Advertisement

ಮೀಸಲಾತಿ ಪಡೆಯದೇ ಮಠಕ್ಕೆ ಮರಳುವುದಿಲ್ಲ: ಬಸವ ಜಯ ಮೃತ್ಯುಂಜಯ ಸ್ವಾಮೀಜಿ

09:02 PM Feb 21, 2021 | Team Udayavani |

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಪಡೆಯದೇ ಪೀಠಕ್ಕೆ ಮರಳುವುದಿಲ್ಲ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಘೋಷಿಸಿದ್ದಾರೆ.

Advertisement

ನಗರದ ಅರಮನೆ ಮೈದಾನದಲ್ಲಿ ಪಂಚಮಸಾಲಿ ಸಮುದಾಯದ ಬೃಹತ್‌ ಸಮಾವೇಶದಲ್ಲಿ ಸಮಾಜದ ಹಕ್ಕೊತ್ತಾಯದ ನುಡಿಗಳನ್ನಾಡಿದ ಅವರು, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಗಾಗಿ ಸಂಕ್ರಾಂತಿಯಂದು ಕೂಡಲಸಂಗಮದಿಂದ ಪಾದಯಾತ್ರೆ ಆರಂಭಿಸಿ ಬೆಂಗಳೂರಿನಲ್ಲಿ ಸಮಾವೇಶ ಮಾಡುತ್ತಿದ್ದೇವೆ. ಇದುವರೆಗೆ ಹಲವಾರು ಸಮುದಾಯದವರು ಇಲ್ಲಿ ಸಮಾವೇಶ ಮಾಡಿ ಮಾಡಿರಬಹುದು ಆದರೆ, ನಾವು ಕರೆ ಕೊಟ್ಟರೆ ನಮ್ಮ ಶಕ್ತಿ ಏನು ಎನ್ನುವುದನ್ನು ತೋರಿಸಬಹುದು ಎಂದು ಸಾಬೀತುಮಾಡಿದ್ದೇವೆ ಎಂದರು.

ಸಮಾವೇಶದ ನಂತರ ವಿಧಾನಸೌದದ ಎದುರು ಮಾರ್ಚ್‌ 4 ರ ವರೆಗೂ ಧರಣಿ ನಡೆಸಲಾಗುವುದು. ಆಗಲೂ ಸರ್ಕಾರ ಮೀಸಲಾತಿ ಆದೇಶ ನೀಡದಿದ್ದರೆ, ಮಾರ್ಚ್‌ 5 ರಿಂದ ಅಮರಣಾಂತ ಉಪವಾಸ ನಡೆಸಲಾಗುವುದು ಎಂದು ಘೋಷಿಸಿದರು.

ಸಮಾಜದ ಋಣ ತೀರಿಸಲು ಪಾದಯಾತ್ರೆ:
ನನಗೆ ನಮ್ಮ ತಂದೆ ತಾಯಿ ಋಣ ತೀರಿಸಲು ಸಾಧ್ಯವಾಗಲಿಲ್ಲ, ಅವರ ನಿರೀಕ್ಷೆಯಂತೆ ಓದಿ ಮುಂದುಬರಲು ಆಗಲಿಲ್ಲ, ಬಾಲ್ಯದಲ್ಲೇ ಮಠ ಸೇರಿದೆವು ಆದರೆ, ಇಂದು ಪಾದಯಾತ್ರೆ ಮೂಲಕ ಸಮಾಜದ ಋಣ ತೀರಿಸುವ ಪ್ರಯತ್ನ ಮಾಡಿದ್ದೇವೆ. ಸಮಾಜವೇ ತಂದೆ ತಾಯಿ ಆಗಿದೆ. ಈ ಮೂಲಕ ಸಮಾಜದ ನಾನು ಋಣ ತೀರಿಸುತ್ತಿದ್ದೇನೆ. ನಮ್ಮ ಪದಾಯಾತ್ರೆ ಪ್ರಮಾಣಿಕ, ನ್ಯಾಯಯುತವಾಗಿದೆ. ಪಾದಯಾತ್ರೆಯಲ್ಲಿ ಯಾರಿಗೂ ಯಾವುದೇ ತೊಂದರೆ ಆಗದಂತೆ ನಡೆದಿದೆ. ಕೇವಲ ಪಂಚಮಸಾಲಿ ಸಮಾಜಕ್ಕೆ ಸೀಮಿತವಾಗಿ ಪಾದಯಾತ್ರೆ ಮಾಡಲಿಲ್ಲ, ಸಾಮಾಜಿಕ ನ್ಯಾಯಕ್ಕಾಗಿ 708 ಕಿ. ಮೀ. ಪಾದಯಾತ್ರೆ ಮಾಡಿದ್ದೇವೆ ಎಂದರು.

