊತ್ತದ ಕೆರೂರ ಏತ ನೀರಾವರಿ ಯೋಜನೆ ಭೂಮಿ ಪೂಜೆ ಕಾರ್ಯಕ್ರಮ ಬಾದಾಮಿ ಕ್ಷೇತ್ರದ ವ್ಯಾಪ್ತಿಯ ಉಗಲವಾಟದಲ್ಲಿ ಸಂಜೆ ಹಮ್ಮಿಕೊಳ್ಳಲಾಗಿತ್ತು. ಹುಬ್ಬಳ್ಳಿಯಿಂದ ಆಗಮಿಸಿದ ಸಿದ್ದರಾಮಯ್ಯ, ಕಲಬುರಗಿಯಿಂದ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಉಗಲವಾಟದ ನಿಯೋಜಿತ ಭೂಮಿಯಲ್ಲಿ ಪೂಜೆ ನೆರವೇರಿಸುತ್ತಿದ್ದರು.
ಅರ್ಚಕರು ಪೂಜೆ ನೆರವೇರಿಸುತ್ತಿದ್ದ ವೇಳೆ ಸಿದ್ದರಾಮಯ್ಯ ತಮ್ಮ ಜೇಬಿನಿಂದ 500 ರೂ. ತೆಗೆದು ಪೂಜೆ ಸ್ಥಳದಲ್ಲಿದ್ದ ಆರತಿ ತಟ್ಟೆಯಲ್ಲಿ ಹಾಕಲು ಮುಂದಾದರು. ಪಕ್ಕದಲ್ಲೇ ಸಿಎಂ ಬೊಮ್ಮಾಯಿ ಕೂಡ ತಮ್ಮ ಜೇಬಿಗೆ ಕೈ ಹಾಕಿದರಾದರೂ ಹಣ ತೆಗೆಯಲಿಲ್ಲ. ಸಿದ್ದರಾಮಯ್ಯ ಅವರ ಕೈಯಲ್ಲಿದ್ದ ಹಣ ಪಡೆದು, ನೀವು ಬೇರೆ ಹಾಕಿ ಎನ್ನುವ ಸನ್ನೆ ಮಾಡಿದರು. ಆಯ್ತು ತಗೊಳಪ್ಪ ಎಂದು 500 ರೂ. ಸಿಎಂಗೆ ಕೊಟ್ಟ ಸಿದ್ದು ಮತ್ತೆ ತಮ್ಮ ಜೇಬಿನಿಂದ 500 ರೂ. ತೆಗೆದರು. ಈ ವೇಳೆ ಪಕ್ಕದಲ್ಲಿದ್ದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಿಎಂಗೆ ದಕ್ಷಿಣೆ ಹಾಕಲು ಹಣ ಕೊಡಲು ಮುಂದಾದರು. ಇರಲಿ ಬಿಡಿ ಎಂದು ಸನ್ನೆ ಮಾಡಿದರು. ಇತ್ತ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ದಕ್ಷಿಣೆ ಹಾಕಲು ಹಣ ಕೊಡಲು ಮುಂದಾದರು. ಅವರೂ ಬೇಡ ಬಿಡಯ್ಯ ನನ್ನ ಬಳಿ ಇದೆ ಎಂದು ಸನ್ನೆ ಮಾಡಿದರು. ಈ ವೇಳೆ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಸಿದ್ದು ಕಿವಿಯಲ್ಲೇ ಪಿಸುಗುಟ್ಟಿದರು. ಆಗ ಸಿದ್ದು, ಬೊಮ್ಮಾಯಿ ಬೆನ್ನು ಚಪ್ಪರಿಸಿ, ಇಬ್ಬರೂ ನಕ್ಕರು. ಈ ದೃಶ್ಯ ನೆರೆದವರಲ್ಲಿ ಕುತೂಹಲ ಮೂಡಿಸಿತು.