ಧಾರವಾಡ: ನವದೆಹಲಿಯ ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಫೆಡರೇಷನ್ (ಎಐಪಿಟಿಎಫ್) ರಾಷ್ಟ್ರೀಯ ಅಧ್ಯಕ್ಷರಾಗಿ ಧಾರವಾಡದ ಬಸವರಾಜ ಗುರಿಕಾರ ಆಯ್ಕೆಯಾಗಿದ್ದಾರೆ.
ಕಳೆದ ಎರಡು ದಿನಗಳಿಂದ ಕೇರಳದ ಎರ್ನಾಕುಲಂನಲ್ಲಿ ನಡೆದ ಚುನಾವಣೆಯ ಪ್ರಕ್ರಿಯೆಯ ಅಂತಿಮದಲ್ಲಿ ಅಧ್ಯಕ್ಷರಾಗಿ ಬಸವರಾಜ ಗುರಿಕಾರ ಆಯ್ಕೆಗೊಂಡಿದ್ದಾರೆ.
ಎಐಪಿಟಿಎಫ್‌ನ 75 ವರ್ಷಗಳ ಸಂಘಟನೆಯ ಇತಿಹಾಸದಲ್ಲಿ ಧಾರವಾಡದ ಬಸವರಾಜ ಗುರಿಕಾರ ಆಯ್ಕೆಯಾಗಿದ್ದು, ಕರ್ನಾಟಕದ ಮೊದಲ ವ್ಯಕ್ತಿಎಂಬುವುದು ವಿಶೇಷ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ, ಮೂರು ಬಾರಿ ರಾಜ್ಯ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಗುರಿಕಾರ ಶಿಕ್ಷಕ ಸಂಘಟನೆಯಲ್ಲಿ ಸುಮಾರು 40 ವರ್ಷಗಳ ದೀರ್ಘ ಕಾಲ ಸೇವೆ ಸಲ್ಲಿಸಿದ್ದಾರೆ.
ಎಐಪಿಟಿಎಫ್‌ನ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಒಡಿಶಾದ ಕಮಲಾಕಾಂತ ತ್ರಿಪಾಠಿ, ಖಜಾಂಚಿಯಾಗಿ ಉತ್ತರಪ್ರದೇಶದ ಉಮಾಶಂಕರ, ಹಿರಿಯ ಉಪಾಧ್ಯಕ್ಷರಾಗಿ ಹರಿಗೋವಿಂದನ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ-1 ಆಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿರುವ ಚಂದ್ರಶೇಖರ ನುಗ್ಗಲಿ ಆಯ್ಕೆಯಾಗಿದ್ದು ವಿಶೇಷ. ಚಿಕ್ಕ ವಯಸ್ಸಿನಲ್ಲಿಯೇ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದು ಇವರ ಸಾಧನೆಯಾಗಿದೆ.
ದೇಶದ 23 ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರ ಸದಸ್ಯತ್ವ ಹೊಂದಿರುವ ಈ ಸಂಘಟನೆ ರಾಷ್ಟ್ರದಲ್ಲಿಯೇ ಅತಿ ದೊಡ್ಡ ಸಂಘಟನೆಯಾಗಿದಲ್ಲದೇ ದೇಶದ 25 ರಾಜ್ಯಗಳ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಗಳು ಈ ಸಂಘದ ಮಾನ್ಯತೆ ಪಡೆದಿವೆ. 187 ದೇಶಗಳ ಶಿಕ್ಷಕರ ಅಂತಾರಾಷ್ಟ್ರೀಯ ಶಿಕ್ಷಕರ ಸಂಘಟನೆಯಾಗಿರುವ ಎಜುಕೇಶನ್ ಇಂಟರ್ ನ್ಯಾನಲ್ ಜತೆ ಅಖಿಲ ಭಾರತ ಪ್ರಾಥಮಿಕ ಶಾಲಾ ಶಿಕ್ಷಕರ ಫೆಡರೇಷನ್ ಸಂಯೋಜನೆ ಹೊಂದಿದೆ. ಇಂತಹ ಮಹತ್ವದ ಸಂಘಟನೆಯ ಚುನಾವಣೆಯ ಮೂಲಕ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಇದೇ ಮೊದಲ ಬಾರಿಯಾಗಿದೆ. ಎರಡು ದಿನಗಳ ಕಾಲ ನಡೆದ ಚುನಾವಣೆಯಲ್ಲಿ 25 ರಾಜ್ಯಗಳ ಆಯಾ ಸಂಘಟನೆಗಳ 247 ಪ್ರತಿನಿಧಿಗಳು ಚುನಾವಣೆಯಲ್ಲಿ ಭಾಗಿಯಾಗಿದ್ದರು. ಹಿಮಾಚಲ ಪ್ರದೇಶದ ಪ್ರೇಮಸಿಂಗ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಇದನ್ನೂ ಓದಿ: Belagavi: ಜೀವ ವಿಮಾ ಪಾಲಿಸಿಯ ಹಣಕ್ಕಾಗಿ ಸಹೋದರನನ್ನೇ ಕೊ*ಲೆ ಮಾಡಿದ ತಮ್ಮ