Advertisement

ಸಹಕಾರ ಮನೋಭಾವದಿಂದ ಸಂಘ ಅಭಿವೃದ್ಧಿ !

07:21 PM Feb 08, 2021 | Team Udayavani |

ಸವಣೂರು: ರೈತರಲ್ಲಿ ಪರಸ್ಪರ ಸಹಕಾರ ಮನೋಭಾವವಿದ್ದರೆ ಎಂತಹ ಆರ್ಥಿಕ ಸಂಕಷ್ಟದ ನಡುವೆಯೂ ಸಹಕಾರಿ ಸಂಘಗಳು ಯಶಸ್ವಿಯಾಗಲು ಸಾಧ್ಯ ಎಂದು ಗೃಹ ಸಚಿವ ಬಸವರಾಜ  ಬೊಮ್ಮಾಯಿ ಹೇಳಿದರು.

Advertisement

ಗುಂಡೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯಾಲಯ ಆವರಣದಲ್ಲಿ ರವಿವಾರ ಏರ್ಪಡಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸಂಘದಲ್ಲಿ ಸಹಕಾರದ ಮೇಲಿನ ನಂಬಿಕೆ ಹಾಗೂ ಛಲದಿಂದ ಮಾತ್ರ ಸಹಕಾರ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ. ರಾಜ್ಯದಲ್ಲಿ ಸಹಕಾರ ರಂಗ ಬೆಳೆಸುವ ಇಚ್ಛಾಶಕ್ತಿ ನಮ್ಮ ಸರ್ಕಾರಕ್ಕಿದೆ. ಆದ್ದರಿಂದ, ಕೋವಿಡ್‌ನ‌ಂತಹ ಸಂದರ್ಭದಲ್ಲಿಯೂ ಸಹಕಾರ ಇಲಾಖೆ ಮೂಲಕ ಸುಮಾರು 432 ಕೋಟಿ ರೂ. ನೀಡಲಾಗಿದೆ. ನಬಾರ್ಡ್‌ನಿಂದ 500 ಕೋಟಿ ರೂ. ಸಾಲ ಪಡೆಯಲು ಸಹಕಾರ ರಂಗಕ್ಕೆ ಸರ್ಕಾರ ಸಹಕಾರ ನೀಡುತ್ತಿದೆ ಎಂದರು.

ಗುಂಡೂರ ಗ್ರಾಮದ ಸಹಕಾರಿ ಸಂಘ ಕೋವಿಡ್‌ ಸಂದರ್ಭದಲ್ಲಿಯೂ 5 ಕೋಟಿ ಸಾಲ ಹಾಗೂ ಇತರೆ 3 ಕೋಟಿ ಸಾಲ ನೀಡಿ ರೈತರ ಸಹಾಯಕ್ಕೆ ನಿಂತಿರುವುದು ಸಂತಸ ತಂದಿದೆ. ರೈತರು ಸಕಾಲದಲ್ಲಿ ಸರ್ಕಾರದ ಯೋಜನೆ ಪಡೆಯುವ ಮೂಲಕ ಆರ್ಥಿಕ ಅಭಿವೃದ್ಧಿಗೆ ಮುಂದಾಗಬೇಕು ಎಂದರು.

ಧಾರವಾಡ ಕೆಸಿಸಿ ಬ್ಯಾಂಕ್‌ ಅಧ್ಯಕ್ಷ ಬಾಪುಗೌಡ ಪಾಟೀಲ ಮಾತನಾಡಿ, ಭಾರತದಲ್ಲಿ ಸಹಕಾರ ಸಂಘ ಸ್ಥಾಪನೆಗೆ ಅಖಂಡ ಧಾರವಾಡ ಜಿಲ್ಲೆಯ ಕಣಗಿನಹಾಳ ಗ್ರಾಮದ ಸಿದ್ದನಗೌಡ ಪಾಟೀಲ  ಕಾರಣವಾಗಿದ್ದಾರೆ. ಬಸವರಾಜ ಬೊಮ್ಮಾಯಿ ಅವರು ಸಹಕಾರಿ ಸಚಿವರಾದ ಸಂದರ್ಭದಲ್ಲಿ ರೈತರ 400 ಕೋಟಿ ಸುಸ್ತಿ ಬಡ್ಡಿ ಮನ್ನಾ ಮಾಡಿದ್ದಾರೆ. ಸಾಲ ಮರು ಪಾವತಿಸಲು ರೈತರಿಗೆ ಮಾ.25ರವರೆಗೆ ಗಡುವು ನೀಡಲಾಗಿದೆ. ಆದ್ದರಿಂದ, ಸಾಲ ಮರುಪಾವತಿಸಲು ಇನ್ನಷ್ಟು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.

Advertisement

ಗುಂಡೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ವೀರಣ್ಣ ಗಾಣಗೇರ ಪ್ರಾಸ್ತಾವಿಕ ಮಾತನಾಡಿದರು. ಅಧ್ಯಕ್ಷ ಧರಿಯಪ್ಪಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶಿರಹಟ್ಟಿಯ ಶ್ರೀ ಫಕೀರಸಿದ್ದರಾಮ ಸ್ವಾಮೀಜಿ, ಬಾಲೇಹೊಸೂರ ಶ್ರೀ ದಿಂಗಾಲೇಶ್ವರ ಸ್ವಾಮೀಜಿ, ಮಂತ್ರವಾಡಿ ಗ್ರಾಮದ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ, ಸವಣೂರಿನ ಕಲ್ಮಠದ ಶ್ರೀ ಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಇದನ್ನು ಓದಿ :ರಾಮ ಮಂದಿರಕ್ಕೆ ನಿಧಿ ಸಂಗ್ರಹ

ಸಮಾರಂಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ನಿವೃತ್ತ ಕಾರ್ಯದರ್ಶಿ ಚನ್ನಬಸಪ್ಪ ಅರಗೋಳ ಹಾಗೂ ಸಹಕಾರಿ ರಂಗದ ಧುರೀಣರನ್ನು ಸನ್ಮಾನಿಸಲಾಯಿತು. ಈ ವೇಳೆ ಧಾರವಾಡ ಕೆಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಎಸ್‌.ವೈ. ಪಾಟೀಲ, ಸವಣೂರ ಪುರಸಭೆ ಅಧ್ಯಕ್ಷೆ ಶೈಲಾ ಮುದಿಗೌಡ್ರ, ಉಪವಿಭಾಗಾಧಿ ಕಾರಿ ಅನ್ನಪೂರ್ಣ ಮುದಕಮ್ಮನವರ, ಶಂಕರಗೌಡ ಪಾಟೀಲ, ಎಂ. ಜಾವೀದ, ಡಾ| ಎಚ್‌.ಐ. ತಿಮ್ಮಾಪುರ, ತೆಗ್ಗಿಹಳ್ಳಿ ಗ್ರಾಪಂ ಅಧ್ಯಕ್ಷ ಗಿರೀಶಗೌಡ ಪಾಟೀಲ, ಮಂತ್ರೋಡಿ ಗ್ರಾಪಂ ಅಧ್ಯಕ್ಷೆ ಕಾಳವ್ವ ಬಡಿಗೇರ ಇತರರಿದ್ದರು. ಶಿಕ್ಷಕರಾದ ವಿದ್ಯಾಧರ ಕುತನಿ, ಮುಂತಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next