Advertisement

ಬಸವಣ್ಣ ಧರ್ಮಕ್ಕೆಸೀಮಿತನಲ್ಲ: ರಾಯರೆಡ್ಡಿ

03:33 PM May 26, 2017 | |

ಕಲಬುರಗಿ: ವಿಶ್ವ ಸಮುದಾಯಕ್ಕೆ ಮಾನವೀಯ ನಡವಳಿಕೆ ಹೇಗಿರಬೇಕು ಎನ್ನುವ ಸಂದೇಶ ಸಾರಿದ ಬಸವಣ್ಣ ಲಿಂಗಾಯತ ಧರ್ಮದವನಲ್ಲ. ಕುರಾನ್‌ ಕೇವಲ ಮುಸ್ಲಿಂರಿಗೆ ಸೀಮಿತವಾಗಿಲ್ಲ, ಬಸವಣ್ಣನ ಹಾಗೂ ಕುರಾನ್‌ನ ಮಾನವೀಯ ಸಂದೇಶಗಳು ಬ್ರಹ್ಮಾಂಡಕ್ಕೆ ನೀಡಿದವುಗಳಾಗಿವೆ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು. 

Advertisement

ಗುಲಬರ್ಗಾ ವಿಶ್ವ ವಿದ್ಯಾಲಯದಲ್ಲಿ ಗುರುವಾರ ಮಹಾತ್ಮಾಗಾಂಧಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರ ಹಾಗೂ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ವಿಶ್ವ ಸಂದೇಶ ನೀಡಿದವರನ್ನು ನಾವು ಧರ್ಮಗಳಿಗೆ ಸೀಮಿತ ಮಾಡುವುದರಿಂದ ಮುಂದೆ ಮನುಕುಲಕ್ಕೆ ಅಪಾಯವಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.

ಆಗಲೇ ದಾರ್ಶನಿಕರ ಸಂದೇಶ ಹಾಗೂ ಅವರ ಶ್ರಮವನ್ನು ಸಾರ್ಥ್ಯಕ್ಯದತ್ತ ಒಯ್ದಂತಾಗುತ್ತದೆ ಎಂದರು. ಬುದ್ಧನ ವಿಚಾರಗಳು ಒಂದೇ ಧರ್ಮಕ್ಕೆ ಸೀಮಿತವಾಗಿಲ್ಲ. ವೇದ, ಉಪನಿಷತ್ತುಗಳು ನಮಗೆ ಬೇಕೆ ಎಂದಾಗ ಇವರನ್ನೆಲ್ಲ ಹೇಗೆ ಒಂದು ಚೌಕಟ್ಟಿಗೆ ಕಟ್ಟಿ ಹಾಕಲು ಸಾಧ್ಯ ಎಂದು ಪ್ರಶ್ನಿಸಿದರು. ನಮಗೆ ಅವರ ತತ್ವಗಳು ಗೊತ್ತು.

ದೊಡ್ಡದಾಗಿ ಭಾಷಣ ಮಾಡುತ್ತೇವೆ, ಎಲ್ಲವೂ ಸರಿ. ಆದರೆ, ಅವುಗಳನ್ನು ಎಷ್ಟರ ಮಟ್ಟಿಗೆ ಅಳವಡಿಸಿಕೊಂಡಿದ್ಧೇವೆ ಎನ್ನುವುದು ಮುಖ್ಯ. ನಾನು ಮಂತ್ರಿಯಾಗಿದ್ದುಕೊಂಡು ಬರಿ ಭಾಷಣ ಮಾಡಿದರೆ ಸಾಲುವುದಿಲ್ಲ. ಅವನ್ನು ಅನುಸರಿಸಬೇಕು. ನಾನು ಅಂಬೇಡ್ಕರ್‌ ಹಿಂಬಾಲಕ. ಅವರ ಆದರ್ಶಗಳನ್ನು ಅನುಸರಿಸುವ ಪ್ರಯತ್ನ ಮಾಡುತ್ತಿದ್ದೇನೆ.

ಅಂತಹ ವ್ಯಕ್ತಿಯನ್ನು ಇವತ್ತು ಜಾತಿಯ ಚೌಕಟ್ಟಿಗೆ ಸಿಲುಕಿಸುವ ಅಪಾಯ ಕೆಲಸ ನಡೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಎಲ್ಲ ಧರ್ಮಗಳಲ್ಲೂ ಸಮಾನತೆ ಇದೆ. ಕುರಾನ್‌, ಬೈಬಲ್‌ ಹಾಗೂ ಭಗವದ್ಗೀತೆ ಎಲ್ಲವೂ ಒಂದನ್ನೇ ಹೇಳಿವೆ. ಆದರೆ, ನಾವದನ್ನು ಧರ್ಮದ ಆಧಾರದಲ್ಲಿ ನೋಡುತ್ತೇವೆಲ್ಲ.

Advertisement

ಹಿಂದೂ  ಧರ್ಮದ ಸ್ಥಾಪಕ ಯಾರು ಎಂದು ಪ್ರಶ್ನಿಸಿದರು. ನಮ್ಮಲ್ಲಿ ಜೈನ, ಸಿಖ್‌,ಬೌದ್ಧ ಧರ್ಮಗಳಿಲ್ಲವೇ? ಇಂತಹದೊಂದು ಗೊಜಲು ಸ್ಥಿತಿಯ ಮಧ್ಯೆಯೂ ಬಸವಣ್ಣ 12ನೇ ಶತಮಾನದಲ್ಲಿ ಮಾನವೀಯ ಪ್ರೇಮ ಹಂಚಲು ಹೊರಟವರು. ಅವರಿಂದ ಏನನ್ನಾದರೂ ಕಲಿಯಬೇಕಾದರೆ ಸಮಾನತೆ ಕಲಿಯೋಣ, ಅದನ್ನೇ ಆಚರಿಸೋಣ ಎಂದರು. 

ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಮಾತನಾಡಿ, ಬಸವಣ್ಣನನ್ನು ಕಟ್ಟಿ ಹಾಕುವುದು ದುಸ್ಸಾಹಸ. ಅವರೊಬ್ಬ ವಿಶ್ವ ಕಂಡ ಚೇತನ. ಅವರು ಬರೆದಿರುವ ವಚನಗಳನ್ನು ಅರ್ಥ ಮಾಡಿಕೊಂಡು ಮುಂದೆ ಸಾಗಿದರೆ ಶಾಂತಿಯುತ ಮತ್ತು ಒತ್ತಡವಿಲ್ಲದ ಸ್ವತ್ಛಂದ ಬದುಕು ನಮ್ಮದಾಗುತ್ತದೆ. ಬಸವ ತತ್ವಗಳ ಅನುಕರಣೆ ಮತ್ತು ಆಚರಣೆ ಎರಡು ಮಾಡಬೇಕಿದೆ ಎಂದರು. 

ಕರ್ನಾಟಕ ವಿವಿಯ ವಿಶ್ರಾಂತ ಪ್ರಾಧ್ಯಾಪಕ ಡಾ| ಬಿ.ವಿ. ಶಿರೂರ ಹೇಮರಡ್ಡಿ ಮಲ್ಲಮ್ಮ ಕುರಿತು ಮಾತನಾಡಿ, ಮಲ್ಲಮ್ಮ ಮೂಲತಃ ಆಂಧ್ರಪ್ರದೇಶದವರಾಗಿದ್ದು, ಆಕೆಯ ನಡತೆ ಮಹಿಳಾ ಸಂಕುಲಕ್ಕೆ ಒಂದು ಘನತೆ ತಂದುಕೊಟ್ಟಿದೆ. ಮಲ್ಲಮ್ಮ ಹೇಗೆ ಆಂಧ್ರ ಮತ್ತು ಕರ್ನಾಟಕದ ಮಗಳಾದಳು ಎನ್ನುವುದನ್ನು ಎಲ್ಲರೂ ತಿಳಿಯಬೇಕು ಎಂದು ಹೇಳಿದರು. 

ವಿವಿ ಕುಲಪತಿ ಪ್ರೊ| ಎಸ್‌.ಆರ್‌. ನಿರಂಜನ್‌ ಅಧ್ಯಕ್ಷತೆ ವಹಿಸಿದ್ದರು. ಡಾ| ದೇವಿಂದ್ರಪ್ಪ ತೇಲ್ಕರ್‌ ಸ್ವಾಗತಿಸಿದರು. ಹೇಮರಡ್ಡಿ ಮಲ್ಲಮ್ಮ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ| ಎಸ್‌.ಎಂ. ಹಿರೇಮಠ ಮಾತನಾಡಿ, ಕೇಂದ್ರಕ್ಕೆ ಇನ್ನಷ್ಟು ಸೌಕರ್ಯಗಳನ್ನು ಹಾಗೂ ಮೂಲ ಸಿಬ್ಬಂದಿಯನ್ನು ನೀಡುವಂತೆ ಮನವಿ ಮಾಡಿದರು. ಪ್ರೊ| ಜಯಶ್ರೀ ದಂಡೆ ಪರಿಚಯಿಸಿದರು.  

ಬಸವ ಸಮಿತಿ ಜಿಲ್ಲಾಧ್ಯಕ್ಷೆ ವಿಲಾವತಿ ಖೂಬಾ, ವಿಧಾನಪರಿಷತ್‌ ಸದಸ್ಯ ಬಿ.ಜಿ. ಪಾಟೀಲ, ಕುಲಸಚಿವರಾದ ಡಾ| ದಯಾನಂದ ಅಗಸರ್‌, ಸಿ.ಎಸ್‌.ಪಾಟೀಲ, ಹೇಮರೆಡ್ಡಿ ಮಲ್ಲಮ್ಮ ಸಮಾಜದ ರಾಜ್ಯ ಕಾರ್ಯದರ್ಶಿ ಹಾಗೂ ಗುವಿವಿ ವಿಪ ಸದಸ್ಯೆ ಅಕ್ಕಮಹಾದೇವಿ ಪಾಟೀಲ, ಪ್ರಕಾಶ ಎಂ. ಹದನೂರಕರ್‌ ಇದ್ದರು. ಪ್ರೊ| ಎಚ್‌.ಟಿ. ಪೋತೆ, ವಿದ್ಯಾವಿಷಯಕ ಪರಿಷತ್‌ ಸದಸ್ಯ ಸತೀತ ಅಳ್ಳೋಳ್ಳಿ, ಸಿಂಡಿಕೇಟ್‌ ಸದಸ್ಯ ನಾಗೇಶ ಕೊಳ್ಳಿ ಹಾಗೂ ಪ್ರಾಧ್ಯಾಪಕರು, ವಿವಿ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next