ಮೀಸಲಾತಿ ಕೇಳುವ ಅಧಿಕಾರ ಎಲ್ಲರಿಗೂ ಇದೆ, ಮೀಸಲಾತಿ ಕೇಳಲು ಇದು ಒಳ್ಳೆಯ ಸಮಯ, ಆದರೆ, ಪಂಚಮಸಾಲಿಗೆ ಕೊಡಬೇಡಿ ಎಂದು ಯಾರೂ ಕೇಳಬೇಡಿ ಎಂದು ಇತರ ಸಮುದಾಯಗಳಿಗೆ ಶ್ರೀಗಳು ಮನವಿ ಮಾಡಿದರು.

Advertisement

2 ಎ ಮೀಸಲಾತಿ ಸಿಗದ ಹೊರತು ಮಠಕ್ಕೆ ಮರಳುವುದಿಲ್ಲ. ಸರ್ಕಾರದವರು ಏನು ಸುದ್ದಿ ಕೊಡಲಿದ್ದಾರೆ ಎನ್ನುವ ನಿರೀಕ್ಷೆಯಲ್ಲಿದ್ದೇವೆ. ಹಿಂದೆ ದೇವೇಗೌಡರು ಸಿಎಂ ಆಗಿದ್ದಾಗ ಆ ಸಮುದಾಯದಕ್ಕೆ ನ್ಯಾಯ ಕೊಟ್ಟಿದ್ದರು., ಅರಸು ಹಲವು ಹಿಂದುಳಿದ ವರ್ಗಕ್ಕೆ ನ್ಯಾಯ ಕೊಟ್ಟರು, ಹಾಗಾಗಿ ಈಗ ನಾವು ಯಡಿಯೂರಪ್ಪ ಅವರಿಂದ ನಿರೀಕ್ಷೆ ಮಾಡುತ್ತಿದ್ದೇವೆ, ನಮಗೆ ಯಾವುದೇ ಅನುದಾನ, ನಿಗಮ ಮಂಡಳಿ ಬೇಡ. ನಮ್ಮ ಸಮುದಾಯವನ್ನು 2 ಎ ಗೆ ಸೇರಿಸಿ ಎಂದು ಮನವಿ ಮಾಡಿದರು

ನಾನು ಮಠ ಕಟ್ಟಿಲ್ಲ, ಸಮಾಜ ಕಟ್ಟಿದ್ದೇನೆ:
ಪಂಚಮಸಾಲಿ ಸಮುದಾಯದ ಮೊದಲ ಪೀಠಾಧ್ಯಕ್ಷರಾಗಿ ಇಷ್ಟು ವರ್ಷವಾದರೂ ಮಠ ಕಟ್ಟಿಲ್ಲ ಎಂಬ ಆರೋಪ ಇದೆ. ನಾನು ಇದುವರೆಗೂ ಸಮಾಜ ಕಟ್ಟುವ ಕೆಲಸ ಮಾಡಿದ್ದೇನೆ. ಇನ್ನು ಮುಂದೆ ನೀವು ಮಠ ಕಟ್ಟಿ. ಜುಲೈ 23 ರಿಂದ ಅಕ್ಟೋಬರ್‌ 23 ರವರೆಗೆ ಮಠ ನಿರ್ಮಾಣಕ್ಕೆ ಜೋಳಿಗೆ ಹಿಡಿದು ಹಳ್ಳಿಹಳ್ಳಿಗೆ ಬರಲಿದ್ದೇನೆ, ನೀವೇ ಹಣ ನೀಡಿ ಮಠ ಕಟ್ಟಬೇಕು, ಮಠ ಕಟ್ಟಿದವರು ಇತಿಹಾಸದಲ್ಲಿವುಳಿಯಲ್ಲ. ಸಮಾಜ ಕಟ್ಟಿದವರು ಉಳಿಯಲಿದ್ದಾರೆ ಎಂದು ಹೇಳಿದರು.

