Advertisement

ಸ್ವತಂತ್ರ ಧರ್ಮ ಬೇಕೆನ್ನೋರು ಬಸವಣ್ಣ-ವಚನ ತೊರೆಯಲಿ

06:25 AM Sep 05, 2017 | |

ಶಿವಯೋಗ ಮಂದಿರ (ಬಾಗಲಕೋಟೆ ಜಿಲ್ಲೆ): ವೀರಶೈವ-ಲಿಂಗಾಯತ ಬೇರೆ ಬೇರೆ ಎಂದು ಬೆಂಕಿ ಹಚ್ಚಲು ಹಾಗೂ ಸ್ವತಂತ್ರ ಧರ್ಮ ರಚನೆಗೆ ಅವಕಾಶ ನೀಡುವುದಿಲ್ಲ. ಸ್ವತಂತ್ರ ಧರ್ಮವೇ ಬೇಕೆನ್ನುವವರು ವೀರಶೈವ ಪರಂಪರೆಯ ಶರಣರ ವಚನ ಸಾಹಿತ್ಯ ಹಾಗೂ ಬಸವಣ್ಣನನ್ನು ಬಿಟ್ಟು ಹೊರಹೋಗಲಿ…

Advertisement

ಇದು ಬಾದಾಮಿಯ ಶಿವಯೋಗ ಮಂದಿರದಲ್ಲಿ ಸೋಮವಾರ ನಡೆದ ಗುರು-ವಿರಕ್ತ ಮಠಾಧೀಶರು ಹಾಗೂ ಭಕ್ತರ ಸದ್ಭಾವನಾ ಸಮಾವೇಶದಲ್ಲಿ ನೀಡಲಾದ ಎಚ್ಚರಿಕೆಯ ಸಂದೇಶ. ಹಾಗೆಯೇ ವೀರಶೈವ-ಲಿಂಗಾಯತ ಧರ್ಮ ಬೇರೆ ಅಲ್ಲ. ಬೇರೆಯಾಗಿಸಲೂ ಸಾಧ್ಯವೇ ಇಲ್ಲ ಎಂದು ಒಕ್ಕೊರಲಿನಿಂದ ಸಾರಲಾಯಿತು.

ಅಖೀಲ ಭಾರತ ವೀರಶೈವ ಮಹಾಸಭಾದ ಸಂಸ್ಥಾಪಕ ಶ್ರೀಹಾನಗಲ್ಲ ಕುಮಾರಸ್ವಾಮಿ ಅವರ 150ನೇ ಜಯಂತಿ ದಿನವೇ ನಡೆದ ಈ ಸಮಾವೇಶ ಗುರು-ವಿರಕ್ತ ಮಠಾಧೀಶರ ಸಮಾನ ವೇದಿಕೆಗೆ ಸಾಕ್ಷಿಯಾಯಿತು. ಪಂಚಪೀಠಗಳ ನಾಲ್ವರು ಜಗದ್ಗುರುಗಳು, ನೂರಾರು ವಿರಕ್ತ ಮಠಾಧೀಶರು ಹಾಗೂ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಶೇ.1ರಷ್ಟು ಜನರ ಬೇಡಿಕೆ:
ಪಂಚಪೀಠ ಹಾಗೂ ವಿರಕ್ತ ಮಠಗಳ ವಿವಿಧ ಮಠಾಧೀಶರು ಆಶೀರ್ವಚನ ನೀಡಿ, ವೀರಶೈವ-ಲಿಂಗಾಯತದಲ್ಲಿ ಯಾವುದೇ ಗೊಂದಲವಿಲ್ಲ. ಕೆಲ ಸ್ವಾಮೀಜಿಗಳು ಸುಳ್ಳು ಹೇಳುವ ಮೂಲಕ ಸಮಾಜವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಗೋವಿನಂತಿರುವ ವೀರಶೈವ-ಲಿಂಗಾಯತ ಧರ್ಮವನ್ನು ತುಂಡರಿಸಲು ಕೆಲವರು ಮುಂದಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಲಿಂಗಾಯತ ಸ್ವತಂತ್ರ ಧರ್ಮ ಬೇಕು ಎನ್ನುವವರ ಸಂಖ್ಯೆ ಶೇ.1ರಷ್ಟು ಮಾತ್ರ. ಮಿಕ್ಕವರು ವೀರಶೈವ-ಲಿಂಗಾಯತ ಧರ್ಮವೇ ಇರಲಿ ಎನ್ನುತ್ತಿದ್ದಾರೆ. ಬಸವಣ್ಣನವರಿಗಿಂತಲೂ ಮೊದಲು ವೀರಶೈವ ಇತ್ತು. ಗುರು-ವಿರಕ್ತರು ಒಂದಾಗಬೇಕು ಎಂಬುದು ಹಾನಗಲ್ಲ ಕುಮಾರ ಸ್ವಾಮಿಗಳ ಆಶಯವೂ ಆಗಿತ್ತು. ಪಂಚಾಚಾರ್ಯರ ಆದರ್ಶಕ್ಕೆ ಮಾರು ಹೋಗಿ ಬಸವಣ್ಣ ವೀರಶೈವ ಧರ್ಮ ಸ್ವೀಕರಿಸಿದರು. ಆದರೆ ಇಂದು ಕೆಲವರು ಬಸವಣ್ಣನವರಿಗೆ ಕಳಂಕ ತರುವಂತೆ ವರ್ತಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

ಸ್ವತಂತ್ರ ಧರ್ಮ ಅಸಾಧ್ಯ:
ವೀರಶೈವ-ಲಿಂಗಾಯತ ಸನಾತನ ಧರ್ಮವಾಗಿದೆ. ವಚನ ಸಾಹಿತ್ಯದಲ್ಲೂ ವೀರಶೈವವೇ ಪ್ರಮುಖ ಪ್ರಸ್ತಾಪವಾಗಿದೆ. ಈಗಲ್ಲ ಇನ್ನು ಸಾವಿರ ವರ್ಷ ಬಡಿದಾಡಿದರೂ ಲಿಂಗಾಯತ ಸ್ವತಂತ್ರ ಧರ್ಮವಾಗಲು ಸಾಧ್ಯವೇ ಇಲ್ಲ. ಅದಕ್ಕೆ ಗುರು-ವಿರಕ್ತ ಹಾಗೂ ವೀರಶೈವ-ಲಿಂಗಾಯತ ಸಮಾಜ ಎಂದೆಂದಿಗೂ ಅವಕಾಶ ನೀಡುವುದೇ ಇಲ್ಲ. ಈ ನಿಟ್ಟಿನಲ್ಲಿ ಎಂತಹ ತ್ಯಾಗಕ್ಕೂ ಸಿದ್ದ. ಸಮಾಜ ಒಂದುಗೂಡಿಸಬೇಕೇ ವಿನಃ ಸ್ವಾರ್ಥಕ್ಕಾಗಿ ಸಮಾಜ ಒಡೆಯುವ, ಬೆಂಕಿ ಹಚ್ಚುವ ಕಾರ್ಯ ಮಾಡಬಾರದು. ಪ್ರಸ್ತುತ ವೀರಶೈವ-ಲಿಂಗಾಯತ ಬೇರೆ ಎಂದು ಕೆಲವರು ಹಚ್ಚಿದ ಬೆಂಕಿ ನಂದಿಸುವುದಕ್ಕಾಗಿಯೇ ಈ ಐತಿಹಾಸಿಕ ಸಮಾವೇಶ ಕೈಗೊಳ್ಳಲಾಗಿದೆ. ಬೆಂಕಿ ಹಚ್ಚುವ ಕಾರ್ಯ ಮುಂದುವರೆಸಿದರೆ ಅಂತಹವರನ್ನು ಸಮಾಜದಿಂದಲೇ ಹೊರಗಿಡುತ್ತೇವೆ ಎಂಬ ಎಚ್ಚರಿಕೆ ಸಂದೇಶವನ್ನು ಹಲವು ಮಠಾಧೀಶರು ಸಾರಿದರು.

