Advertisement

ಬಸವಣ್ಣ ಸಮಾನತೆ, ಸಾಮರಸ್ಯದ ಸೇತುವೆ

12:51 AM May 08, 2019 | Lakshmi GovindaRaj |

ಬೆಂಗಳೂರು: ಬಸವಣ್ಣನವರು ಸಮಾನತೆ, ಸಹಿಷ್ಣುತೆ, ಸಾಮರಸ್ಯಗಳನ್ನು ಕಟ್ಟಿ ಸಮಾಜಕ್ಕೆ ಸೇತುವೆ ಆದರೆ ಹೊರತು ಗೋಡೆ ಆಗಿರಲಿಲ್ಲ ಎಂದು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ. ಸಿ.ಎನ್‌. ಮಂಜುನಾಥ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ಬಸವ ಸಮಿತಿಯಿಂದ ಮಂಗಳವಾರ ಭಾರತೀಯ ವಿದ್ಯಾಭವನದ ಖೀಂಚ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಕಾಯಕ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಬಸವಣ್ಣನವರು ಸಮಾಜವನ್ನು ಪೋಣಿಸುವ ಸೂಜಿಯಾಗಿದ್ದರು ಹೊರತು ಕತ್ತರಿ ಆಗಿರಲಿಲ್ಲ. ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಿದರೆ ದ್ವಿಗುಣಗೊಳ್ಳುತ್ತದೆ ಎಂಬ ನಂಬಿಕೆಯಿದೆ. ಅದರಂತೆ ಬಸವಣ್ಣನವರ ತತ್ವ, ಸಿದ್ಧಾಂತಗಳು ದ್ವಿಗುಣಗೊಳ್ಳಬೇಕಿದ್ದು, ಹೆಚ್ಚು ಜನರು ಬಸವತತ್ವವನ್ನು ಪಾಲಿಸುವಂತಾಗಬೇಕು ಎಂದು ಹೇಳಿದರು.

ದೇಶದಲ್ಲಿ ಧಾರ್ಮಿಕತೆ, ಪರಂಪರೆ, ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಬೇಕು. ಕೇವಲ ಉಸಿರಾಟ, ಜೀವವಿದ್ದರೆ ಸಾಲದು. ಮನುಷ್ಯರಾದವರಲ್ಲಿ ಸಂಸ್ಕಾರ, ಮಾನವೀಯತೆಯೂ ಅಗತ್ಯವಾಗಿರಬೇಕು. ಅಂಥ ಗುಣಮಟ್ಟದ ಜೀವಗಳ ಸಂಖ್ಯೆ ಹೆಚ್ಚಬೇಕಿದೆ ಹೊರತು. ಜನಸಂಖ್ಯೆ ಹೆಚ್ಚುವುದರಿಂದ ಪ್ರಯೋಜನವಿಲ್ಲ ಎಂದರು.

ಬೇಲಿಮಠದ ಶಿವರುದ್ರ ಸ್ವಾಮೀಜಿ ಮಾತನಾಡಿ, ಬಸವಣ್ಣನವರು ಕಟ್ಟಿದ ಧರ್ಮವು ಬೆಳಕಿನ ಕಿರಣಗಳಿಂದ ಕೂಡಿದೆ. ಅನುಭವ ಮಂಟಪದ ಮೂಲಕ ಎಲ್ಲರ ಅಭಿಪ್ರಾಯಗಳನ್ನು ಮನ್ನಿಸಿದ ಪ್ರಜಾಪ್ರಭುತ್ವ ಧರ್ಮವಾಗಿದೆ. ಗುರು ಹೇಳಿದಂತೆ ಸಾವಿರಾರು ಜನ ಪಾಲಿಸಿದ ಮತ ಅದಾಗಿಲ್ಲ. ಬಸಣ್ಣನವರದು ಸಮಾನತೆಯ ಧರ್ಮವಾಗಿದೆ ಎಂದು ಹೇಳಿದರು.

Advertisement

ಮೇಯರ್‌ ಗಂಗಾಂಬಿಕೆ ಮಾತನಾಡಿದರು. ಇನ್ಫೋಸಿಸ್‌ ಪ್ರತಿಷ್ಠಾನದ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರ ಪರವಾಗಿ ಅವರ ಸಹೋದರಿ ಸುನಂದಾ ಕುಲಕರ್ಣಿ ದಾಸೋಹ ರತ್ನ ಪ್ರಶಸ್ತಿ ಸ್ವೀಕರಿಸಿದರು. ಕಲಬುರಗಿಯ ಡಾ. ಜೆ.ಎಸ್‌.ಖಂಡೇರಾವ್‌, ದಾವಣಗೆರೆಯ ಎಚ್‌.ಎಂ.ಸ್ವಾಮಿ, ಚಿತ್ರದುರ್ಗದ ಬಿ.ಎನ್‌. ಬಸವರಾಜಪ್ಪ ಅವರಿಗೆ ಬಸವ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬವಸ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಪದ್ಮಶ್ರೀ ಇಬ್ರಾಹಿಂ ಸುತಾರಾ ಮೊದಲಾದವರು ಇದ್ದರು.

ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ: ಬಸವಜಯಂತಿಯ ಹಿನ್ನೆಲೆಯಲ್ಲಿ ರಾಜ್ಯಪಾಲ ವಿ.ಆರ್‌.ವಾಲಾ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಸೋಮವಾರ ಬೆಳಗ್ಗೆ ನಗರದ ಚಾಲುಕ್ಯವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ಬಸವ ಜಯಂತಿ ಹಿನ್ನೆಲೆಯಲ್ಲಿ ಬಸವೇಶ್ವರ ಪ್ರತಿಮೆಯ ಸುತ್ತಲೂ ಜಗಮಗಿಸುವ ಲೈಟ್‌ಗಳನ್ನು ಅಳವಡಿಸಿ, ಆವರಣವನ್ನು ಸ್ವತ್ಛಗೊಳಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next