ಬೀದರ್: ಬಾಂಬೆ ಟೀಮ್ ನ ಯಾರು ಸಹ ಕಾಂಗ್ರೆಸ್ ಹೋಗುವುದಿಲ್ಲ. ಬಿಜೆಪಿಯಲ್ಲಿ ವಲಸಿಗರು ಮತ್ತು ಮೂಲ ನಾವು ಎಲ್ಲ ಒಂದೇ ಇದ್ದೇವೆ ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಹೇಳಿದರು.
ಜಿಲ್ಲೆಯ ಹಳ್ಳಿಖೇಡದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್ ನಿಂದ ಬಿಜೆಪಿ ಸೇರಿ ನಮ್ಮ ಸರ್ಕಾರದಲ್ಲಿ ಅವರು ಮಂತ್ರಿಯಾಗಿದ್ದಾರೆ. ಅವರಿಗಾಗಿ ನಾವು ಮಂತ್ರಿ ಸ್ಥಾನವನ್ನು ತ್ಯಾಗ ಮಾಡಿದ್ದೇವು. ಅವರಿಂದ ನಮಗೆ ಮತ್ತು ನಮ್ಮಿಂದ ಅವರಿಗೆ ಯಾವುದೇ ತೊಂದರೆಯಾಗಿಲ್ಲ, ಹಿಗಾಗಿ ಅವರು ಕಾಂಗ್ರೆಸ್ಸಿಗೆ ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ. ಇನ್ನೂ ಕಾಂಗ್ರೆಸ್ ನಲ್ಲಿ ಒಡೆದಾಟ ನಡೆಯುತ್ತಿರುವಾಗ ಅಲ್ಲಿಗೆ ಹೋಗಿ ಇವರೇನು ಮಾಡತ್ತಾರೆ ಎಂದರು.
ವರಿಷ್ಠರು ಅಳೆದು ತೂಗಿ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡುತ್ತಿದ್ದಾರೆ. ಶ್ರಾವಣ ಮಾಸ ಮುಗಿಯುವ ಒಳಗಾಗಿ ವಿಪಕ್ಷ ನಾಯಕನ ಆಯ್ಕೆ ಆಗಲಿದೆ. ನನ್ನನ್ನು ವಿರೋಧ ಪಕ್ಷ ನಾಯಕನ ಮಾಡಿದರೂ ಅಷ್ಟೇ, ಇಲ್ಲವಾದರೂ ಓಕೆ. ಪಕ್ಷದ ನಿರ್ಣಯಕ್ಕೆ ಬದ್ಧನಾಗಿರುತ್ತೇನೆ ಎಂದು ಸ್ಪಷ್ಟಪಡಿಸಿದರು.
ಮಾಜಿ ಸಿಎಂಗಳಾದ ಯಡಿಯೂರಪ್ಪ, ಬೊಮ್ಮಾಯಿ ಮತ್ತು ನಾನು ಸಹೋದರಂತೆ ಇದ್ದೇವೆ. ಮಧ್ಯ ನೀವು ಜಗಳ ಹಚ್ಚ ಬೇಡಿ ಎಂದು ಮಾಧ್ಯಮದವರ ವಿರುದ್ಧ ಗರಂ ಆದ ಯತ್ನಾಳ್, ಲೋಕಸಭೆ ಚುನಾವಣೆಗೆ ಮೋದಿ ವಿರುದ್ಧ ಯಾರು ಬೇಕಾದರೂ ನಿಲ್ಲಲಿ ನಮಗೆ ಭಯವಿಲ್ಲ. 2024 ಕ್ಕೆ ಮೋದಿ ಮತ್ತೆ ಪ್ರಧಾನಿಯಾಗುವುದು ನಿಶ್ಚಿತ. ಆಗ ಸೋನಿಯಾ ಗಾಂಧಿ ಹಾಗೂ ರಾಹುಲ್ ಅವರು ಜೈಲಿನಲ್ಲಿ ಇರುತ್ತಾರೆ ಎಂದು ಭವಿಷ್ಯ ನುಡಿದರು.
ಸಿದ್ದರಾಮಯ್ಯ ಕುರ್ಚಿ ಬಿಟ್ಟುಕೊಟ್ಟರೇ ತಾನೇ ಡಿ.ಕೆ ಶಿವಕುಮಾರ್ ಅವರು ಸಿಎಂ ಆಗಲು ಸಾಧ್ಯ. ಆದರೆ, ಐದು ವರ್ಷ ಅವರು ಸಿಎಂ ಗಾದಿ ಬಿಡಲ್ಲ ಎಂದು ಬಸವನಗೌಡ ಯತ್ನಾಳ ಹೇಳಿದರು.
ಇದನ್ನೂ ಓದಿ: Uttarakhand: ಭಾರೀ ಭೂಕುಸಿತ-ರಿಷಿಕೇಶ್-ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿ ಬಂದ್