Advertisement

ಬಸವಕಲ್ಯಾಣ: 41ನೇ ಶರಣ ಕಮ್ಮಟ- ಅನುಭವಮಂಟಪ ಉತ್ಸವಕ್ಕೆ ಚಾಲನೆ

06:03 PM Nov 28, 2020 | Mithun PG |

ಬೀದರ್ (ಬಸವಕಲ್ಯಾಣ): ವಿಶ್ವ ಬಸವಧರ್ಮ ಟ್ರಸ್ಟ್ ಅನುಭವ ಮಂಟಪ ಆಶ್ರಯದಲ್ಲಿ ಬಸವಕಲ್ಯಾಣ ಅನುಭವ ಮಂಟಪ ಪರಿಸರದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ 41ನೇ ಶರಣ ಕಮ್ಮಟ- ಅನುಭವಮಂಟಪ ಉತ್ಸವಕ್ಕೆ ಶನಿವಾರ ಚಾಲನೆ ನೀಡಲಾಯಿತು.

Advertisement

ಕೋವಿಡ್  ಸೋಂಕು ಹರಡುವಿಕೆ ಹಿನ್ನಲೆಯಲ್ಲಿ ಉತ್ಸವವನ್ನು ಸಂಪೂರ್ಣ ಅಂತರ್ಜಾಲದ ಮೂಲಕ ನೆರವೇರಿಸಲಾಯಿತು. ಉದ್ಘಾಟನೆ ಮತ್ತು ಸಾನಿಧ್ಯ ವಹಿಸಿದ್ದ ಗಣ್ಯರು ಮತ್ತು ಪೂಜ್ಯರು ಅಂತರ್ಜಾಲದ ಮೂಲಕವೇ ವಿಡಿಯೋ ಸಂದೇಶ ನೀಡಿದರು. ಯೂಟ್ಯೂಬ್ ಸೇರಿ ಸಾಮಾಜಿಕ ಜಾಲತಾಣ ಮೂಲಕ ಸಮಾರಂಭದ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿತ್ತು.

ಸಾನಿಧ್ಯ ವಹಿಸಿದ್ದ ಆರ್ಟ್ ಆಫ್ ಲಿವಿಂಗ್‌ನ ಶ್ರೀ ರವಿಶಂಕರ ಗುರೂಜಿ ಮಾತನಾಡಿ, ಸ್ವಾವಲಂಬಿ ದೇಶ, ಆತ್ಮನಿರ್ಭರ ಭಾರತಕ್ಕೆ ಶರಣರ ಕಾಯಕವೇ ಕೈಲಾಸ ಸಿದ್ಧಾಂತ ಅವಶ್ಯವಾಗಿದೆ. ಯುವಕರು ವಚನಗಳ ಅಧ್ಯಯನ ಮಾಡಿ ಶರಣರು ಪ್ರತಿಪಾದಿಸಿದ ತತ್ವಗಳನ್ನು ನಿಜಾಚರಣೆಯಲ್ಲಿ ತರುವ ಮೂಲಕ ಸ್ವಾವಲಂಬಿ ಆಗಬೇಕು. ಯುವಕರಲ್ಲಿ ಹೊಸ ಹುರುಪು ಬರಲು ವಚನ ಸಾಹಿತ್ಯ ಅವಶ್ಯವಾಗಿದೆ ಎಂದರು.

ಜಗತ್ತಿನಲ್ಲಿ ಅನೇಕ ಕ್ರಾಂತಿಗಳು ನಡೆದಿದ್ದು, ಅದರಲ್ಲಿ ವಿಷೇಶವಾಗಿ ಕರ್ನಾಟಕದಲ್ಲಿ ಬಸವಣ್ಣನವರು ಮಾಡಿದ ಕ್ರಾಂತಿ ಅಮೋಘವಾದದ್ದು. ಬಸವಣ್ಣನವರ ಜ್ಞಾನ, ಧ್ಯಾನ ಹಾಗೂ ಭಕ್ತಿಯ ಕ್ರಾಂತಿ ನಭೂತೊ ನಭವಿಷ್ಯತಿ ಎಂಬಂತಿದೆ. ಯಾವುದೇ ಜಾತಿ ಮತ ಭೇದಭಾವ ಇಲ್ಲದೆ ವಿಶ್ವದ ಎಲ್ಲ ಜನಾಂಗದವರನ್ನು ಒಂದುಗೂಡಿಸಿ, ಭಗವಂತನೆಡೆಗೆ ಕರೆದ್ಯೊಯುವ ಆಧ್ಯಾತ್ಮಿಕ ಕ್ರಾಂತಿ ಎನಿಸಿದೆ. ಶರಣರ ವಚನಗಳು ಕರ್ನಾಟಕದ ನಿಜವಾದ ಸಂಪತ್ತು ಎನಿಸಿವೆ ಎಂದು ಹೇಳಿದರು.