ಈ ಸದ್ಭಾವನಾ ಸಮಾವೇಶದಲ್ಲಿ ರಂಭಾಪುರಿ ಪೀಠದ ಜಗದ್ಗುರು ಡಾ| ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಾಶೀ ಪೀಠದ ಡಾ| ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಉಜ್ಜಯಿನಿ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಪೀಠದ ಜಗದ್ಗುರು ಡಾ| ಚನ್ನ ಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ, ಶಿವಯೋಗ ಮಂದಿರದ ಅಧ್ಯಕ್ಷರಾದ ಡಾ| ಸಂಗನಬಸವ ಸ್ವಾಮೀಜಿ, ಮುಂಡರಗಿಯ ಡಾ|ಅನ್ನದಾನೇಶ್ವರ ಸ್ವಾಮೀಜಿ, ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ, ವಿಭೂತಿಪುರ ಮಠದ ಶ್ರೀ ಮಹಾಂತಲಿಂಗ ಸ್ವಾಮೀಜಿ, ಚೀಕಲಪರ್ವಿಯ ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿ, ದಿಂಗಾಲೇಶ್ವರ ಸ್ವಾಮೀಜಿ, ಎಮ್ಮಿಗನೂರು ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.

ಲಿಂಗಾಯತ ಎಂಬುದು 15-20 ವರ್ಷಗಳಿಂದೀಚೆಗಷ್ಟೇ ಬಳಕೆಗೆ ಬಂದಿದೆ. ಬಸವಣ್ಣವರ ನಾಮಾಂಕಿತ ತಿದ್ದಿದ್ದ ಮಾತೆ ಮಹಾದೇವಿ ಅಂತವರೊಂದಿಗೆ ಕೆಲ ಮಠಾಧೀಶರು ಸೇರಿ ಸ್ವತಂತ್ರ ಧರ್ಮದ ಹೆಸರಲ್ಲಿ ವೀರಶೈವ-ಲಿಂಗಾಯತ ಬೇರೆಯಾಗಿಸಲು ಮುಂದಾಗಿರುವುದು ಶೋಭೆ ತರದು. ಇಂತಹವರನ್ನು ಸಮಾಜ ನಿರ್ಲಕ್ಷ್ಯ ಮಾಡಬೇಕು. ಗುರು-ವಿರಕ್ತರು ಒಂದಾದರೆ ಇಂತಹವರ ನಿರ್ನಾಮ ಖಂಡಿತ. ರೇಣುಕಾಚಾರ್ಯ, ಬಸವಣ್ಣ ಹಾಗೂ ಹಾನಗಲ್ಲ ಕುಮಾರಸ್ವಾಮಿ ಜಯಂತಿಯನ್ನು ಸೇರಿ ಆಚರಿಸಲಾಗುವುದು.
-ಡಾ| ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ರಂಭಾಪುರಿ ಪೀಠ.

ವೀರಶೈವ-ಲಿಂಗಾಯತ ಒಂದೇ ಎಂಬುದರಲ್ಲಿ ಎರಡು ಮಾತಿಲ್ಲ. ಕೆಲವರು ಈ ಬಗ್ಗೆ ಅಸಂತುಷ್ಟರಾಗಿದ್ದು, ಅವರು ಒಳಗೆ ಬರುವುದಾದರೆ ಕರೆದುಕೊಳ್ಳಲು ಸಿದ್ದರಿದ್ದೇವೆ. ಸ್ವತಂತ್ರ ಧರ್ಮವೆಂಬ ಅವರ ಭ್ರಮೆ ನಿವಾರಣೆಗೆ ಸಮನ್ವಯ ಸಮಿತಿ ರಚಿಸಲಾಗುತ್ತಿದ್ದು, 2-3 ತಿಂಗಳಲ್ಲಿ ಅವರನ್ನು ಒಳ ಕರೆತರುವ ಯತ್ನವನ್ನು ಸಮಿತಿ ಮಾಡಲಿದೆ.
-ಡಾ| ಸಂಗನ ಬಸವ ಸ್ವಾಮೀಜಿ,
ಅಧ್ಯಕ್ಷರು, ಶಿವಯೋಗ ಮಂದಿರ.

