Advertisement

ಮಂತ್ರಿಗಿರಿಗೆ ದಿಲ್ಲಿ ಚಲೋ; ಸಂಪುಟ ಸೇರಲು ಕಾದಿರುವ ಒಂದು ಡಜನ್‌ ಆಕಾಂಕ್ಷಿಗಳು

12:44 AM Apr 06, 2022 | Team Udayavani |

ಬೆಂಗಳೂರು: ದಿಲ್ಲಿ ಪ್ರವಾಸದಲ್ಲಿರುವ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವರಿಷ್ಠರು ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಗ್ರೀನ್‌ ಸಿಗ್ನಲ್‌ ನೀಡಬಹುದು ಎಂಬ ನಿರೀಕ್ಷೆಯಿಂದ ಡಜನ್‌ಗೂ ಹೆಚ್ಚು ಆಕಾಂಕ್ಷಿಗಳು ದಿಲ್ಲಿಯತ್ತ ಮುಖ ಮಾಡಿದ್ದಾರೆ.

Advertisement

ಪ್ರಮುಖವಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕರಾದ ವಿಜಯಪುರದ ಬಸನಗೌಡ ಪಾಟೀಲ್‌, ಗೋಕಾಕ್‌ನ ರಮೇಶ ಜಾರಕಿ ಹೊಳಿ, ಧಾರವಾಡ ಪಶ್ಚಿಮದ ಅರವಿಂದ ಬೆಲ್ಲದ, ಸುರಪುರದ ರಾಜು ಗೌಡ, ಕಲಬುರಗಿ ದಕ್ಷಿಣದ ದತ್ತಾತ್ರೇಯ ಪಾಟೀಲ್‌ ರೇವೂರ, ಚಿತ್ರದುರ್ಗದ ತಿಪ್ಪಾರೆಡ್ಡಿ, ಹೊನ್ನಾಳಿಯ ಎಂ.ಪಿ. ರೇಣುಕಾಚಾರ್ಯ, ಮೂಡಿಗೆರೆಯ ಎಂ.ಪಿ. ಕುಮಾರಸ್ವಾಮಿ, ಹಿರಿಯೂರಿನ ಆರ್‌. ಪೂರ್ಣಿಮಾ, ಹಾಸನದ ಪ್ರೀತಂ ಗೌಡ ಹಾಗೂ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌ ಅದೃಷ್ಟದ ನಿರೀಕ್ಷೆಯಲ್ಲಿದ್ದಾರೆ.

ಇದರ ನಡುವೆ, ರೇಣುಕಾಚಾರ್ಯ, ವಿಜಯೇಂದ್ರ, ಬಸನಗೌಡ ಪಾಟೀಲ್‌ ಸಹಿತ ಅನೇಕ ಶಾಸಕರು ದಿಲ್ಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಜತೆಗೆ ಸಂಪುಟದಿಂದ ಕೈಬಿಡುವ ಆತಂಕದಲ್ಲಿರುವ ಕೆಲವು ಸಚಿವರು ಕೂಡ ಸ್ಥಾನ ಉಳಿಸಿಕೊಳ್ಳುವುದಕ್ಕಾಗಿ ದಿಲ್ಲಿಗೆ ದೌಡಾಯಿಸಿದ್ದಾರೆ.

ಹೀಗಾಗಿ ರಾಷ್ಟ್ರ ರಾಜಧಾನಿಯಲ್ಲಿ ರಾಜ್ಯ ಬಿಜೆಪಿಯ ಬೆಳವಣಿಗೆಗಳ ಬಗ್ಗೆ ಸಾಕಷ್ಟು ಚಟುವಟಿಕೆಗಳು ನಡೆಯುತ್ತಿವೆ.

ಈ ಮಧ್ಯೆ, ಈಗ ಸಂಪುಟ ವಿಸ್ತರಣೆ ಆಥವಾ ಪುನಾರಚನೆ ಸಂಬಂಧ ವರಿಷ್ಠರು ಬುಲಾವ್‌ ನೀಡಿಲ್ಲ. ಅವರು ಕರೆದರೆ ಹೋಗಿ ಮಾತನಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಿಲ್ಲಿಯಲ್ಲಿ ತಿಳಿಸಿದ್ದಾರೆ.

Advertisement

ಕೇಂದ್ರ ಸಚಿವರ ಭೇಟಿ, ರಾಜ್ಯದ ನೀರಾವರಿ ವಿಚಾರಗಳ ಬಗ್ಗೆ ಚರ್ಚೆ, ರಾಜ್ಯದ ಯೋಜನೆಗಳಿಗೆ ಅನುಮತಿ ಪಡೆಯುವುದು ದಿಲ್ಲಿ ಭೇಟಿಯ ಪ್ರಮುಖ ಉದ್ದೇಶ ಎನ್ನಲಾಗುತ್ತಿದೆ. ಆದ ರೂ ಇತ್ತೀಚೆಗೆ ಅಮಿತ್‌ ಶಾ ರಾಜ್ಯ ಪ್ರವಾಸಕ್ಕೆ ಬಂದಿದ್ದಾಗ ಸಂಪುಟ ವಿಸ್ತರಣೆ ವಿಷಯ ಪ್ರಸ್ತಾವವಾಗಿ “ದಿಲ್ಲಿಗೆ ಬಂದಾಗ ಮಾತನಾಡೋಣ’ ಎಂದು ಹೇಳಿದ್ದರು. ಹೀಗಾಗಿ, ನಡ್ಡಾ ಹಾಗೂ ಅಮಿತ್‌ ಶಾ ಅವರ ಭೇಟಿಗೆ ಸಮಯ ಕೇಳಲಾಗಿದೆ ಎಂದೂ ಹೇಳಲಾಗಿದೆ. ಇವರ ಭೇಟಿ ಬಳಿಕ ಸ್ಪಷ್ಟ ಚಿತ್ರಣ ದೊರೆಯಲಿದೆ.

