Advertisement

ಬಸವಣ್ಣನನ್ನು ಮೊದಲು ಗುರುತಿಸಿದ್ದೇ ಸೂಫಿಗಳು

11:35 AM Mar 16, 2019 | |

ವಿಜಯಪುರ: ಕಾಯಕ ಎನ್ನುವ ಶಬ್ದವನ್ನು ಅರ್ಥೈಸಿಕೊಳ್ಳದಿರುವುದು ಕನ್ನಡಿಗರ ಮತ್ತು ಲಿಂಗಾಯತರ ಪಾಲಿನ ದೊಡ್ಡ ದುರಂತ. ಬಸವಣ್ಣ ಎಂದರೆ ದನ, ಎತ್ತು ಎಂಬ ಬಿತ್ತಿರುವ ಕಲ್ಪನೆ ಗಾಢವಾಗಿದ್ದ ಕಾಲದಲ್ಲಿ 1820ರಲ್ಲಿ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ಸಾಲಗುಂದ ಗ್ರಾಮದ ಜಹಗೀರದಾರ ಸೂಫಿಗಳು ಮತ್ತು ಬಸವಣ್ಣನ ಕುರಿತು ತತ್ವಪದಗಳನ್ನು ಬರೆದು ಜನಪ್ರಿಯಗೊಳಿಸಿದರು ಎಂದು ಚಿಂತಕ ರಂಜಾನ್‌ ದರ್ಗಾ ಹೇಳಿದರು.

Advertisement

ವಿಜಯಪುರದ ವಚನ ಪಿತಾಮಹ ಡಾ| ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿಂತನ ಸಾಂಸ್ಕೃತಿಕ ಬಳಗದ ಸಹಯೋಗದಲ್ಲಿ ಏರ್ಪಡಿಸಿದ್ದ ಸಾಧಕರೊಂದಿಗೆ ಸಂವಾದದಲ್ಲಿ ಪಾಲ್ಗೊಂಡು ಸಭಿಕರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಆಧಾರಗಳಿಂದ ಉತ್ತಂಗಿ ಚನ್ನಬಸಪ್ಪ, ಡಾ| ಫ.ಗು. ಹಳಕಟ್ಟಿ, ಹರ್ಡೆàಕರ್‌ ಮಂಜಪ್ಪ ಅವರಂಥ ಸಂಶೋಧಕರು ಬಸವಾದಿ ಶರಣರ ಕುರಿತು ಬೆಳಕು ಚೆಲ್ಲಲು ಸಹಕಾರಿ ಆಯ್ತು ಎಂದು ವಿಶ್ಲೇಷಿಸಿದರು. 

ಇಡೀ ವಿಶ್ವಕ್ಕೆ ಮಾರ್ಗದರ್ಶನ ಮಾಡುವ ಸಾಲಿನಲ್ಲಿ ನಿಲ್ಲಬೇಕಿದ್ದ ಲಿಂಗಾಯತರು ಇಂದಿಗೂ ಸಹ 15ನೇ ಶತಮಾನದಲ್ಲಿ ಇದ್ದ ವಿಘಟನೆ ಹಾದಿಯಲ್ಲೇ ಸಾಗಿದ್ದಾರೆ. ಪಂಚಮಸಾಲಿಗಳು, ಬಣಜಿಗರು, ರೆಡ್ಡಿಗಳು, ಗಾಣಿಗರು, ನೊಣಬರು, ಸಾಧರು, ಆದಿಗಳು, ಅಂತ್ಯ ಎಂದು ದುರಂತದತ್ತ ಸಾಗುತ್ತಿದ್ದಾರೆ ಎಂದು ವಿಷಾದಿಸಿದರು.

12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ನಡೆದದ್ದು ಕ್ರಾಂತಿಯಲ್ಲ, ಅದು ಬಸವಾದಿ ಶರಣರು ಮಾಡಲು ಹೊರಟಿದ್ದ ಕ್ರಾಂತಿಯನ್ನು ತಪ್ಪಿಸಲು ನಡೆಸಿದ ಕ್ಷೀಪ್ರಕ್ರಾಂತಿ. ಆದರೆ ನಾವು ಕಲ್ಯಾಣ ಕ್ರಾಂತಿ ಎಂಬ ಮಿಥ್ಯೆಯಲ್ಲಿದ್ದೇವೆ. ಕ್ಷೀಪ್ರಕ್ರಾಂತಿ ನಂತರ ಅವಸಾನವಾಗುತ್ತಿದ್ದ ಲಿಂಗಾಯತ ಬಸವಧರ್ಮಕ್ಕೆ ರಾಜಾಶ್ರಯ ನೀಡಿದವರು ವಿಜಯನಗರ ಅರಸರು. ತಮ್ಮ ಆಸ್ಥಾನದಲ್ಲಿ ಸಾವಿರಾರು ಲಿಂಗಾಯತರಿಗೆ ಸ್ಥಾನಮಾನ ದೊರಕಿಸಿಕೊಟ್ಟರು. ಆ ಸ್ಥಾನಮಾನಗಳಿಂದ ಮುಂದೆ ಬಂದ ಲಿಂಗಾಯತರು ತಾವು ಶ್ರೇಷ್ಠರೂ, ವೈದಿಕರಿಗಿಂತ ಕಡಿಮೆಯಿಲ್ಲ ಎಂಬ ಭ್ರಮೆಯಲ್ಲಿ ಪೀಠಗಳನ್ನು, ಕಾಳಾಮುಖೀ, ಮಠ, ಗುರು, ಸ್ವಾಮಿಗಳನ್ನು ಸೃಷ್ಠಿಸಿಕೊಂಡರು. ಮಾನವ ಕುಲದ  ವಿಮೋಚನೆಯ ಸಿದ್ಧಾಂತವಾಗಬೇಕಿದ್ದ,ಲಿಂಗಾಯತರು ತಮ್ಮಲ್ಲಿಯ ಗುರುಗಳನ್ನು ಸೃಷ್ಠಿಸಿ, ಈ ಧರ್ಮದ ಬೆಳವಣಿಗೆಗೆ ತಡೆ ಒಡ್ಡಿದರು ಎಂದರು.