ವೀರಶೈವ ಲಿಂಗಾಯತ ಮೀಸಲನ್ನು ಶೇ.15ಕ್ಕೆ ಹೆಚ್ಚಿಸಿ
ಬಾಗಲಕೋಟೆ:
ವೀರಶೈವ ಲಿಂಗಾಯತರಲ್ಲಿ ವೃತ್ತಿ ಮೂಲದಿಂದ ಹಲವಾರು ಉಪಪಂಗಡಗಳಿವೆ. ಅವರೆಲ್ಲರಿಗೂ ಈಗಿರುವ 3ಬಿ ವರ್ಗದ ಶೇ.5ರಷ್ಟು ಮೀಸಲಾತಿ ಬದಲಾಗಿ 2ಎ ವರ್ಗ ಅಥವಾ ಪ್ರತ್ಯೇಕ ವರ್ಗ ಸೃಷ್ಟಿಸಬೇಕು. ವೀರಶೈವ ಲಿಂಗಾಯತ ಜನಸಂಖ್ಯಾ ಬಲಕ್ಕೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಶೇ.12ರಿಂದ 15ಕ್ಕೆ ಹೆಚ್ಚಿಸಬೇಕು…
ಇದೂ ಸೇರಿ ಒಟ್ಟೂ ಹತ್ತು ನಿರ್ಣಯಗಳನ್ನು ಸೋಮವಾರ ಬಾದಾಮಿಯ ಶಿವಯೋಗ ಮಂದಿರದಲ್ಲಿ ನಡೆದ ಗುರು-ವಿರಕ್ತರು ಹಾಗೂ ಸಾವಿರಾರು ಸದ್ಭಕ್ತರ ಸಮಾವೇಶದಲ್ಲಿ ಪಂಚಪೀಠಾಧ್ಯಕ್ಷರು, ವಿವಿಧ ನಿರಂಜನ ಜಗದ್ಗುರುಗಳ ಸಮ್ಮುಖದಲ್ಲಿ ಅಂಗೀಕರಿಸಲಾಯಿತು.