ನಾವು ಶ್ರಮಿಕರು, ನಮಗೆ ಯಾರ ಭಿಕ್ಷೆಯೂ ಬೇಡ. ನಾವು ನಮ್ಮ ಹಕ್ಕು ಕೇಳುತ್ತಿದ್ದೇವೆ. ಇದು ನಮ್ಮ ರಾಜಕೀಯ ಮೆಟ್ಟಿಲು ನಡೆಸಲು ನಡೆಸುವ ಸಮಾವೇಶ ಅಲ್ಲ. ನಮ್ಮ ಹಕ್ಕು ಕೊಡಬೇಕು. ರಾಣಿ ಚೆನ್ನಮ್ಮನ ಅಮರನೆಯನ್ನು ಪುನರುಜ್ಜೀವನ ಗೊಳಿಸಲು ಚೆನ್ನಮ್ಮ ಪ್ರಾಧಿಕಾರ ರಚನೆ ಮಾಡಬೇಕು.
– ಲಕ್ಷ್ಮಿ ಹೆಬ್ಟಾಳ್ಕರ್‌, ಶಾಸಕಿ

27 ವರ್ಷಗಳಿಂದ ನಮ್ಮ ಹೋರಾಟ ನಡೆಯುತ್ತಿದೆ. ನಾನು ರಾಜಕೀಯ ಬಿಡುತ್ತೇನೆ, ಆದರೆ ಸಮಾಜ ಬಿಡುವುದಿಲ್ಲ. ಸಮಾಜಕ್ಕಾಗಿ ಮಾರ್ಚ್‌ 4 ರಿಂದ ಅಮರಣಾಂತ ಉಪವಾಸ ಮಾಡಲು ತೀರ್ಮಾನಿಸಲಾಗುವುದು.
– ವಿಜಯಾನಂದ ಕಾಶಪ್ಪನವರ್‌, ಅಖೀಲ ಭಾರತ ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷ.

ನಾವು ಯಾರನ್ನೂ ನಾಯಕರನ್ನಾಗಿ ಮಾಡಲು ಯಾರನ್ನೋ ಕೆಳಗಿಳಿಸಲು ಈ ಸಮಾವೇಶ ಮಾಡುತ್ತಿಲ್ಲ. ಯಡಿಯೂರಪ್ಪ ಮೇಲೆ ನನಗೆ ನಂಬಿಕೆ ಇದೆ. ನಮಗೆ ಪ್ರಧಾನಿ ಮೋದಿ ಬಗ್ಗೆ ಗೌರವ.ಇದೆ. ಪ್ರಧಾನಿ ನಾವು ನಿಮ್ಮ ಜೊತೆ ಇದ್ದೇವೆ. ನೀವು ನಮಗೆ ಸಾಮಾಜಿಕ.ನ್ಯಾಯ ಕೊಡಿಸಬೇಕು. ಅವರು ನಮ್ಮ ಸಮುದಾಯಕ್ಕೆ ಮೀಸಲಾತಿ ಒದಗಿಸುತ್ತಾರೆ ಎಂಬ ವಿಶ್ವಾಸ ಇದೆ.
– ವಚನಾನಂದ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠಾಧ್ಯಕ್ಷರು.

ಈ ಪಾದಯಾತ್ರೆ ನಮ್ಮ ಮನೆಯವರ ಕನಸಾಗಿತ್ತು. ಈಗ ನಾವು ಸಂಕಷ್ಟದಲ್ಲಿದ್ದೇವೆ. ವಿನಯ್‌ ಕುಲಕರ್ಣಿಯವರು ಯಾವಾಗಲೂ ಸಮಾಜದ ಜೊತೆಗೆ ಇ¨ªಾರೆ. ನೀವು ನಮ್ಮ ಜೊತೆ ಇರಬೇಕು.
– ಶಿವಲೀಲಾ, ವಿನಯ್‌ ಕುಲಕರ್ಣಿ ಪತ್ನಿ

ನಮ್ಮ ಸಮಾಜ ಇಬ್ಬರೂ ಶ್ರೀಗಳು ಒಂದೇ ವೇದಿಕೆ ಮೇಲೆ ಕೂಡಿದ್ದೀರಿ. ಎಲ್ಲ ಶಾಸಕರು ಒಗ್ಗಟ್ಟಾಗಿದ್ದೇವೆ. ಸದ್ಯಕ್ಕೆ ಹೋರಾಟವನ್ನು ಸ್ಥಗಿತಗೊಳಿಸುವಂತೆ ಸರ್ಕಾರದ ಪರ ಮನವಿ.
– ಸಿ. ಸಿ ಪಾಟೀಲ್‌, ಸಣ್ಣ ಕೈಗಾರಿಕೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next