Advertisement
ಈ ಘಟನೆಗೆ ಸಂಬಂಧಿಸಿದಂತೆ ಮಂಗಳವಾರ “ಉದಯವಾಣಿ’ಗೆ ಪ್ರತಿಕ್ರಿಯಿಸಿರುವ ಅವರು, ಸುಮಾರು 110 ಕೋಟಿ ರೂ. ವೆಚ್ಚದಲ್ಲಿ ಉಳ್ಳಾಲದಲ್ಲಿ ಕಡಲ್ಕೊರೆತ ತಪ್ಪಿಸಲು ಸಮುದ್ರದೊಳಗೆ ತಡೆಗೋಡೆ ನಿರ್ಮಿಸ ಲಾಗಿದೆ. ಒಂದು ವೇಳೆ ಬಾರ್ಜ್‌ನಿಂದ ತಡೆಗೋಡೆಗೆ ಹಾನಿ ಉಂಟಾಗಿದ್ದರೆ ಅದನ್ನು ಬಾರ್ಜ್ ಮಾಲಕತ್ವದ ಧರ್ತಿ ಕಂಪೆನಿಯೇ ರಿಪೇರಿ ಮಾಡ ಬೇಕಾಗುತ್ತದೆ ಎಂದು ತಿಳಿಸಿದರು. ತಡೆಗೋಡೆ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಬಾರ್ಜ್ ಕಂಪೆನಿಗೆ ಈಗಾಗಲೇ ಹಣ ಪಾವತಿ ಮಾಡಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಬಾರ್ಜ್‌ನಿಂದ ತಡೆಗೋಡೆಗೆ ಹಾನಿಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಸಾಧ್ಯವಿಲ್ಲ. ಸಮುದ್ರದಲ್ಲಿ ಅಲೆಗಳ ಅಬ್ಬರ ಕಡಿಮೆಯಾದ ಮೇಲೆ ಸರ್ವೆ ಮಾಡಲಾಗುವುದು. ಅದನ್ನು ವೀಡಿಯೋ ಚಿತ್ರೀಕರಣ ಮಾಡಿ ಪರಿಶೀಲಿಸಿ ಹಾನಿಯುಂಟಾಗಿದ್ದಲ್ಲಿ ಕಂಪೆನಿ ಯಿಂದಲೇ ನಷ್ಟ-ಹಾನಿಯನ್ನು ವಸೂಲಿ ಮಾಡಲಾಗುವುದು. ಈ ಬಗ್ಗೆ ಚರ್ಚಿಸಲು ಬುಧವಾರ ಕಂಪೆನಿ ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಗೋಪಾಲ ನಾಯ್ಕ ವಿವರಿಸಿದರು.
ಬಾರ್ಜ್‌ನಲ್ಲಿರುವ ಇಂಧನ ಸಮುದ್ರದೊಳಗೆ ಸೋರಿಕೆಯಾಗದಂತೆ ತತ್‌ಕ್ಷಣ ಅದನ್ನು (ಇಂಧನ) ಹೊರತೆಗೆಯುವುದು ಅಗತ್ಯವಾಗಿದೆ. ಆದರೆ ಇಂಧನ ಸಮುದ್ರದೊಳಗೆ ಸೇರದಂತೆ ಕಂಪೆನಿಯೇ ತೆರವು ಮಾಡಬೇಕು. ಇಂಧನ ತೆರವುಗೊಳಿಸಲು ಕರಾವಳಿ ರಕ್ಷಣಾ ತಂಡದವರೊಂದಿಗೆ ಚರ್ಚಿಸಿ ಅವರ ನೆರವು ಪಡೆದುಕೊಳ್ಳಬೇಕಾಗುತ್ತದೆ. ಈ ಬಗ್ಗೆ ಸೂಕ್ತ ವರದಿ ಸಿದ್ಧಪಪಡಿಸಿದ ಅನಂತರ ಎಡಿಬಿ ಅಧಿಕಾರಿಗಳು, ಜಿಲ್ಲಾಡಳಿತ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಜತೆಗೂಡಿ ಬಾರ್ಜ್‌ನ ಇಂಧನ ಹೊರತೆಗೆಯುವ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.