ಇತರ ಪ್ರಮುಖ ನಿರ್ಣಯಗಳು:
* ಗುರು-ವಿರಕ್ತ ಪ್ರಮುಖ ಮಠಾಧಿಪತಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಸಮಾಜದ ಆಗು-ಹೋಗುಗಳ ಬಗ್ಗೆ ವಿಚಾರ ವಿನಿಮಯ ಮಾಡಿ, ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು.
* ಗುರುಪೀಠಗಳ ಮತ್ತು ವಿರಕ್ತ ಮಠಾಧೀಶರ ಕರ್ತವ್ಯ, ಸಂಪ್ರದಾಯ-ಆಚರಣೆ ಬೇರೆ ಬೇರೆಯಾಗಿದ್ದರೂ ತಾತ್ವಿಕ ದೃಷ್ಟಿಯಿಂದ ಸಮಾನರು. ಒಬ್ಬರು ಇನ್ನೊಬ್ಬರ ಧರ್ಮ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡದೆ ಪರಸ್ಪರ ನಂಬಿಕೆ-ವಿಶ್ವಾಸದಿಂದ ಸಾಮರಸ್ಯ ಕಾಪಾಡಿಕೊಂಡು ಹೋಗಬೇಕು.
* ವೀರಶೈವ-ಲಿಂಗಾಯತ ಸನಾತನ ಧರ್ಮವಾಗಿದ್ದು, ಇದನ್ನು ಯಾವುದೇ ಕಾರಣಕ್ಕೂ ಛಿದ್ರವಾಗದಂತೆ ರಕ್ಷಿಸುವ ಕೆಲಸವಾಗಬೇಕು.
* ವೀರಶೈವ-ಲಿಂಗಾಯತ ಧರ್ಮಕ್ಕೆ ವೀರ, ನಂದಿ, ಭೃಂಗಿ, ವೃಷಭ ಮತ್ತು ಸ್ಕಂಧ ಗೋತ್ರಗಳಿದ್ದು, ಪದ್ವಿಡಿ, ವೃಷ್ಟಿ , ಲಂಬನ, ಮುಕ್ತಾಗುತ್ಛ ಮತ್ತು ಪಂಚವರ್ಣ ಸೂತ್ರಗಳಿವೆ. ಈ ಐದರಲ್ಲಿ ಯಾವುದಾದರೂ ಗೋತ್ರಸೂತ್ರಕ್ಕೆ ವೀರಶೈವ ಲಿಂಗಾಯತರು ಸಂಬಂಧಪಟ್ಟಿರುತ್ತಾರೆ.
* ವೀರಶೈವ-ಲಿಂಗಾಯತ ಧರ್ಮಕ್ಕೆ ಶಿವಾಗಮಗಳು, ಸಿದ್ಧಾಂತ ಶಿಖಾಮಣಿ ಮತ್ತು ವಚನಗಳು ಅಧ್ಯಾತ್ಮ ಸಂಪತ್ತು. ಪರಸ್ಪರ ಉಭಯತರು ಅಧ್ಯಯನ ಮಾಡಿ, ಸಮನ್ವಯತೆಯಿಂದ ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು.
* ಸಕಲ ವೀರಶೈವ-ಲಿಂಗಾಯತರ ಪ್ರಾತಿನಿಧಿಕ ಮತ್ತು ಪ್ರತಿಷ್ಠಿತ ಸಂಸ್ಥೆಯಾದ ಅಖೀಲ ಭಾರತ ವೀರಶೈವ ಮಹಾಸಭೆಯು ನಿರ್ಣಯಿಸಿದ ವೀರಶೈವ-ಲಿಂಗಾಯತರು ಒಂದೇ ಎಂಬ ಅಂಶವನ್ನು ಇಂದಿನ ಸಮಾವೇಶವು ಅನುಮೋದಿಸುತ್ತದೆ.
* ಉಪಾಚಾರ್ಯರು ಹಾಗೂ ವಿರಕ್ತ ಮಠಾಧೀಶರು ಸಾಮರಸ್ಯ ಭಾವನೆಯಿಂದ ಸಮನ್ವಯ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿ, ಸಾಮರಸ್ಯ ಭಾವನೆ ಬೆಳೆಸಬೇಕು.
* ವೀರಶೈವ-ಲಿಂಗಾಯತ ಧರ್ಮದ ಯುವಕರಲ್ಲಿ ಧಾರ್ಮಿಕ ನಿಷ್ಠೆಯನ್ನು ಬೆಳೆಸಬೇಕು. ಎಲ್ಲರೂ ಲಿಂಗಧಾರಣೆ ಮಾಡಿಕೊಳ್ಳುವ ಭಾವನೆ ಬೆಳೆಸಬೇಕು.
* ವೀರಶೈವ-ಲಿಂಗಾಯತ ಮಠಾಧಿಪತಿಗಳು ತಮ್ಮ ವಿದ್ಯಾಸಂಸ್ಥೆಗಳಲ್ಲಿ ಪ್ರತಿಭಾ ಸಂಪನ್ನ ವೀರಶೈವ ಲಿಂಗಾಯತ ವಿದ್ಯಾರ್ಥಿಗಳಿಗೆ ಉಚಿತವಾಗಿ ಅಧ್ಯಯನ ಮಾಡಲು ಅವಕಾಶ ಒದಗಿಸಬೇಕು.

– ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next