ಈ ವ್ಯವಸ್ಥೆಯಿಂದ ಬೇಸತ್ತು ವಿಜಯನಗರ ಆಸ್ಥಾನದಲ್ಲಿದ್ದ ಕೊಡೆಕಲ್‌ ಬಸವಣ್ಣನಂತಹ ಅನುಭಾವಿಗಳು ಕೊಡೆಕಲ್‌ಗೆ 1510ರಲ್ಲಿ ಬಂದು ನೆಲೆ ನಿಂತು, ಸೂಫಿ ಸಂತರ ಪ್ರಭಾವಕ್ಕೊಳಗಾಗಿ ಬಸವಣ್ಣನ ಕುರಿತು ತತ್ವಪದಗಳನ್ನು ಬರೆದು, ಹಾಡುತ್ತ ಪ್ರಚಾರ ಮಾಡಿದರು. 8ನೇ ಶತಮಾನದಲ್ಲಿ ಉದಯಗೊಂಡ ಸೂಫಿಗಳ ಸಿದ್ಧಾಂತ ಮತ್ತು 12ನೇ ಶತಮಾನದ ಶರಣರ ಸಿದ್ಧಾಂತ ಪೂರಕವಾಗಿದ್ದು, ಆ ಕಾರಣಕ್ಕಾಗಿಯೇ ವಿಜಯಪುರ ಪರಿಸರದ ಸೂಫಿಗಳು ಶರಣರ ತತ್ವಗಳಿಗೆ ಮಾರು ಹೋಗಿ, ಉಳಿದೆಲ್ಲ ಸೂಫಿಗಳಿಗಿಂತ ಶ್ರೇಷ್ಠವಾದದನ್ನು ನೀಡಿದ್ದಾರೆ ಎಂದು ವಿವರಿಸಿದರು.

Advertisement

1215ರಲ್ಲಿ ರೂಪಿತಗೊಂಡ ಮ್ಯಾಗ್ನಾಕಾರ್ಟ್‌ ಒಪ್ಪಂದವನ್ನು ಜಗತ್ತಿನ ಎಲ್ಲ ಸಂವಿಧಾನಗಳ ತಾಯಿ ಎಂದು ಹೇಳುತ್ತಾರೆ. ಆದರೆ ಅದಕ್ಕಿಂತಲೂ ಮುಂಚೆ ರಚಿತವಾದ ಬಸವ ಸಿದ್ಧಾಂತ ಜಗತ್ತಿನ ಪ್ರಪ್ರಥಮ ಸಂವಿಧಾನ. ಇದನ್ನು ಇಂಗ್ಲೆಂಡಿನ ಸಂಸತ್‌ನಲ್ಲಿ ಸಭಾಪತಿ ಜಾನ್‌ ಬರ್ಕೊವ್‌ ಹೇಳುತ್ತಾರೆ. ಆದರೆ ಬಸವ ಸಿದ್ಧಾಂತವನ್ನು ಸರಿಯಾಗಿ ಅರ್ಥೈಸಿಕೊಳ್ಳದ ನಮ್ಮ ವಿಶ್ವವಿದ್ಯಾಲಗಳು ಬಸವಣ್ಣ ಗುರು ನಾವೆಲ್ಲ ಭಕ್ತರು ಎಂದು ರೂಪಿಸುತ್ತಿರುವದು ದುರಂತ ಎಂದರು. 

ಡಾ| ಹಳಕಟ್ಟಿ ಸಂಶೋಧನಾ ಕೇಂದ್ರ ಕಾರ್ಯದರ್ಶಿ ಡಾ| ಎಂ.ಎಸ್‌. ಮದಭಾವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಎಚ್‌.ಬಿ. ವಿದ್ಯಾವತಿ, ಡಾ| ಮಹಾಂತೇಶ ಬಿರಾದಾರ, ಡಾ| ಮಲ್ಲಿಕಾರ್ಜುನ ಮೇತ್ರಿ, ಪ್ರೊ| ಯು. ಎನ್‌. ಕುಂಟೋಜಿ, ಜಂಬುನಾಥ ಕಂಚ್ಯಾಣಿ, ವಿದ್ಯಾವತಿ ಅಂಕಲಗಿ, ಆರ್‌. ವೈ. ಕೊಣ್ಣೂರ, ಗುರುಶಾಂತ ಕಾಪಸೆ, ಸಿದ್ದು ಮಲ್ಲಿಕಾರ್ಜುನಮಠ, ವಿ.ಡಿ. ಐಹೊಳ್ಳಿ, ವಿ.ಸಿ. ನಾಗಠಾಣ, ದಾಕ್ಷಾಯಿಣಿ ಬಿರಾದಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next