Advertisement

ನಡು ನೀರಲ್ಲೊಂದು ರಮಣೀಯ ಬಸದಿ

12:31 PM Jun 28, 2018 | |

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ರಸ್ತೆಯಲ್ಲಿ ವರಂಗ ಎಂಬ ಪುಟ್ಟ ಹಳ್ಳಿಯಿದೆ. ಇಲ್ಲಿ ಕಾಲಿಟ್ಟರೆ ಸ್ವರ್ಗ. ಪಶ್ಚಿಮಘಟ್ಟದ ಹಸುರ ಸೆರಗಿನ ಮಧ್ಯೆ ನಳನಳಿಸುತ್ತಿರುವ ಗದ್ದೆ ತೋಟಗಳ ನಡುವಲ್ಲೊಂದು  ವಿಶಾಲ ಕೆರೆ, ಅದರಲ್ಲಿ ಪದ್ಮಾವತಿ ದೇವಿಯ ಬಸದಿ ಇದೆ. ಸುತ್ತಲೂ ಪ್ರಕೃತಿ ಪ್ರಿಯರ ಮನಸ್ಸನ್ನು ಸೊರೆಗೊಳಿಸುವಷ್ಟು ಚೆಲುವು. ಕೆರೆಯಲ್ಲಿ ತುಂಬಿರುವ ನೀರಿನ ಮಧ್ಯೆ ಬೆಳೆದಿರುವ ತಾವರೆಯ ಹೂವುಗಳ ಮೇಲೆಯೇ ಬಸದಿ ನಿಂತಿದೆಯೇನೋ ಎನಿಸುತ್ತದೆ. ಬಸದಿ ಸುಮಾರು ಹದಿನಾಲ್ಕರಿಂದ ಹದಿನೈದು ಎಕರೆ ವಿಸ್ತಾರದಲ್ಲಿದೆ. ಕೆರೆ, ನಕ್ಷತ್ರಾಕೃತಿಯ ಚತುರ್ಮುಖದಲ್ಲಿರುವುದೇ ವಿಶೇಷ.

Advertisement

ದೋಣಿಯೇ ವಾಹನ
ಈ ಬಸದಿಯನ್ನು ತಲುಪಬೇಕೆಂದರೆ ಇರುವ ಏಕೈಕ ವಾಹನ ದೋಣಿ. ಕೆರೆಯಲ್ಲಿ ಹರಡಿರುವ ಕಮಲದ ಹೂವುಗಳನ್ನು ಸೀಳಿಕೊಂಡು ಬಸದಿಯೆಡೆಗೆ ಸಾಗುವುದೇ ರೋಮಾಂಚನ ಅನುಭವ. ದೋಣಿಯಿಂದ ಇಳಿದು ಬಸದಿಯ ಕಟ್ಟೆಯನ್ನು ಹತ್ತಿ ನೋಡಿದರೆ ಸುತ್ತಲೂ ಅಗಾಧ ಜಲರಾಶಿ, ಸಮುದ್ರದ ಮಧ್ಯ ನಿಂತಾಗ ಕಾಡುವ ಏಕಾಂಗಿತನದ ಅನುಭವ, ಇಲ್ಲೂ ಆಗುತ್ತದೆ. ಐದು ಸೆಂಟ್ಸ್‌ ಜಾಗದಲ್ಲಿ ಮಂಟಪದಂತೆ ವಿಶಿಷ್ಟವಾಗಿ ನಿರ್ಮಿಸಿರುವ ಬಸದಿಯು ತನ್ನ ಒಡಲಾಳದಲ್ಲಿ ಹಲವಾರು ವೈಶಿಷ್ಟ್ಯಗಳನ್ನು ತುಂಬಿಕೊಂಡಿದೆ. 

ಜೈನ ಧರ್ಮದ ತೀರ್ಥಂಕರರಾದ ಪಾರ್ಶ್ವನಾಥ, ನೇಮಿನಾಥ, ಶಾಂತಿನಾಥ ಮತ್ತು ಅನಂತನಾಥರ ವಿಗ್ರಹಗಳು ಕರಿಶಿಲೆಯಲ್ಲಿ ಖಡ್ಗಾಸನ ಭಂಗಿಯಲ್ಲಿ ಕೆತ್ತಲ್ಪಟ್ಟಿದೆ. ಈ ಕ್ಷೇತ್ರವು ಹೊಯ್ಸಳ ಮತ್ತು ಚಾಲುಕ್ಯರ ಶಿಲ್ಪಕಲಾ ಶೈಲಿಯ ಸಮ್ಮಿಶ್ರಣವಾಗಿದೆ. ವಿಗ್ರಹಗಳ ಎರಡೂ ಬದಿಗಳಲ್ಲಿ ಯಕ್ಷ- ಯಕ್ಷಿಯರ ಬಿಂಬಗಳಿವೆ. ಪೂರ್ವ ದಿಕ್ಕಿನಲ್ಲಿ ಪಾರ್ಶ್ವನಾಥ ಸ್ವಾಮಿ ಪಕ್ಕದಲ್ಲಿ ಪದ್ಮಾವತಿ ದೇವಿಯ ವಿಗ್ರಹವಿದೆ. ಪದ್ಮಾವತಿ ದೇವಿಯೇ ಇಲ್ಲಿನ ಪ್ರಧಾನ ದೇವರು. ಈ ಬಸದಿಗೆ ನಾಲ್ಕು ದಿಕ್ಕಿನಿಂದಲೂ ಏಕರೂಪವಾದ ಪ್ರವೇಶ ದ್ವಾರವಿದೆ. ಪ್ರತಿಯೊಂದು ದಿಕ್ಕಿಗೂ ಒಂದೇ ಅಳತೆಯ ಮುಖ ಮಂಟಪಗಳಿವೆ. ಪ್ರವೇಶ ದ್ವಾರದ ಹೊರಭಾಗದಲ್ಲಿ ಭಕ್ತರು ಬಸದಿಗೆ ಪ್ರದಕ್ಷಿಣೆ ಹಾಕಲು ಅನುವಾಗುವಂತೆ ಪಥವಿದೆ. ಕೆರೆಯ ಮಧ್ಯದಲ್ಲಿ ನಿರ್ಮಿತವಾದ ಈ ಬಸದಿಯ ಗೋಡೆ, ಮಂಟಪವು ಶಿಲಾಮಯವಾಗಿದ್ದು, ಇದರ ಛಾವಣಿಯನ್ನೂ ಸಂಪೂರ್ಣ ಕಲ್ಲಿನಿಂದಲೇ ನಿರ್ಮಿಸಲಾಗಿದೆ.

ಹನ್ನೆರಡನೇ ಶತಮಾನದ್ದು
ಈ ಬಸದಿ ನಿರ್ಮಾಣವಾಗಿದ್ದು 12ನೇ ಶತಮಾನದಲ್ಲಿ. ಕೆರೆಯನ್ನು ಆಳುಪ ಮನೆತನದ ರಾಣಿ ಜಾಕಲೀದೇವಿ ನಿರ್ಮಿಸಿದ್ದಾಳೆ ಎಂದು ಇತಿಹಾಸ ಹೇಳುತ್ತದೆ. ಇದು ಜೈನರ ಪವಿತ್ರ ಕ್ಷೇತ್ರವಾಗಿದ್ದರೂ ಅನ್ಯಧರ್ಮೀಯರೂ ಪೂಜೆ, ಸೇವೆಯನ್ನು ಸಲ್ಲಿಸುತ್ತಾರೆ. ಅಪಾರ ಜಲರಾಶಿಯ ಮಧ್ಯೆ ವಿರಾಜಮಾನಳಾಗಿರುವ ಪದ್ಮಾವತಿ ದೇವಿಯು ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾಳೆ ಎಂಬ ನಂಬಿಕೆ ಇದೆ. ಮದುವೆಯಾಗಲು ಹರಕೆ ಕಟ್ಟಿಕೊಳ್ಳಲು, ಮದುವೆಯಾದ ಹೊಸ ಜೋಡಿ ಮೊದಲ ಪೂಜೆ ಸಲ್ಲಿಸಲು ಈ ಬಸದಿಗೆ ಬರುತ್ತಾರೆ.

