ಬೆಳಗಾವಿ: ವಿಧಾನಪರಿಷತ್ ಸಭಾಪತಿ ಹುದ್ದೆ ಕೈತಪ್ಪಿ ಹೋದ ಬಳಿಕ ಜೆಡಿಎಸ್ ಪರಿಷತ್‌ನ ಹಿರಿಯ ಸದಸ್ಯ ಬಸವರಾಜ್ ಹೊರಟ್ಟಿ ಅವರು ತೀವ್ರ ಅಸಮಧಾನ ಹೊರ ಹಾಕಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೆಬ್ಬೆಟ್ಟು ಒತ್ತುವುದಕ್ಕೆ ಮುಖ್ಯಮಂತ್ರಿಯಾಗಿರಬಾರದು ಎಂದಿದ್ದಾರೆ.
ಹಂಗಾಮಿ ಸಭಾಪತಿ ಸ್ಥಾನದಿಂದ ಇಳಿದ ಬಳಿಕ ಬೆಳಗಾವಿ ಸುವರ್ಣ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೊರಟ್ಟಿ ಅವರು ‘ಎಚ್‌ಡಿಕೆ ಅವರು ಮುಖ್ಯಮಂತ್ರಿಯಾಗಿರುವುದು ಮೈತ್ರಿ ಧರ್ಮ ಪಾಲಿಸುವುದಕ್ಕೆ. ಮೈತ್ರಿ ಪಕ್ಷ ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿಲ್ಲ. ಏಕ ಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಕಾಂಗ್ರೆಸ್ ವರ್ತನೆ ಪ್ರಶ್ನಿಸುವಂತೆ ವರಿಷ್ಠರಿಗೆ ಕೇಳಿಕೊಳ್ಳುತ್ತೇನೆ’ ಎಂದಿದ್ದಾರೆ.
ಪ್ರಮುಖ ಹುದ್ದೆಗಳ ವಿಚಾರದಲ್ಲಿ ಕಾಂಗ್ರೆಸ್ ಹೇಳಿದಂತೆ ನಡೆದರೆ, ಇದೇ ತರ ಮುಂದುವರಿದರೆ ಹೆಬ್ಬೆಟ್ಟು ಒತ್ತುವುದಕ್ಕೆ ಮುಖ್ಯಮಂತ್ರಿ ಆಗುತ್ತಾರೆ ಎಂದು ಎಚ್‌ಡಿಕೆ ವಿರುದ್ಧ ತೀವ್ರ ಅಸಮಧಾನ ಹೊರ ಹಾಕಿದ್ದಾರೆ.
7 ಬಾರಿ ಶಿಕ್ಷಕರ ಕ್ಷೇತ್ರದಿಂದ ಹೊರಟ್ಟಿ ಅವರು ವಿಧಾನಪರಿಷತ್‌ಗೆ ಆಯ್ಕೆಯಾದ ಹಿರಿಯ ಸದಸ್ಯರಾಗಿದ್ದಾರೆ. ಸಚಿವ ಸಂಪುಟದಲ್ಲಿ ಅವರಿಗೆ ಸ್ಥಾನ ಸಿಗುತ್ತದೆ ಎಂದು ಹಲವರು ಅಂದಾಜಿಸಿದ್ದರಾದರೂ ಕೊನೆ ಕ್ಷಣದಲ್ಲಿ ಅವರ ಹೆಸರು ಪಟ್ಟಿಯಿಂದ ಕೈಬಿಡಲಾಗಿತ್ತು.
ಈಗ ಸಭಾ ಪತಿ ಹುದ್ದೆಯಲ್ಲಿ ಮುಂದುವರಿಯಲು ಉತ್ಕಟ ಆಕಾಂಕ್ಷೆ ಹೊಂದಿದ್ದ ಹೊರಟ್ಟಿ ಅವರನ್ನು ಕಡೆಗಣಿಸಿ ಕಾಂಗ್ರೆಸ್‌ನ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಹುದ್ದೆಗೆ ಪರಿಗಣಿಸಲಾಗಿತ್ತು.