ಹುಣಸೂರು: ಅಸ್ಪೃಶ್ಯತೆ, ಅಸಮಾನತೆ ಹೋಗಲಾಡಿಸಲು ಅಂಗೈಯಲ್ಲಿ ಇಷ್ಟಲಿಂಗ ಪ್ರತಿಷ್ಠಾಪಿಸುವ ಮೂಲಕ ಎಲ್ಲರನ್ನೂ ಒಂದುಗೂಡಿಸಿದ ಬಸವಣ್ಣ ಮಹಾನ್ ಚೇತನರಲ್ಲಿ ಒಬ್ಬರೆಂದು ಕನ್ನಡ ಸಹಾಯಕ ಪ್ರಾಧ್ಯಾಪಕಿ ಡಾ.ತ್ರೀವೇಣಿ ಬಣ್ಣಿಸಿದರು.
ಪಟ್ಟಣದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಅಖೀಲ ಭಾರತ ವೀರಶೈವ ಮಹಾಸಭಾ, ತಾಲೂಕು ಬಸವಸಮಿತಿ ವತಿಯಿಂದ ಆಯೋಜಿಸಿದ್ದ ಜಗಜ್ಯೋತಿ ಬಸವಣ್ಣನವರ ಜಯಂತಿ ಸಮಾರಂಭದಲ್ಲಿ ಮಾತನಾಡಿ, ಬಸವಣ್ಣನವರು 12ನೇ ಶತಮಾನದಲ್ಲಿ ನಡೆಸಿದ ಸಾಮಾಜಿಕ ಕ್ರಾಂತಿಗಳು ಪ್ರಸ್ತುತ ಸಂದರ್ಭದಲ್ಲಿ ಪೂರಕವಾಗಿದೆ ಎಂದರು.
ಅಸ್ಪೃಶ್ಯತೆ, ಜಾತಿ ವ್ಯವಸ್ಥೆಯು ಉಚಾÅಯಸ್ಥಿತಿಯಲ್ಲಿದ್ದ ಅವಧಿಯಲ್ಲೇ ತನ್ನ ಸ್ವ ಅನುಭವದಿಂದ ಕಂಡುಕೊಂಡ ವ್ಯವಸ್ಥೆ ವಿರೋಧಿಸಿ ಜಾತಿ ಪದ್ಧತಿಯನ್ನು ತೊಲಗಿಸಲು ಹಾಗೂ ಮಹಿಳೆಯರಿಗೆ ಸಮಾನತೆ ನೀಡಲು ಶ್ರಮಿಸಿದ ದೊಡ್ಡ ದಾರ್ಶನಿಕ. ಅವರ ಕ್ರಾಂತಿಯ ಕಿಡಿ ವಿಶ್ವ ಮಾನ್ಯವಾಗಿದ್ದು, ಅವರ ಮಾನವೀಯತೆ, ಮಾನವೀಯ ಸಂಬಂಧಗಳು, ಕಾಯಕವೇ ಕೆಲಾಸವೆನ್ನುವ ತತ್ವ, ಚಿಂತನೆಯನ್ನು ಅಳವಡಿಸಿಕೊಂಡಲ್ಲಿ ಮಾತ್ರ ಬದುಕು ಹಸನಾಗಲಿದೆ ಎಂದು ತಿಳಿಸಿದರು.
ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ, ಅಂದಿನ ಕಾಲದಲ್ಲೇ ಬುದ್ಧ, ಬಸವಣ್ಣರ ತತ್ವಗಳನ್ನು ಸಂವಿಧಾನದ ಚೌಕಟ್ಟಿನ ಮೂಲಕ ಎಲ್ಲರಿಗೂ ಸಮಾನತೆ ತಂದು ಕೊಡಲು ಅಂಬೇಡ್ಕರರು ಸಹ ಶ್ರಮಹಾಕಿರುವುದರಿಂದಲೇ ಇಂದು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ. ಕಳೆದ ದಶಕದಿಂದ ಬಂದ ಸರ್ಕಾರಗಳು ಸಾಕಷ್ಟು ಜಯಂತಿ ಆಚರಣೆಗೆ ತಂದಿದೆ ಆದರೆ ಜಯಂತಿಗಳನ್ನು ಆಚರಿಸುವುದು, ರಾಜಕೀಯ ಭಾಷಣ ಬಿಗಿಯುವ ಬದಲಿಗೆ ನೊಂದವರ ಕಷ್ಟಕ್ಕೆ ಬೆನ್ನೆಲುಬಾಗಿ ನಿಲ್ಲುವುದೇ ನಿಜವಾದ ಜನಸೇವೆ ಎಂದರು.