ಇಲ್ಲಿನ ಇನ್ನೊಂದು ವಿಶೇಷ ಎಂದರೆ, ಹರಕೆಯಿಂದ ಸಂಗ್ರಹಿಸುವ ಅಷ್ಟೂ ಅಕ್ಕಿ, ಹುರುಳಿಗಳನ್ನು ಈ ಕೆರೆಯ ಮೀನುಗಳಿಗೆ ಆಹಾರವಾಗಿ ನೀಡುತ್ತಾರೆ. ಅಕ್ಕಿ, ಹುರುಳಿಗಳನ್ನು ಹಾಕಿದಾಗ ಆಹಾರಕ್ಕಾಗಿ ನಡೆಯುವ ಮೀನುಗಳ ಪೈಪೋಟಿಯನ್ನು ನೋಡುವುದೇ ಅಂದ. ಬಸದಿಯು ಪಕ್ಕದಲ್ಲೇ ವರಂಗ ತೀರ್ಥವೆಂಬ ನೀರಿನ ಸೆಲೆ ಇದೆ. ಇದುವೇ ಕೆರೆಯ ನೀರಿನ ಮೂಲ. ಪ್ರತಿದಿನ ಬಸದಿಯಲ್ಲಿ ಬೆಳಗ್ಗೆ 5.30ರಿಂದ ಸಂಜೆಯೊಳಗೆ ಮೂರು ಪೂಜೆಗಳು ನಡೆಯುತ್ತವೆ.

Advertisement

ಜೈನ ವಾಸ್ತುಶಿಲ್ಪದಲ್ಲಿ ಒಟ್ಟು ನಾಲ್ಕು ಪ್ರಕಾರಗಳಿವೆ. ಇವುಗಳಲ್ಲಿ ಏಕಶಿಲಾ ವಿಗ್ರಹಗಳು, ಮಾನಸ್ತಂಭ, ಬಸದಿಗಳು, ಸಮಾಧಿಗಳ ಪೈಕಿ ಮಾನಸ್ತಂಭ, ಬಸದಿಗಳು ಮತ್ತು ಸಮಾಧಿಗಳು ವರಂಗದಲ್ಲೇ  ಇದೆ. ಬಸದಿಯೊಳಗೆ ನಾಲ್ಕು ಅಡಿ ಎತ್ತರದ ಧ್ಯಾನಸ್ಥ ನೇಮಿನಾಥ ಹಾಗೂ ಚಂದ್ರನಾಥ ಸ್ವಾಮಿಯ ವಿಗ್ರಹಗಳಿವೆ.

ಪೂರ್ತಿ ಬಸದಿಯನ್ನು ಕಲ್ಲಿನಿಂದಲೇ ನಿರ್ಮಿಸಿದ್ದು, ಕಪ್ಪು ಕಲ್ಲಿನ ಚಿತ್ತಾರ ಮತ್ತು ಬೆಳಕಿನ ಸಂಯೋಜನೆಯು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಪ್ರವೇಶ ದ್ವಾರದಲ್ಲಿ 45 ಅಡಿ ಎತ್ತರದ ಮಾನಸ್ತಂಭವಿದ್ದು, ಇದು ಕರಾವಳಿಯ ಅತಿ ಪ್ರಾಚೀನ ಮಾನಸ್ತಂಭಗಳ ಪೈಕಿ ಮೂರನೇ ಅತಿದೊಡ್ಡ ಸ್ತಂಭ ಎನ್ನುವ ಹೆಗ್ಗಳಿಕೆ ಪಡೆದಿದೆ. 

