ಅಫಜಲಪುರ: ಎಂಟನೂರು ವರ್ಷಗಳ ಹಿಂದೆ ಕುಲಕ್ಕೊಬ್ಬ ಶರಣರು ಸೇರಿ ನಾಡಿನಲ್ಲಿ ವೈಚಾರಿಕ ಕ್ರಾಂತಿಯ ವಾತಾವರಣ ನಿರ್ಮಿಸುವ ಮೂಲಕ ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದು ಚಿತ್ತಾಪುರ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ| ವಿಜಯಕುಮಾರ ಸಾಲಿಮನಿ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ನಡೆದ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಸಮಾಜದಲ್ಲಿ ಆಚರಣೆಯಲ್ಲಿದ್ದ ಮೌಡ್ಯತೆ ವಿರುದ್ಧ ಶರಣರು ನಿರಂತರವಾಗಿ ಹೋರಾಟ ಮಾಡಿದ್ದರು. ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಸಾಮಾಜಿಕ ಕ್ರಾಂತಿ ಮಾಡಿದ್ದರು ಎಂದರು.
ಸಮಾಜದಲ್ಲಿ ಎಲ್ಲರೂ ಸರಿ ಸಮಾನರಾಗಿ ಬದುಕು ಮಾಡಬೇಕೆಂಬ ಮಹಾದಾಸೆ ಹೊತ್ತು ವಚನ ಕ್ರಾಂತಿ ಮಾಡಿದ್ದರು ಬಸವಣ್ಣ. ಅವರನ್ನು ಇಡೀ ವಿಶ್ವವೇ ಆರಾಧಿಸುತ್ತಿದೆ. ಅವರ ಚಿಂತನೆಗಳು ಸರ್ವರಿಗೂ ದಿವ್ಯೌಷಧ ಇದ್ದಂತೆ. ಈ ವೈಚಾರಿಕ ಚಿಂತನೆಗಳನ್ನು ಹರಡಲು ಶರಣ ಸಾಹಿತ್ಯ ಪರಿಷತ್ ಶ್ರಮಿಸುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ಧರ್ಮಸ್ಥಳದ ಧರ್ಮಾಧಿಕಾರಿ ಕಾರ್ಯ ಮಾದರಿ
ಶರಣ ಸಾಹಿತ್ಯ ತಾಲೂಕಾಧ್ಯಕ್ಷ ಬಸವರಾಜ ಚಾಂದಕವಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಸವರಾಜ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಅಮರಸಿಂಗ್ ರಜಪೂತ ಮಾತನಾಡಿದರು. ಕಾಂಗ್ರೆಸ್ ಮುಖಂಡ ಎಸ್.ವೈ. ಪಾಟೀಲ ಉದ್ಘಾಟಿಸಿದರು. ಶರಣರಾದ ಶೋಭಾ ಜಗನ್ನಾಥ ಮೋರೆ, ಮಹಾಂತೇಶ ಹಡಪದ ಹವಳಗಾ, ಮಹೇಶ ಆಲೇಗಾಂವ, ರಮೇಶ ಹೂಗಾರ, ಯಲ್ಲಾಲಿಂಗ ಹಾದಿಮನಿ, ಗೋಪಾಲ ಶರಣರು ಹಳ್ಯಾಳ, ಪ್ರಭಾವತಿ ಮೇತ್ರೆ, ಉದಯಕುಮಾರ ವಾಡೇಕರ್, ಚಂದ್ರಕಾಂತ ಸಿಂಗೆ, ಬಿ.ಎಂ.ರಾವ್, ಸಂತೋಶ್ರೀ ಕಾಳೆ, ಲಾಲಭಾಷಾ ಗೌರ, ಸಿದ್ಧಣ್ಣಗೌಡ ಮಾಲಿ ಪಾಟೀಲ, ಚಂದ್ರಕಾಂತ ದೇವರಮನಿ ಆಲಮೇಲ ಇತರರು ಇದ್ದರು.