ಬಸವಕಲ್ಯಾಣ: ಹನ್ನೆರಡನೇಯ ಶತಮಾನದಲ್ಲಿ ಕಲ್ಯಾಣದ ಅಧಿಕಾರಿಯಾಗಿದ್ದ ವಿಶ್ವಗುರು ಬಸವಣ್ಣ ಅಸಮಾನತೆ, ಜಾತಿ-ಲಿಂಗ ಶೋಷಣೆಯ ಪರಿಯಿಂದ ಬಹುವಾಗಿ ನೊಂದು ಕ್ರಾಂತಿ ಮಾಡಿದ್ದರು. ಆ ಕ್ರಾಂತಿ ಫಲವಾಗಿಯೇ ನಿರ್ಮಾಣವಾಗಿದ್ದು ಅನುಭವ ಮಂಟಪ ಎಂದು ಹುಬ್ಬಳ್ಳಿಯ ಸಾಹಿತಿ ಸೋಮುರೆಡ್ಡಿ ಹೇಳಿದರು.
ನಗರದ ಅನುಭವ ಮಂಟಪದಲ್ಲಿ ಶನಿವಾರ ನಿವೇದಿತಾ ಹೂಗಾರ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ವ್ಯಕ್ತಿತ್ವ ವಿಕಸನ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ನಡೆದ ರಾಜ್ಯಮಟ್ಟದ ಎರಡು ದಿನಗಳ ಸಾಹಿತ್ಯ ಸುಗ್ಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೀದರ್ ಜಿಲ್ಲೆಗೆ ತನ್ನದೆ ಆದ ಐತಿಹಾಸಿಕ ಹಿನ್ನೆಲೆ ಇದೆ. ಹಿಂದೆ ಇದ್ದಂತಹ ಕುಂತಲ ದೇಶದ ಒಂದು ಭಾಗವಾಗಿತ್ತು. ಇದನ್ನು ಬಿದಿರ ಬಿದಿರು, ಬಿದರೆಪುರ ಹಾಗೂ ವಿದರು ನಗರ ಎಂದು ಕರೆಯತ್ತಿದ್ದರು ಎಂಬುದು ಇತಿಹಾಸ ತಜ್ಞರಿಂದ ತಿಳಿದು ಬಂದಿದೆ ಎಂದರು. ವಿದುರ ಎಂಬುದು ಧೃತರಾಷ್ಟ್ರನ ತಮ್ಮನ ಮಗ ಹಾಗೂ ವಿದ್ವಾಂಸ, ಪಂಡಿತ, ನುರಿತ, ತಿಳಿದ ಎಂದು ಅರ್ಥವಿದೆ. ಈ ಹಿನ್ನೆಲೆಯಲ್ಲಿ ಬೀದರ ಜಿಲ್ಲೆಯಲ್ಲಿ ವಿಶೇಷವಾಗಿ ಬಸವಕಲ್ಯಾಣ ಕ್ಷೇತ್ರ ವಿದ್ವಾಂಸರ, ಪಂಡಿತರ ಹಾಗೂ ಬುದ್ಧಿವಂತರ ನಾಡು ಎಂದು ಕರೆಯಲಾಗುತ್ತಿದೆ ಎಂದು ಹೇಳಿದರು.
ಆದರೆ ಇಂದಿಗೂ ಸಾಮಾನ್ಯ ಜನರಲ್ಲಿ ಅನುಭ ಮಂಟಪ ಎಂದರೆ ಕೇವಲ ವಚನಗೋಷ್ಠಿಗಳು ನಡೆದಿರಬಹುದು, ಪಂಚಾಯ್ತಿ ಕಟ್ಟೆ ಇದ್ದಿರಬಹುದು, ಅಥವಾ ನ್ಯಾಯಲಯದಂತೆ ಕಾರ್ಯ ನಿರ್ವಹಿಸಿರಬಹುದು ಎಂಬ ಊಹೆಗಳಿವೆ. ಆದರೆ
ಮಾಹಿತಿಗಳ ಪ್ರಕಾರ ಅನುಭವ ಮಂಟಪ ಒಂದು ಸಾರ್ವಜನಿಕ ಸಂಸ್ಥೆಯಾಗಿದ್ದು ಇಲ್ಲಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ಮುಂತಾದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿದ್ದವು ಎಂದರು.
ಇದಕ್ಕೂ ಮುನ್ನ ಅ.ಭಾ.ವೀ. ಮಹಾಸಭಾ ರಾಜ್ಯ ಉಪಾಧ್ಯಕ್ಷ ಶಿವರಾಜ ನರಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷೆ ಶ್ರೀದೇವಿ ಹೂಗಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನುಭವ ಮಂಟಪದ ಸಂಚಾಲಕ ಶ್ರೀ ಶಿವಾನಂದ ಮಹಾಸ್ವಾಮಿಗಳು, ಮಾತೆ ಸುಜ್ಞಾನದೇವಿ, ವೀರಣ್ಣಾ ಪಾಟೀಲ್, ಲಕ್ಷಿàಬಾಯಿ ಪಾಟೀಲ ಸೇರಿದಂತೆ ವಿವಿಧ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶ್ರೀದೇವಿ ಪಾಟೀಲ ಸ್ವಾಗತಿಸಿದರು. ನಾಗೇಶ ಸ್ವಾಮಿ ವಂದಿಸಿದರು. ನಂತರ ವಚನ ಗೋಷ್ಠಿ, ಚಿಂತನ ಮಂಥನ, ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ನಡೆದವು.