ಉಡುಪಿ : ಲಿಂಗಾಯಿತ ಸಮುದಾಯದ ವ್ಯಾಪ್ತಿಯಲ್ಲಿ ಬರುವ ಎಲ್ಲ ಪಂಗಡಗಳಿಗೆ 2ಎ ಮೀಸಲಾತಿ ನೀಡುವ ಬಗ್ಗೆ ಸರಕಾರ ಕೇಳಿರುವ ಕಾಲಾವಕಾಶ ಸೆ. 15ಕ್ಕೆ ಮಕ್ತಾಯವಾಗುತ್ತಿದೆ. ಅ. 1ರೊಳಗೆ ಸಮುದಾಯಕ್ಕೆ ಮೀಸಲಾತಿ ನೀಡದಿದ್ದರೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮತ್ತೆ ಸತ್ಯಾಗ್ರಹ ನಡೆಸಲಾಗುವುದು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಮಹಾ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಪ್ರತಿಜ್ಞಾ ಪಂಚಾಯತ್ ಅಭಿಯಾನ ಅಂಗವಾಗಿ ಉಡುಪಿಗೆ ಭೇಟಿ ನೀಡಿದ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ 3 ಕೋ. ಲಿಂಗಾಯಿತ ಸಮುದಾಯದವರು ಇದ್ದಾರೆ. ಸಾಮಾಜಿಕ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಹೀಗಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂದು ಹೇಳಿದರು.
ಇದನ್ನೂ ಓದಿ :ರೈತರ ಹಿತಕಾಪಾಡುವುದೇ ನನ್ನಉದ್ದೇಶ: ಮಾಜಿ ಶಾಸಕ ಬಾಲಕೃಷ್ಣ
ಲಿಂಗಾಯತ ಸಮುದಾಯದಲ್ಲಿ 110 ಪಂಗಡಗಳಿದ್ದು ಇದರಲ್ಲಿ 34 ಪಂಗಡಗಳಿಗೆ “2ಎ’ ಮೀಸಲಾತಿ ಸೌಲಭ್ಯ ನೀಡಲಾಗಿದೆ. 12 ಪಂಗಡಗಳು “3ಬಿ’ ಮೀಸಲಾತಿ ಪಡೆದಿವೆ. ಉಳಿದ ಪಂಗಡಗಳು ಅವಕಾಶ ವಂಚಿತವಾಗಿದೆ. ಎಲ್ಲರಿಗೂ 2ಎ ಮೀಸಲಾತಿ ಸೌಲಭ್ಯ ದೊರೆಯಬೇಕು. ಈ ಬಗ್ಗೆ ಸರಕಾರವನ್ನು ಆಗ್ರಹಿಸಲಾಗಿದೆ. ಸರಕಾರ ಈ ಕುರಿತು ವರದಿ ನೀಡುವಂತೆ ಹಿಂದುಳಿದ ವರ್ಗದ ಆಯೋಗಕ್ಕೆ ಪತ್ರ ಬರೆದಿದೆ. ಇತ್ತೀಚೆಗೆ ಕೇಂದ್ರ ಸರಕಾರದ ಮೀಸಲಾತಿ ನೀಡುವ ಅಧಿಕಾರವನ್ನು ರಾಜ್ಯಗಳಿಗೆ ವಹಿಸಿರುವುದರಿಂದ ವರದಿಯನ್ನು ಶ್ರೀಘ್ರವಾಗಿ ತರಿಸಿಕೊಂಡು ಲಿಂಗಾಯಿತ ಸಮುದಾಯಕ್ಕೆ ಮೀಸಲಾತಿ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ| ಯು.ಸಿ. ನಿರಂಜನ್, ಉಡುಪಿ ಬಸವ ಸಮಿತಿ ಅಧ್ಯಕ್ಷ ಸಿದ್ದರಾಮಣ್ಣ, ಪದಾಧಿಕಾರಿಗಳಾದ ಗಂಗಾಧರ, ಸುರೇಶ್, ಮಲ್ಲಿಕಾರ್ಜುನಪ್ಪ, ಶಂಭುಲಿಂಗ ಶೆಟ್ಟರ್ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಲಿಂಗಾಯುತರೇ ಆಗಬೇಕೆಂಬುದರ ಬಗ್ಗೆ ನಾನು ಹೇಳಿಕೆ ನೀಡಿಲ್ಲ. ನಾನು ಸೇರಿದಂತೆ ಶೇ.90ರಷ್ಟು ಸ್ವಾಮೀಜಿಗಳು ತಟಸ್ಥ ಇದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕಿಂತ, ಮಂತ್ರಿ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕಿಂತ ಬಡ ಮಕ್ಕಳಿಗೆ ಶಿಕ್ಷಣ ಉದ್ಯೋಗ ನೀಡುವ ಮೀಸಲಾತಿ ಮುಖ್ಯವಾಗಿದೆ. ಅದಕ್ಕಾಗಿ ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.