ಇದನ್ನೂ ಓದಿ:ಡಾ| ಪ್ರಭಾಕರ ಭಟ್‌ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

ಹಲವು ಲೆಕ್ಕಾಚಾರ
ಸಂಪುಟ ಪುನಾರಚನೆ ಆಗಲೇಬೇಕೆಂಬ ನಿರೀಕ್ಷೆಯಲ್ಲಿ ಸಾಕಷ್ಟು ಶಾಸಕರಿದ್ದು, ಕೇವಲ ವಿಸ್ತರಣೆಯಾದರೆ, ಖಾಲಿ ಇರುವ ನಾಲ್ಕು ಸ್ಥಾನಗಳನ್ನು ಮಾತ್ರ ಭರ್ತಿ ಮಾಡಲು ಸಾಧ್ಯವಾಗುತ್ತದೆ. ಆದರೆ ಇದರಿಂದ ಸಮಸ್ಯೆಗೆ ಪರಿಹಾರವಾಗುವ ಬದಲು ಮತ್ತಷ್ಟು ಹೆಚ್ಚಾದೀತು ಎಂಬ ಅಭಿಪ್ರಾಯ ಪಕ್ಷದ ವಲಯದಲ್ಲಿದೆ.

ಈ ಕಾರಣದಿಂದ ಹಾಲಿ ಇರುವ ಕೆಲವು ಹಿರಿಯ ಸಚಿವರನ್ನು ಚುನಾವಣೆ ದೃಷ್ಟಿಯಿಂದ ಪಕ್ಷ ಸಂಘಟನೆಗೆ ಬಳಸಿಕೊಂಡರೆ ಹೊಸಬರಿಗೆ ಅವಕಾಶ ಕೊಟ್ಟಂತಾಗುತ್ತದೆ ಎಂಬ ಲೆಕ್ಕಾಚಾರವಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಂಪುಟ ಪುನಾರಚನೆಯಾದರೆ ಕನಿಷ್ಠ 8ರಿಂದ 10 ಸ್ಥಾನಗಳನ್ನು ಭರ್ತಿ ಮಾಡುವ ಸಾಧ್ಯತೆ ಇದ್ದು, ಚುನಾವಣ ವರ್ಷವಾಗಿರುವುದರಿಂದ ಜಾತಿ, ಪ್ರಾದೇಶಿಕತೆಗೆ ಆದ್ಯತೆ ನೀಡುವ ಸಾಧ್ಯತೆ ಇದೆ. ಹೀಗಾಗಿ ಸಚಿವಾಕಾಂಕ್ಷಿಗಳಲ್ಲಿ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಿದ್ದು, ಬಹುತೇಕರು ತಮ್ಮ ಜಿಲ್ಲೆ, ಜಾತಿ ಹಾಗೂ ಪ್ರಾದೇಶಿಕತೆಯ ಲೆಕ್ಕಾಚಾರದಲ್ಲಿ ಸಚಿವ ಸ್ಥಾನ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ.

ಯಾವಾಗ ಪುನಾರಚನೆ?
ವರಿಷ್ಠರು ಒಪ್ಪಿಗೆ ನೀಡಿದರೆ ವಾರಾಂತ್ಯದಲ್ಲಿ ಸಂಪುಟ ಪುನಾರಚನೆಯಾಗುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ, ಎಪ್ರಿಲ್‌ 16ರಂದು ನಡೆಯುವ ರಾಜ್ಯ ಕಾರ್ಯಕಾರಿಣಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಆಗಮಿಸುತ್ತಿರುವುದರಿಂದ ಆ ಬಳಿಕ ವಿಸ್ತರಣೆ ಅಥವಾ ಪುನಾರಚನೆ ನಡೆಯಬಹುದು ಎಂದೂ ಹೇಳಲಾಗುತ್ತಿದೆ.

ಇದುವರೆಗೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತು ವರಿಷ್ಠರಿಂದ ಯಾವುದೇ ಚರ್ಚೆಯಾಗಿಲ್ಲ. ದಿಲ್ಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಸಮಯ ಕೇಳಿದ್ದೇನೆ. ಅವರು ಅವಕಾಶ ಕೊಟ್ಟರೆ ಮಾತುಕತೆ ನಡೆಸುತ್ತೇನೆ.
– ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next