ಬಸವಕಲ್ಯಾಣ: ಸುಮಾರು 50 ವರ್ಷಗಳ ಹಿಂದೆ ಆಧ್ಯಾತ್ಮಿಕ ಜ್ಯೋತಿ ಬೆಳೆಗಿಸಿರುವ ಕೀರ್ತಿ ಶ್ರೀ ನಾಗಭೂಷಣ ಶಿವಯೋಗಿಗಳಿಗೆ ಸಲ್ಲುತ್ತದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಹಾರಕೂಡದ ಡಾ| ಚನ್ನವೀರ ಶಿವಾಚಾರ್ಯರು ಹೇಳಿದರು.
ಮುಚಳಂಬ ಗ್ರಾಮದ ಶ್ರೀ ನಾಗಭೂಷಣ ಶಿವಯೋಗಿ ಸಂಸ್ಥಾನ ಮಠದಲ್ಲಿ ಶ್ರೀ ನಾಗಭೂಷಣ ಶಿವಯೋಗಿಗಳ 50ನೇ ಪುಣ್ಯಸ್ಮರಣೋತ್ಸವ ಹಾಗೂ ಶ್ರೀ ಪ್ರಣವಾನಂದ ಮಹಾಸ್ವಾಮಿಗಳ 50ನೇ ವರ್ಷದ ವರ್ಧಂತಿ ಮಹೋತ್ಸವ ಅಂಗವಾಗಿ ಒಂದುವಾರ ಕಾಲ ಹಮ್ಮಿಕೊಂಡ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಸಾಕಷ್ಟು ಸಂತರು ಅನುಭಾವ ನೀಡಿ ಹೋಗಿದ್ದಾರೆ. ಆದರೆ ಶ್ರೀ ನಾಗಭೂಷಣ ಶಿವಯೋಗಿಗಳಿಗೆ ಯಾವುದೇ ಅಕ್ಷರ ಜ್ಞಾನ ಇಲ್ಲದಿದ್ದರೂ, ಭಕ್ತಾದಿಗಳಿಗೆ ದುವಾ ಮತ್ತು ದವಾ ಎರಡು ಆಶೀರ್ವಾದ ಮಾಡುತ್ತಿದ್ದರು ಎಂದರು. ರೋಗದಿಂದ ನರಳುತ್ತಿದ್ದ ಮಠಕ್ಕೆ ಬರುವ ಅದೇಷ್ಟೋ ಭಕ್ತಾದಿಗಳನ್ನು ರೋಗದಿಂದ ಗುಣಪಡಿಸಿರುವ ಉದಾಹರಣೆಗಳಿವೆ. ಹೀಗಾಗಿ ಶ್ರೀಗಳು ದೇಹದಿಂದ ದೂರವಾಗಿದ್ದರೂ ಅವರ ಗುಣಗಳನ್ನು ಶ್ರೀ ಪ್ರಣವಾನಂದ ಮಹಾಸ್ವಾಮಿಗಳಲ್ಲಿ ಕಾಣುತ್ತಿದ್ದೇವೆ ಎಂದು ನುಡಿದರು.
ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಬಿ.ನಾರಾಯಣರಾವ್ ಮಾತನಾಡಿ, ಕಾರ್ಯಕ್ರಮ ಯಶಸ್ವಿಗಾಗಿ ಮುಚಳಂಬ ಮಠದ ಶ್ರೀ ಪ್ರಣವಾನಂದ ಮಹಾಸ್ವಾಮಿಗಳು ಒಂದು ವರ್ಷದಿಂದ ಸಾಕಷ್ಟು ಕಷ್ಟಪಟ್ಟು ಉತ್ಸವವನ್ನು ಅದ್ಧೂರಿಯಾಗಿ ಏರ್ಪಡಿಸಿದ್ದಾರೆ. ಆದ್ದರಿಂದ ಭಕ್ತಾದಿಗಳು ಶ್ರೀಗಳಿಗೆ ಧನದಿಂದ ಸಹಾಯ ಮಾಡದಿದ್ದರೂ ಪರವಾಗಿಲ್ಲ ತನು ಮತ್ತು ಮನದಿಂದ ಒಂದು ವಾರ ಉತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಯಶಶ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಸರಡಗಿ ಶ್ರೀ ಮಹಾಲಕ್ಷ್ಮೀ ಶಕ್ತಿಪೀಠದ ಶ್ರೀ ಅಪ್ಪರಾವ್ ದೇವಿ ಮುತ್ಯಾ ಮಾತನಾಡಿ, ಮುಚಳಂಬ ಗ್ರಾಮದಲ್ಲಿ ಶ್ರೀಗಳ ಆಶೀರ್ವಾದದಿಂದ ಇಂತಹ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡಿರುವುದಕ್ಕೆ ಈ ಭೂಮಿ ಪಾವನವಾಗಿದ್ದು, ಭಕ್ತಾದಿಗಳು ಮತ್ತು ಗ್ರಾಮಸ್ಥರು ಒಂದುವಾರ ನಡೆಯುವ ಸುರ್ವಣ ಮಹೋತ್ಸವದಲ್ಲಿ ಪಾಲ್ಗೊಂಡು ಪಾವನರಾಗಬೇಕು ಎಂದರು.
ನೇತೃತ್ವ ವಹಿಸಿದ್ದ ಬೀದರ ಶ್ರೀ ಸಿದ್ಧಾರೂಢ ಮಠದ ಡಾ| ಶಿವಕುಮಾರ ಮಹಾಸ್ವಾಮಿಗಳು “ಜಾಯತೇ ಶಿವಕಾರುಣ್ಯಾತ್ ಪ್ರಸಟಾ ಭಕ್ತಿರೈಶ್ವರೀ’ ಕುರಿತು ಪ್ರವಚನ ಮಾಡಿದರು. ಶ್ರೀ ಮಹಾಲಿಂಗೇಶ್ವರ ಮಹಾಸ್ವಾಮಿಗಳು, ಶ್ರೀ ಪಂಡಿತಾರಾಧ್ಯ ಮಹಾಸ್ವಾಮಿಗಳು, ಶ್ರೀ ಚನ್ನಮಲ್ಲೇಶ್ವರ ತ್ಯಾಗಿಗಳು, ಶ್ರೀ ಚರಮೂರ್ತಿ ಸ್ವಾಮಿಗಳು, ಶ್ರೀ ಮುರಘೇಂದ್ರ ದೇವರು, ಶ್ರೀ ಶಾಂತಮ್ಮ ತಾಯಿ, ಶ್ರೀ ಶಕುಂತಲಾದೇವಿ, ಆನಂದ ದೇವಪ್ಪಾ, ಶಿವರಾಜ ನರಶೆಟ್ಟಿ, ಮನೋಜ ಮಾಶೆಟ್ಟೆ, ಪ್ರಶಾಂತ ಬಿರಾದಾರ್, ಕೆ.ಕೆ.ಮಾಷ್ಟರ್, ವೈಜನಾಥ ಪಾಟೀಲ, ರಾಜಶೇಖರ ಬಿರಾದಾರ್, ಶಾಂತಕುಮಾರ ಜೋತೆಪ್ಪಾ, ಪ್ರಕಾಶ ಕಾಮಶೆಟ್ಟೆ, ಅಮರ ಕಾಮಶೆಟ್ಟೆ, ಗಣಪತಿ ಘಾಳೆ, ರಾಮಶೆಟ್ಟಿ ಘಾಳೆ, ರಾಮಲಿಂಗ ಘಾಳೆ, ವಿಶ್ವನಾಥ ಹಳಾಹಳೆ, ಮಹಾದೇವ ಮಾಶೆಟ್ಟಿ, ರಾಜಕುಮಾರ ಘಾಳೆ ಇದ್ದರು. ವೈಜನಾಥ ಕಾಮಶೆಟ್ಟೆ ಸ್ವಾಗತಿಸಿದರು. ಬ್ಯಾಡಗಿ ಶ್ರೀ ಸಿದ್ದರಾಮ ನಿರೂಪಿಸಿದರು.