ಅರ್ಚಕರೇ ಅಂಬಿಗರು
ಕೆರೆಯ ದಡ ಹಾಗೂ ಬಸದಿಯ ಮಧ್ಯೆ ಸಂಪರ್ಕ ಸೇತುವಾಗಿ ಇರುವ ಏಕೈಕ ಆಸರೆಯೆಂದರೆ ದೋಣಿ ಏನೋ ನಿಜ. ಆದರೆ ದೋಣಿಯನ್ನು ನಡೆಸಲು ಇಲ್ಲಿ ಪ್ರತ್ಯೇಕ ಅಂಬಿಗನಿಲ್ಲ. ಹಾಗಾಗಿ ಬಸದಿಯ ಅರ್ಚಕರೇ ಪ್ರಯಾಣಿಕರಿಗೆ ಅಂಬಿಗನಾಗುತ್ತಾರೆ. ಒಬ್ಬರಿರಲಿ, ನೂರು ಜನ ಬರಲಿ ಬೇಸರಿಸಿಕೊಳ್ಳದೇ ಭಕ್ತರನ್ನು ಬಸದಿಗೆ ಕರೆದುಕೊಂಡು ಬಂದು, ಪೂಜೆ ಮಾಡಿ, ಪ್ರಸಾದ ನೀಡಿ ವಾಪಸ್‌ ಕರೆದುಕೊಂಡು ಬಂದು ಬಿಡುತ್ತಾರೆ. ಮಳೆ, ಗಾಳಿ, ಬಿಸಿಲು ಚಳಿ ಎನ್ನದೇ, ಬೇಸರಿಸದೇ ನಗುಮುಖದೊಂದಿಗೆ ದೋಣಿಯನ್ನು ಮುನ್ನಡೆಸುತ್ತಾರೆ. ಮಧ್ಯಪ್ರದೇಶದಲ್ಲಿ ಬಿಟ್ಟರೆ ಇಂಥ ಎರಡನೇ ಕೆರೆ ಬಸದಿ ಇರುವುದು ಕರ್ನಾಟಕದ ಈ ವರಂಗದಲ್ಲಿ ಮಾತ್ರ. ಈ ಬಸದಿಗೆ ಸೇತುವೆ ನಿರ್ಮಿಸುವ ಪ್ರಸ್ತಾವನೆ ಇತ್ತಾದರೂ, ಮೂಲ ಸೌಂದರ್ಯಕ್ಕೆ ಧಕ್ಕೆಯಾಗುವುದೆಂಬ ಕಾರಣಕ್ಕೆ ಕೈಬಿಟ್ಟಿದ್ದಾರೆ. 

ರೂಟ್‌ ಮ್ಯಾಪ್‌
· ಮಂಗಳೂರಿನಿಂದ ವರಂಗ ಬಸದಿಗೆ ದೂರ 63 ಕಿ.ಮೀ.
· ವರಂಗದವರೆಗೆ ಬಸ್‌ ಸೌಲಭ್ಯವಿದೆ.
· ವರಂಗದಿಂದ ಖಾಸಗಿ ವಾಹನ, ಆಟೋ ಸೌಲಭ್ಯವಿದೆ.
·ನದಿಯನ್ನು ದೋಣಿ ಮೂಲಕವೇ ದಾಟಬೇಕು.
· ಹತ್ತಿರದಲ್ಲಿ ಊಟ, ವಸತಿ ವ್ಯವಸ್ಥೆಯಿಲ್ಲ

 ಸಂತೋಷ್‌ ರಾವ್‌ ಪೆರ್ಮುಡ

Advertisement

Udayavani is now on Telegram. Click here to join our channel and stay updated with the latest news.

Next