ಭಾಲ್ಕಿ: ಬಸವಾದಿ ಶರಣರು ನಮಗೆ ಸಹಜವಾದ ಮಾರ್ಗ ನೀಡಿದ್ದಾರೆ. ಶರಣರ ವಚನಗಳ ಒಂದೊಂದೇ ಸಂದೇಶವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನ ಸುಖೀ, ಸಂತೃಪ್ತಿಯಾಗುವುದು ಎಂದು ಹಿರೇಮಠ ಸಂಸ್ಥಾನದ ಹಿರಿಯ ಸ್ವಾಮೀಜಿ ಡಾ| ಬಸವಲಿಂಗ ಪಟ್ಟದ್ದೇವರು ಹೇಳಿದರು.
ಪಟ್ಟಣದ ಚನ್ನಬಸವಾಶ್ರಮದಲ್ಲಿ ನಡೆದ 273ನೇ ಮಾಸಿಕ ಶರಣರ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವಗುರು ಬಸವಣ್ಣನವರ ಬೆಳಕಿನಲ್ಲಿ ಬೆಳಗಿದ ನಾಲ್ಕು ಮಹಾನುಭಾವ ಶರಣರ ಜಯಂತಿಯನ್ನು ಜನೆವರಿ ತಿಂಗಳಲ್ಲಿ ಬರುತ್ತವೆ. ಶರಣ ಒಕ್ಕಲಿಗ ಮುದ್ದಣ, ಶರಣ ಶಿವಯೋಗಿ ಸಿದ್ಧರಾಮೇಶ್ವರ, ಶರಣ ಮೇದಾರ ಕೇತಯ್ಯ, ಶರಣ ಅಂಬಿಗರ ಚೌಡಯ್ಯ ಮುಂತಾದ ಎಲ್ಲ ಶರಣರ ಜೀವನದಲ್ಲಿನ ಒಂದೊಂದು ಸಂದೇಶವಾದರೂ ನಾವು ಅಳವಡಿಸಿಕೊಂಡರೆ ನಮ್ಮ ಜೀವನ ಸುಖೀ-ಸಂತೃಪ್ತಿಯಾಗುತ್ತದೆ ಎಂದರು.
ನಿರಂಜನ ಸ್ವಾಮಿಗಳು ಮಾತನಾಡಿ, ವಿಶ್ವಗುರು ಬಸವಣ್ಣನವರು ಜನಸಾಮಾನ್ಯರಿಗೆ ತಿಳಿಯುವ ಹಾಗೆ ಸಹಜವಾಗಿ ಆಚರಣೆಗೆ ಸಾಧ್ಯವಿರುವ ಹಾಗೆ ಜೀವನ ವಿಧಾನವನ್ನು ಕಲಿಸಿಕೊಟ್ಟಿದ್ದಾರೆ. ಆದರೆ, ನಾವು ಡಾಂಭಿಕತೆ, ವೈಭವೀಕರಣಕ್ಕೆ ಮಹತ್ವ ನೀಡುತ್ತೇವೆ. ಸಹಜವಾಗಿರುವ ತತ್ವ ನಮಗೆ ಆಕರ್ಷಣೆಯಾಗುವುದಿಲ್ಲ. ಅದಕ್ಕಾಗಿ ನಾವು ಮೋಸ ಹೋಗುತ್ತೇವೆ. ನಮ್ಮ ಜೀವನದ ನೆಮ್ಮದಿ ಕಳೆದುಕೊಳ್ಳುತ್ತೇವೆ. ನಾವು ನಮ್ಮ ಜೀವನ ಸುಂದರಗೊಳಿಸಬೇಕಾದರೆ ಶರಣ ಮಾರ್ಗದಲ್ಲಿ ಮುನ್ನಡೆಯಬೇಕು ಎಂದರು.
ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಸಮ್ಮುಖ ವಹಿಸಿದ್ದರು. ಇದೇ ವೇಳೆ ಮಲ್ಲಿಕಾರ್ಜುನ ಸ್ವಾಮಿ ಸಂಪಾದಿಸಿದ 2022 ಜನಧ್ವನಿ ದಿನದರ್ಶಿಕೆಯನ್ನು ಬೀದರ ಉದ್ಯಮಿಗಳಾದ ವಿವೇಕಾನಂದ ಧನ್ನೂರು ಬಿಡುಗಡೆ ಮಾಡಿದರು.
ವಿಶ್ವನಾಥಪ್ಪ ಬಿರಾದಾರ, ಬಸವರಾಜ ಮರೆ, ಶಿವಾನಂದ ಗುಂದಗೆ, ಶಶಿ ಶೆಟಕಾರ, ಶಶಿಧರ ಕೋಸಂಬೆ, ಮಹಾದೇವಿ ಸ್ವಾಮಿ, ಕಾರಂಜಿ ಸ್ವಾಮಿ, ಶಾಂತಯ್ಯ ಸ್ವಾಮಿ ಇದ್ದರು. ಡಾ| ಶಿವಲೀಲಾ, ಡಾ| ಸಂಗಮೇಶ ಖೇಳಗೆ ಸಲಗರ ದಂಪತಿಯಿಂದ ದಾಸೋಹ ಸೇವೆ ನಡೆಯಿತು.