ಧಾರವಾಢ ಮುರಘಾ ಮಠದ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ, ಮುರಘಾ ಮಠದ ಮಹಾಂತಪ್ಪಗಳ ಪ್ರೇರಣೆಯ ನುಡಿ ಕೇಳಿ ಬಸವಕಲ್ಯಾಣದಲ್ಲಿ ಅನುಭವಮಂಟಪ ನಿರ್ಮಾಣ ಕಾರ್ಯ ನಡೆದು 1982 ರಲ್ಲಿ ಪೂರ್ಣಗೊಳಿಸಿದ ಕೀರ್ತಿ ಲಿಂ. ಚನ್ನಬಸವ ಪಟ್ಟದ್ದೇವರಿಗೆ ಸಲ್ಲುತ್ತದೆ. ಅಂದಿನಿಂದ ಎಲ್ಲ ವಿಧಾಯಕ ಕಾರ್ಯಗಳು ನಿರಂತರವಾಗಿ ನಡೆಯಲು ಇಂದಿನ ಭಾಲ್ಕಿ ಹಿರೇಮಠದ ಹಿರಿಯ ಮತ್ತು ಕಿರಿಯ ಪಟ್ಟದ್ದೇವರಿಗೆ ಸಲ್ಲುತ್ತದೆ. ಶರಣರ ಬದುಕು ಬರಹದಂತೆ ನಮ್ಮೆಲ್ಲರ ಜೀವನ ಪರಿವರ್ತನೆಗೊಳ್ಳಲಿ ಎಂದರು.

Advertisement

ಇದನ್ನೂ ಓದಿ: ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ಅಧಿವೇಶನದಲ್ಲಿ ಗಂಭೀರ ಚರ್ಚೆ: ಸ್ಪೀಕರ್ ಕಾಗೇರಿ

ಅನುಭವ ಮಂಟಪ ಅಧ್ಯಕ್ಷರಾದ ಡಾ. ಬಸವಲಿಂಗ ಪಟ್ಟದ್ದೇವರು ಆಶಯ ನುಡಿ ಮಂಡಿಸಿ, ವಿಶ್ವಕ್ಕೆ ಪ್ರಪ್ರಥಮವಾಗಿ ಪ್ರಜಾಪ್ರಭುತ್ವ ಕಲ್ಪನೆ ಕೊಟ್ಟದ್ದು ಬಸವಾದಿ ಶರಣರು. ಅದು ಈ ಬಸವಕಲ್ಯಾಣದ ಅನುಭವ ಮಂಟಪದಿಂದಲೇ ಎಂಬುದು ಲಿಂಗಾಯತ ಧರ್ಮೀಯರಿಗೆ ಹೆಮ್ಮೆಯ ಸಂಗತಿ. ಬಸವಣ್ಣ ತುಳಿತಕ್ಕೆ ಒಳಗಾಗಿದವರನ್ನು ಅಪ್ಪ-ಬಪ್ಪ ಅಪ್ಪಿಕೊಳ್ಳುವ ಒಪ್ಪಿಕೊಳ್ಳುವ ಮೂಲಕ ಸಾಮಾಜಿಕ ಸಮಾನತೆಯನ್ನು ನೀಡಿದರು. ಅಸ್ಪ್ರಶ್ಯತೆ ಜಾತಿಯತೆ, ವ್ಯೆಷ್ಯಾವೃತ್ತಿ ಹಾಗೂ ಮೂಢನಂಬಿಕೆ ನಿರ್ಮೂಲನೆಗಾಗಿ ಹೋರಾಡಿದರು. ಅವರು ಸಾರಿದ ತತ್ವಾದರ್ಶಗಳು ಇಂದಿಗೂ ನಮಗೆ ಪ್ರಸ್ತುತವಾಗಿವೆ ಎಂದು ತಿಳಿಸಿದರು.

ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಶರಣರ ಸಮಾನತೆಯ ತತ್ವ ಮತ್ತು ಕಾಯಕವೇ ಕೈಲಾಸ ಸಿದ್ಧಾಂತ ನಿತ್ಯ ಜೀವನದ ರೂಢಿಯಲ್ಲಿ ಬರಲಿ ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಅಭಿನವ ಅನುಭವ ಮಂಟಪ ಬಸವಕಲ್ಯಾಣದ ಪರಿಸರದಲ್ಲಿ ನಿರ್ಮಾಣ ಮಾಡಿದ ಕೀರ್ತಿ ಲಿಂ. ಚನ್ನಬಸವ ಪಟ್ಟದ್ದೇವರಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು. ಎಂಎಲ್‌ಸಿ ಬಸವರಾಜ ಹೊರಟ್ಟಿ ಮಾತನಾಡಿ, ಸಮಾಜದಲ್ಲಿ ಅಸ್ಪೃಶ್ಯತೆ ನಿರ್ಮೂಲನೆ ಮಾಡಿ ಕಲ್ಯಾಣ ರಾಜ್ಯದ ಕಲ್ಪನೆ ಕೊಟ್ಟವರು ಬಸವಾದಿ ಶರಣರು ಎಂದರು.

ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ: ಹೆಲ್ಮೆಟ್ ನಿಯಮದಲ್ಲಿ ಬದಲಾವಣೆ, BISಗೆ ಮಾತ್ರ ಮಾನ್ಯತೆ, ಏನಿದು?

