Advertisement

ಯತ್ನಾಳ್ ವಿರುದ್ಧ ನಮ್ಮವರಿಂದಲೇ ಷಡ್ಯಂತ್ರ: ಬಸವಜಯ ಮೃತ್ಯುಂಜಯ ಶ್ರೀ

05:45 PM May 08, 2022 | Team Udayavani |

ವಿಜಯಪುರ : ಪಂಚಮಸಾಲಿ ಸಮಾಜಕ್ಕೆ ಮೀಸಲು ಕಲ್ಪಿಸಲು ಬದ್ಧತೆಯಿಂದ ಹೋರಾಟದ ಮುಂಚೂಣಿಯಲ್ಲಿ ನಿಂತಿರುವ ಬಸನಗೌಡ ಪಾಟೀಲ ಯತ್ನಾಳ ಅವರು ದೊಡ್ಡ ನಾಯಕರಾಗಿ ಬೆಳೆಯುತ್ತಾರೆಂದು ನಮ್ಮವರೇ ಹೊಟ್ಟಕಿಚ್ಚಿನಿಂದ ಹೋರಾಟ ಹತ್ತಿಕ್ಕಲು ಮುಂದಾಗಿದ್ದಾರೆ. ಒಂದೊಮ್ಮೆ ಮೀಸಲು ಹೋರಾಟದಲ್ಲಿ ಸದನದಲ್ಲಿ ಯತ್ನಾಳ ಅವರನ್ನು ಬೆಂಬಲಿಸದಿದ್ದರೆ ಮುಂಬರುವ 2023 ರ ಚುನಾವಣೆಯಲ್ಲಿ ಪಂಚಮಸಾಲಿ ಸಮಾಜ ಅಸಹಕಾರ ತೋರಲಿದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಎಚ್ಚರಿಸಿದ್ದಾರೆ.

Advertisement

ಭಾನುವಾರ ವಿಜಯಪುರ ತಾಲೂಕಿನ ಹಿಟ್ನಳ್ಳಿ ಗ್ರಾಮದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಅವರ 25 ಲಕ್ಷ ರೂ. ಮೊತ್ತದ ಕಂಚಿನ ಪ್ರತಿಮೆ ಅನಾವರಣ ಮಾಡಿ ಮಾತನಾಡಿ, ಆಡಳಿತ ಪಕ್ಷದ ಶಾಸಕರಾಗಿದ್ದರೂ ಧ್ವನಿ ಇಲ್ಲದ ಸಮುದಾಯಗಳ ಪರವಾಗಿ ಧ್ವನಿ ಎತ್ತುವ, ಹಾಲುಮತ ಸಮಾಜ, ವಾಲ್ಮೀಕಿ ಸಮಾಜ, ಮರಾಠಾ ಸಮಾಜ ಸೇರಿದಂತೆ ಇತರೆ ಸಮುದಾಯಗಳ ಮೀಸಲು ವಿಷಯದಲ್ಲಿ ಸದನದ ಒಳಗೂ, ಹೊರಗೂ ಧ್ವನಿ ಎತ್ತುವ ಮೂಲಕ ತಮ್ಮ ಬದ್ಧತೆ ತೋರಿದ್ದಾರೆ. ಉತ್ತರ ಕರ್ನಾಟಕ ಅಭಿವೃದ್ಧಿ ಪರ ಧ್ವನಿ ಎತ್ತುತ್ತಲೇ ಬರುತ್ತಿರುವ ಶಾಸಕ ಯತ್ನಾಳ ಅವರು ಕರ್ನಾಟಕದಲ್ಲಿ ನಾಯಕರಾಗಿ ಹೊರ ಹೊಮ್ಮಿದ್ದಾರೆ. ಹಿಂದುತ್ವದ ಪರವಾಗಿ ಧ್ವನಿ ಎತ್ತಿ ಹಿಂದುತ್ವದ ಪ್ರಖರ ನಾಯಕರಾಗಿ ರೂಪುಗೊಂಡಿದ್ದಾರೆ. ಇದನ್ನು ಸಹಿಸದ ಕೆಲವು ನಾಯಕರು ಹೊಟ್ಟಕಿಚ್ಚಿನಿಂದ ಅವರ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ. ನಮ್ಮವರೇ ನಿನ್ನೆಯಿಂದ ಕುತಂತ್ರ ಆರಂಭಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪಂಚಮಸಾಲಿ ಸಮಾಜದ 2ಎ‌ ಮೀಸಲು ಹೋರಾಟದ ಪರವಾಗಿ ಮಾತನಾಡಿದರೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗುವುದಿಲ್ಲ ಎಂಬ ಭಯದಲ್ಲಿ ಕೆಲವು ಶಾಸಕರು, ಅದರಲ್ಲೂ ನಮ್ಮದೇ ಸಮಾಜದ ಶಾಸಕರು ಭಯದಿಂದಾಗಿ ಮೀಸಲು ಹೋರಾಟದಲ್ಲಿ ಪಾಲ್ಗೊಳ್ಳದೇ, ಈ ಬಗ್ಗೆ ಮಾತನಾಲು ಹಿಂದೇಟು ಹಾಕುತ್ತಿದ್ದಾರೆ.‌ ರಾಜಕೀಯವಾಗಿ ಇಂತಹ ಭಯವಿಲ್ಲದೇ ಯತ್ನಾಳ ಅವರ ಮುನ್ನುಗ್ಗುತ್ತಿದ್ದು, ಸಮಾಜದ ಪ್ರಶ್ನಾತೀತ ಅಪ್ರತಿಮ ನಾಯಕ ಎನಿಸಿಕೊಂಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕುತಂತ್ರ, ಷಡ್ಯಂತ್ರ ನಡೆಸಲಾಗುತ್ತದೆ ಎಂದು ಹರಿಹಾಯ್ದರು.

ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಚಾಡಿಕೋರರ ಮಾತು ಕೇಳಿ ನಮ್ಮ ಸಮಾಜಕ್ಕೆ ನೀಡಿದ್ದ ಮೀಸಲು ಕಲ್ಪಿಸುವ ಭರವಸೆ ಈಡೇರಿಸಲಿಲ್ಲ. ಇದೀಗ ಶಾಸಕ ಯತ್ನಾಳ ಅವರಿಗೆ ಸದನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸದನದಲ್ಲಿ ನೀಡಿದ ಮಾತಿನಂತೆ ಮೀಸಲು ಕಲ್ಪಿಸಿ ವಚನ ಪಾಲಿಸಬೇಕು. ಯಡಿಯೂರಪ್ಪ ಅವರಂತೆ ಬೊಮ್ಮಾಯಿ ಅವರೂ ಚಾಡಿಕೋರರ ಮಾತಿನಿಂದ ನಮ್ಮ ಸಮಾಜಕ್ಕೆ ನೀಡಿದ ಮಾತು ತಪ್ಪಿದರೆ, ಕುತಂತ್ರಿಗಳ ಮಾತಿನಿಂದ ನಂಬಿಕೆ ಹುಸಿಗೊಳಿಸಿದರೆ ಚುನಾವಣೆಯಲ್ಲಿ ಪಂಚಮಸಾಲಿ ಸಮಾಜ ರಾಜ್ಯದ 224 ಕ್ಷೇತ್ರಗಳಲ್ಲೂ ಅಸಹಕಾರದ ಮೂಲಕ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಸಿದರು‌.

ರಾಜಕೀಯವಾಗಿ ಪ್ರಾಮಾಣಿಕತೆ ಮೈಗೂಡಿಸಿಕೊಂಡಿರುವ ಶಾಸಕ ಯತ್ನಾಳ, ನುಡಿದಂತೆ ನಡೆಯುವ, ನಡೆದಂತಡ ನುಡಿಯುವ ನಾಯಕ. ಪಂಚಮಸಾಲಿ ಸಮಾಜದ ಬಡ ಮಕ್ಕಳಿಗೆ ಮೀಸಲು ಸೌಲಭ್ಯಕ್ಕಾಗಿ ನಿಶ್ವಾರ್ಥದಿಂದ ಶ್ರಮಿಸುತ್ತಿರುವ ಅವರ ವಿರುದ್ಧ ಕುತಂತ್ರ ನಡೆಸಿದರೆ ಸಮಾಜದ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ಸಂದೇಶ ನೀಡಿದರು.

Advertisement

ಯರನಾಳ ಗುರುಸಂಗನಬಸವ ಶ್ರೀ, ಮನಗೂಳಿ ಅಭಿನವ ಸಂಗನಬಸ ಶ್ರೀ, ಭುರಣಾಪೂರ ಯೋಗೇಶ್ವರಿ ಮಾತಾಜಿ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್, ದೇವಾನಂದ ಚವ್ಹಾಣ, ಮಾಜಿ ಶಾಸಕರಾದ ವಿಟ್ಠಲ ಕಟಕದೊಂಡ, ರಾಜು ಆಲಗೂರ, ಅಪ್ಪುಗೌಡ ಪಾಟೀಲ ಮನಗೂಳಿ, ಬಿ.ಎಸ್.ಪಾಟೀಲ, ಎಂ.ಎಸ್.ರುದ್ರಗೌಡರ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂ ಪೀರ ವಾಲೀಕಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next