ಬೆಂಗಳೂರು : ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಆಯೋಜಿಸಿದ್ದ ಜನೋತ್ಸವ ಕಾರ್ಯಕ್ರಮ ಈಗ ಅವರ ಪಾಲಿಗೆ ಚೌತಿ ಚಂದ್ರಮನಂತಾಗಿದೆ.
ಒಂದಿಲ್ಲೊಂದು ಕಾರಣಕ್ಕೆ ಜನೋತ್ಸವ ಕಾರ್ಯಕ್ರಮದತ್ತ ಕಣ್ಣಿಟ್ಟು ನೋಡುವುದಕ್ಕೂ ಸಾಧ್ಯವಾಗದ ಪರಿಸ್ಥಿತಿ ಬೊಮ್ಮಾಯಿ ಅವರಿಗೆ ಎದುರಾಗುತ್ತಿದ್ದು, ಜನೋತ್ಸವ ಈಗ ಮತ್ತೆ ಮುಂದೂಡಿಕೆಯಾಗಿದೆ.
ಈ ಹಿಂದೆ ಜನೋತ್ಸವ ಕಾರ್ಯಕ್ರಮ ನಿಗದಿಯಾಗಿದ್ದಾಗ ಪ್ರವೀಣ್ ನೆಟ್ಟಾರು ಹತ್ಯೆ ನಡೆಯಿತು. ಆಗ ಸರಕಾರ ವರ್ಷಾಚರಣೆ ಸಂಭ್ರಮ ನಡೆಸುವುದು ಬೇಡ ಎಂದು ಕಾರ್ಯಕರ್ತರು ಪಟ್ಟು ಹಿಡಿದರೂ ಬೊಮ್ಮಾಯಿ ಜನೋತ್ಸವದ ಜಪದಲ್ಲಿದ್ದರು. ತಡರಾತ್ರಿ ಹೈಕಮಾಂಡ್ ನ ಹಿರಿಯರೊಬ್ಬರು ಕರೆ ಮಾಡಿ ” ಪ್ರಸಂಗಾವಧಾನತೆ” ಎಂಬ ಶಬ್ದ ಕನ್ನಡದ ಡಿಕ್ಶನರಿಯಲ್ಲಿ ಇರುವುದು ಗೊತ್ತೇ ? ಎಂದು ಪ್ರಶ್ನಿಸಿದ್ದರು.
ಹೀಗಾಗಿ ಜಗವೆಲ್ಲ ಮಲಗಿರಲು ಎದ್ದ ಬುದ್ಧನ ರೀತಿ ಮಧ್ಯರಾತ್ರಿ 12 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಿ ಜನೋತ್ಸವವನ್ನು ರದ್ದುಗೊಳಿಸಿದ ನಿರ್ಧಾರ ಪ್ರಕಟಿಸಿದ್ದರು. ಈಗ ಪಕ್ಷದ ವೇದಿಕೆಯಲ್ಲಿ ಚರ್ಚಿಸದೇ ಆಗಷ್ಟ್ ೨೮ ರಂದು ಜನೋತ್ಸವ ನಡೆಸುವುದಾಗಿ ಪ್ರಕಟಿಸಿದ್ದರು. ಆದರೆ ಪಕ್ಷ ಅದಕ್ಕೆ ಮತ್ತೆ ತಡೆ ಒಡ್ಡಿದೆ. ನಾಡು ಗೌರಿ- ಗಣೇಶ ಹಬ್ಬದ ಸಂಭ್ರಮದಲ್ಲಿ ಇರುವಾಗ ಜನೋತ್ಸವ ಬೇಡ ಎಂದು ಕಾರಣ ನೀಡಲಾಗಿದೆ.
ಬೊಮ್ಮಾಯಿ ಅವರ ” ಪೊಲಿಟಿಕಲ್ ಬಾಸ್ ” ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿಯಲ್ಲಿ ಸ್ಥಾನ ಪಡೆದ ಬೆನ್ನಲ್ಲೇ ಬೊಮ್ಮಾಯಿ ಅವರ ರಾಜಕೀಯ ಸಮಾವೇಶಕ್ಕೆ ಮತ್ತೊಮ್ಮೆ ಬ್ರೇಕ್ ಬಿದ್ದಿದೆ. ಕಾಕತಾಳೀಯವಾದರೂ ರಾಜಕೀಯವಾಗಿ ಇದು ಹಲವು ಲೆಕ್ಕಾಚಾರ ಹಾಗೂ ಸಂದೇಶ ರವಾನೆಗೆ ಕಾರಣವಾಗಿದ್ದು, ಜನೋತ್ಸವದಲ್ಲಿ ಜನರತ್ತ ವಿಕ್ಟರಿ ಸಿಂಬಲ್ ಬೀಸಲು ಕಾಯುತ್ತಿರುವ ಬೊಮ್ಮಾಯಿ ಅವರಿವೆ ಜನೋತ್ಸವ ಚೌತಿ ಚಂದ್ರನ ದರ್ಶನದಂತಾಗಿದೆ.