ಗುಂಡ್ಲುಪೇಟೆ ಶಾಸಕಿ ಗೀತಾ ಮಹದೇವಪ್ರಸಾದ್ ಮಾತನಾಡಿ, ಬಸವಣ್ಣನವರು ಅಂದಿನ ಕಾಲದಲ್ಲೇ ಮಹಿಳೆಯರಿಗೆ ಸಮಾನತೆ ನೀಡಿ ಅಕ್ಕ ಮಹದೇವಿಯಂತಹ ಮೇರು ಪ್ರತಿಭೆಯನ್ನು ಪರಿಚಯಿಸಿದರು. ದಿವ್ಯ ವ್ಯಕ್ತಿತ್ವ ಹೊಂದಿದ್ದ ಅನುಭವ ಮಂಟಪದಲ್ಲಿ 34ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ ಅಲ್ಲಮಪ್ರಭುವಿನಂತಹ ಅಸಾಮಾನ್ಯರೊಂದಿಗೆ ಪ್ರಶ್ನಿಸುವ ಅವಕಾಶ ನೀಡಿದ್ದರು ಎಂದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರಸ್ವಾಮೀಜಿ, ಗಾವಡಗೆರೆ ಮಠದ ನಟರಾಜಸ್ವಾಮೀಜಿ, ಮಾದಳ್ಳಿ ಉಕ್ಕಿನಕಂತೆ ಮಠದ ಸಾಂಬಸದಾ ಶಿವಸ್ವಾಮೀಜಿ, ಅರಕೆರೆಮಠದ ಸಿದ್ದೇಶ್ವರಸ್ವಾಮಿಗಳು ಆಶೀರ್ವಚನ ನೀಡಿದರು. ಜಿಪಂಸದಸ್ಯೆ ಡಾ.ಪುಷ್ಪ$ಅಮರನಾಥ್, ವೀರಶೈವ ಮಹಾಸಭಾದ ಅಧ್ಯಕ್ಷ ಹಂದನಹಳ್ಳಿಸೋಮಶೇಖರ್, ತಾ.ಶಿಕ್ಷಕರ ಸಂಘದ ಅಧ್ಯಕ್ಷ ಚನ್ನವೀರಪ್ಪ, ಜಿಪಂ ಸದಸ್ಯರಾದ ಜಯಲಕ್ಷಿರಾಜಣ್ಣ, ಸಾವಿತ್ರಮ್ಮ, ಅನಿಲ್‌ಕುಮಾರ್, ಯುವಘಟಕದ ಅಧ್ಯಕ್ಷ ಭಾಗ್ಯಕುಮಾರ್, ಬಸವ ಸಮಿತಿ ಅಧ್ಯಕ್ಷ ಬಸವರಾಜು, ತಹಶೀಲ್ದಾರ್ ಮೋಹನ್,ಇಒ ಕೃಷ್ಣಕುಮಾರ್ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.
ಮೆರವಣಿಗೆ: ಜಯಂತಿ ಅಂಗವಾಗಿ ನಗರದ ರಂಗನಾಥ ಬಡಾವಣೆಯಿಂದ ಹೊರಟ ಮೆರವಣಿಯಲ್ಲಿ ನಂದಿಧ್ವಜ, ವೀರಗಾಸೆ, ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ಬೆಳ್ಳಿರಥದಲ್ಲಿ ಬಸವೇಶ್ವರರ ವಿಗ್ರಹವನ್ನಿಟ್ಟು ನಡೆದ ಸಾಂಸ್ಕೃತಿಕ ಕಲರವದ ನಡುವೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.