ಡಿಸಿ ರಾಮಚಂದ್ರನ್ ಆರ್. ಧ್ವಜಾರೋಹಣ ನೆರವೇರಿಸಿ, ಜೀವನಕ್ಕೆ ಅರ್ಥಬರಲು ಮನುಷ್ಯತ್ವ ಬೇಕು. ತನ್ನ ತಾ ಆತ್ಮಾವಲೋಕನ ಮಾಡಿಕೊಳ್ಳುವ ಗುಣ ಬೇಕು. ಶರಣರ ಸಮಾನತೆ ತತ್ವ ವಿಶ್ವಶಾಂತಿಗೆ ರಹದಾರಿಯಾಗಿದೆ ಅದು ರೂಢಿಗೆ ಬರಬೇಕು ಎಂದರು. ಬಿಕೆಡಿಬಿ ಆಯುಕ್ತ ಶರಣಬಸಪ್ಪ ಕೊಟ್ಟಪ್ಪಗೋಳ ವಚನ ಪಠಣ ನಡೆಸಿಕೊಟ್ಟರು. ಬಸವೇಶ್ವರ ದೇವಸ್ಥಾನ ಪಂಚಕಮೀಟಿ ಅಧ್ಯಕ್ಷ ಅನೀಲ ರಗಟೆ ಗ್ರಂಥ ಲೋಕಾರ್ಪಣೆ ಮಾಡಿದರು.

ತಹಸೀಲ್ದಾರ ಸಾವಿತ್ರಿ ಶರಣು ಸಲಗರ,  ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಅವರಿಂದ ಬಸವ ಗುರುಪೂಜೆ ನೇರವೇರಿತು. ವೈಜಿನಾಥ ಕಾಮಶೆಟ್ಟಿ, ಡಾ. ಎಸ್.ಬಿ.ದುರ್ಗೆ, ಕುಪೇಂದ್ರ ಪಾಟೀಲ, ಮಾಲತಿ ಇವಳೆ, ಡಾ. ಸೋಮನಾಥ ಯಾಳವಾರ, ಧನರಾಜ ತಾಳಂಪಳ್ಳಿ, ಜಯರಾಜ ಖಂಡ್ರೆ, ಗುರುನಾಥ ಕೊಳ್ಳುರು ಇದ್ದರು. ಬಸವರಾಜ ಬಾಲಕಿಲೆ ಸ್ವಾಗತಿಸಿದರು.

 ‘ವಚನಗಳಲ್ಲೇ ಸಂವಿಧಾನವಿದೆ

ಜೀವನ ಮತ್ತು ಉಪ ಜೀವನ ಎರಡರ ಚರ್ಚೆ ಅನುಭವ ಮಂಟಪದಲ್ಲಿ ನಡೆಸಿ, ಪರಮಾರ್ಶಿಸಿ ಜೀವನ ದರ್ಶನ ಮಾಡಿಸಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ. ಅವರ ವಚನಗಳಲ್ಲಿ ಇಡೀ ಸಂವಿಧಾನವಿದೆ. ಪ್ರಜಾಪ್ರಭುತ್ವದ ಮಾತೃಭೂಮಿ ಇಂಗ್ಲೇಡ್ ಅಲ್ಲ, ಭಾರತ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದಕ್ಕೆ ಬಸವಣ್ಣನವರೇ ಮೂಲವ್ಯಕ್ತಿ.

-ಪ್ರಹ್ಲಾದ ಜೋಶಿ, ಕೇಂದ್ರ ಸಚಿವ (ಉದ್ಘಾಟನಾ ಭಾಷಣ)

‘ವಚನ ಸಾಹಿತ್ಯ ವಿಶ್ವಕ್ಕೆ ಮಾದರಿ’

ಬಸವಾದಿ ಶರಣರು ಬೋಧಿಸಿದ ವಚನ ಸಾಹಿತ್ಯ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ವಿಶ್ವಮಾನ್ಯ ಸಾಹಿತ್ಯ ಎನಿಸಿಕೊಂಡಿದೆ. ಅದು ನಮ್ಮ ಇಡೀ ಭಾರತೀಯರಿಗೆ ಹೆಮ್ಮೆಯ ವಿಷಯವಾಗಿದೆ. ವಚನಗಳನ್ನು ಓದುವುದರ ಜತೆಗೆ ಬದುಕಿನಲ್ಲಿ ಒಂದಾಗಿಸಿಕೊಳ್ಳಬೇಕು.

– ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಪತಿ

ಇದನ್ನೂ ಓದಿ: ಸಂತೋಷ್ ಆತ್ಮಹತ್ಯೆ ಪ್ರಯತ್ನದ ಹಿಂದೆ ವಿಜಯೇಂದ್ರ ಒತ್ತಡ ಇರಬಹುದು: ಕಾಂಗ್ರೆಸ್

Advertisement

Udayavani is now on Telegram. Click here to join our channel and stay updated with the latest news.

Next