ಹುಮನಾಬಾದ: ವಿಶ್ವಗುರು ಬಸವಣ್ಣನ ಸಪ್ತಸೂತ್ರ ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಹಿರಿಯರು ಆ ದಾರಿಯಲ್ಲಿ ನಡೆದು ಮಕ್ಕಳಿಗೆ ಪ್ರೇರಣೆ ಆಗಬೇಕು ಎಂದು ಜಿಪಂ ಮಾಜಿ ಅಧ್ಯಕ್ಷೆ ಸಂತೋಷಮ್ಮ ಕೌಡ್ಯಾಳೆ ಹೇಳಿದರು. ಇಲ್ಲಿನ ಬಸವನಗರ ಬಡಾವಣೆಯಲ್ಲಿ ಕಲ್ಯಾಣ ಕರ್ನಾಟಕ ಪ್ರತಿಷ್ಠಾನ ಶ್ರಾವಣ ಮಾಸ ನಿಮಿತ್ತ ಹಮ್ಮಿಕೊಂಡಿರುವ “ಮನೆ ಮನೆಯಲ್ಲಿ
ಬಸವ ಬೆಳಗು’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚಿಟಗುಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಮಹಾದೇವ ಉಪ್ಪಿನ್ ವಿಶೇಷ ಉಪನ್ಯಾಸ ನೀಡಿ, ಬಸವಾದಿ
ಶರಣರು ನುಡಿದಂತೆ ನಡೆದು ತೋರಿಸಿದರೆಂಬ ಕಾರಣಕ್ಕೆ ಭಾರತ ಮಾತ್ರವಲ್ಲ, ಇಡೀ ವಿಶ್ವವೇ ಅವರ ತತ್ವಗಳನ್ನು ಒಪ್ಪಿ ಅಪ್ಪಿಕೊಂಡಿದೆ. ಇಲ್ಲಿನ ಎಲ್ಲ ಬಸವ ಸಂಘಟನೆಗಳು ಅದಕ್ಕೆ ಬದ್ಧವಾಗಿವೆ ಎಂಬುದಕ್ಕೆ ತಡೆರಹಿತ ಬಸವತತ್ವ ಪ್ರಚಾರ ನಡೆಯುತ್ತಿರುವುದೇ ಸಾಕ್ಷಿ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ವೀರಭದ್ರೇಶ್ವರ ಔಷಧ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ನಾಗೇಂದ್ರ ಧುಮ್ಮನಸೂರೆ ಮಾತನಾಡಿ, ಕನ್ನಡ ಸಾಹಿತ್ಯದಿಂದ ವಚನ ಸಾಹಿತ್ಯವನ್ನು ಬದಿಗಿಟ್ಟರೇ ಅದರ ತೂಕ ಕಡಿಮೆಯಾಗುತ್ತದೆ. ಬಸವಾದಿ ಶರಣರ ಕಾಯಕ ತತ್ವ ಮೆಚ್ಚಿ 12ನೇ ಶತಮಾನದಲ್ಲಿ ವಿವಿಧ ರಾಷ್ಟ್ರಗಳ ಅರಸರು ಕಲ್ಯಾಣದತ್ತ ಹರಿದುಬಂದದ್ದೇ ಇದಕ್ಕೆ ಸಾಕ್ಷಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ತಾಲೂಕು ಅಧ್ಯಕ್ಷ ಶರಣ ಪಂಡಿತ ಬಾಳೂರೆ ಮಾತನಾಡಿ, ಶರಣರು ವಚನಗಳನ್ನು ಏನೋ ಹೇಳಬೇಕೆಂದು ರಚಿಸಿರುವಂಥವಲ್ಲ. ಆ ವಚನಗಳು ವೈಜ್ಞಾನಿಕ ನೆಲೆಗಟ್ಟಿನಲ್ಲಿ ರಚನೆಯಾಗಿರುವಂಥವು. ಅವರ ತತ್ವಗಳನ್ನು ವಿಶ್ವದ ಯಾವುದೇ ಧರ್ಮ ತಿರಸ್ಕರಿಸಲು ಸಾಧ್ಯವಾಗದಂಥ ಸಂದೇಶ ಸಾರಿದ್ದಾರೆ ಎಂದರು.
ಸಾಂತಪ್ಪಾ ದುಬಲಗುಂಡಿ, ಅಣ್ಣಾರಾವ್ ಕುಲಕರ್ಣಿ, ಮಲ್ಲಿಕಾರ್ಜುನ ನೀಲಕಂಠೆ, ಕೆ.ಎಂ. ಪಾಟೀಲ, ಮಂಜುನಾಥ ಲಗಶೆಟ್ಟೆ, ಪ್ರಿಮಾ ಕೌಡಿಯಾಳ, ಸುಜಾತಾ ಸಜ್ಜನ ಶೆಟ್ಟಿ, ಶ್ರೀದೇವಿ ಹುಗ್ಗೆ, ಸರಸ್ವತಿ ಧನ್ನೂರೆ, ವಿಜಯಲಕ್ಷ್ಮೀ, ಪ್ರಭಾವತಿ, ಸುಮಿತ್ರಾ ಇದ್ದರು. ಗೌರಮ್ಮ ಬಾಲಕುಂದೆ ಪ್ರಾರ್ಥಿಸಿದರು. ತೀರ್ಥಪ್ಪಾ ಭೀಮಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಶರಣೆ ಶ್ರೀದೇವಿ ಮೋತಕಪಳ್ಳಿ ನಿರೂಪಿಸಿದರು. ಅಂಜನಾದೇವಿ ದುಬಲಗುಂಡಿ ವಂದಿಸಿದರು.