Advertisement

ಬ್ಯಾರಿಕೇಡ್‌ ಸಮಸ್ಯೆ: ಬೇಕಿದೆ ಶಾಶ್ವತ ಪರಿಹಾರ

04:33 PM Dec 13, 2017 | |

ಪುತ್ತೂರು: ಬ್ಯಾರಿಕೇಡ್‌ ಪಾದಚಾರಿಗಳಿಗೆ ಕಂಟಕ ಎನ್ನುವ ವಿಷಯ ಹೊಸದೇನಲ್ಲ. ಆದರೆ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಸ್ವತಃ ಪೊಲೀಸ್‌ ಇಲಾಖೆಯೇ ವಿಫಲವಾಗಿದೆ. ಇದಕ್ಕೊಂದು ತಾಜಾ ನಿದರ್ಶನ ಸಂಪ್ಯ ಗ್ರಾಮಾಂತರ ಠಾಣೆಯ ಮುಂಭಾಗದ ಬ್ಯಾರಿಕೇಡ್‌.

Advertisement

ಅಪಘಾತ ತಡೆಯುವ ಉದ್ದೇಶದಿಂದ ಹಾಕಲಾದ ಬ್ಯಾರಿಕೇಡ್‌ಗಳೇ ಈಗ ಅಪಘಾತಕ್ಕೆ ಮೂಲವಾಗುತ್ತಿವೆ. ಕೆಲವು ವರ್ಷಗಳ ಮೊದಲು ಸಂಪ್ಯ ಠಾಣೆ ಮುಂಭಾಗ ಗೇಟ್‌ ವ್ಯವಸ್ಥೆ ಇತ್ತು. ತುರ್ತು ಸಂದರ್ಭ ಗೇಟನ್ನು ಹಾಕಿ, ವಾಹನಗಳ ತಪಾಸಣೆ ನಡೆಸಲಾಗುತ್ತಿತ್ತು. ಬಳಿಕ ಗೇಟನ್ನು ತೆರವು ಮಾಡಿ, ಬ್ಯಾರಿಕೇಡ್‌ ಹಾಕಲಾಯಿತು. ವಾಹನಗಳ ವೇಗವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಬಹುದೇ ಹೊರತು, ಅಪಘಾತವನ್ನಲ್ಲ ಎನ್ನುವುದು ಇತ್ತೀಚಿನ ದಿನಗಳಲ್ಲಿ ಸ್ಪಷ್ಟವಾಗಿದೆ.

ಹೆದ್ದಾರಿಗಳಲ್ಲಿ ಹಂಪ್ಸ್‌ ಹಾಕಬಾರದು ಎಂಬ ನಿಯಮ ಜಾರಿಗೆ ಬರುತ್ತಿದ್ದಂತೆ ಬ್ಯಾರಿಕೇಡ್‌ಗಳ ಮೊರೆ ಹೋಗಲಾಗಿದೆ. ಬ್ಯಾರಿಕೇಡ್‌ ಅಳವಡಿಕೆಗೂ ಕೆಲ ನಿಯಮಗಳಿವೆ. ಆದರೆ, ಅವುಗಳನ್ನು ಪಾಲಿಸದೆ ಏಕಾಏಕಿ ತಂದು ನಿಲ್ಲಿಸುತ್ತಿರುವ ಬಗ್ಗೆ ಪ್ರಶ್ನೆಗಳು ಮೂಡಿವೆ.

ವಾಸ್ತವದಲ್ಲಿ ಬ್ಯಾರಿಕೇಡ್‌ಗಳು ಸಮಸ್ಯೆಯಲ್ಲ. ಅವುಗಳನ್ನು ಅವೈಜ್ಞಾನಿಕ ರೀತಿಯಲ್ಲಿ ಇಡುವುದರಿಂದ ಸಮಸ್ಯೆ ಸೃಷ್ಟಿ ಯಾಗಿದೆ. ಸಾಮಾನ್ಯವಾಗಿ ಬ್ಯಾರಿಕೇಡ್‌ಗಳು ರಸ್ತೆಯಲ್ಲಿ ಇರಬೇಕು. ಫುಟ್‌ಪಾತ್‌ನಲ್ಲಿ ಇಡುವುದಾದರೆ ಪಾದಚಾರಿಗಳಿಗೆ ನಡೆದಾಡಲು ಸಾಕಷ್ಟು ಜಾಗ ಇರಬೇಕು. ಆದರೆ ಕೆಲವು ಕಡೆ ಈ ಎಲ್ಲ ನಿಯಮವನ್ನು ಗಾಳಿಗೆ ತೂರಲಾಗಿದೆ. ಬ್ಯಾರಿಕೇಡ್‌ಗಳನ್ನು ಸಂಪೂರ್ಣವಾಗಿ ಫುಟ್‌ಪಾತ್‌ಗೆ ಅಡ್ಡವಾಗಿ ಇಡಲಾಗಿದೆ. ಇದರಿಂದ ಪಾದ
ಚಾರಿಗಳಿಗೆ ನಡೆದಾಡಲು ಫುಟ್‌ಪಾತ್‌ ಇಲ್ಲವಾಗಿದೆ. ರಸ್ತೆಯೇ ಫುಟ್‌ಪಾತ್‌ ಆಗಿ ಪರಿಣಮಿಸಿದೆ.

ಎಸ್ಪಿಗೆ ಅಧಿಕಾರ
ಭಾರತದ ಮೋಟಾರ್‌ ವಾಹನ ಅಧಿನಿಯಮ ಹಾಗೂ ಕರ್ನಾಟಕ ಪೊಲೀಸ್‌ ಅಧಿನಿಯಮದಂತೆ ಜಿಲ್ಲಾ ವ್ಯಾಪ್ತಿ ಯಲ್ಲಿ ಬ್ಯಾರಿಕೇಡ್‌ ಅಳವಡಿಸಲು ಆದೇಶ ಹೊರಡಿಸುವ ಅಧಿಕಾರ ಪೊಲೀಸ್‌ ವರಿಷ್ಠಾಧಿಕಾರಿಗಿದೆ. ಇವರು ಸ್ಥಳೀಯ ಠಾಣಾಧಿಕಾರಿಗಳಿಗೆ ಈ ಅಧಿಕಾರವನ್ನು ಹಂಚಿ, ಬ್ಯಾರಿಕೇಡ್‌ ಅಳವಡಿಸುತ್ತಾರೆ. ಹಾಗೆಂದು ಏಕಾಏಕಿ ಬ್ಯಾರಿಕೇಡ್‌ ಹಾಕುವಂತಿಲ್ಲ. ಇದಕ್ಕೆ ಮೊದಲು ಅಪಘಾತದ ಸಂಖ್ಯೆ, ಒಳರಸ್ತೆ, ಜಂಕ್ಷನ್‌, ಬಸ್‌ ಹತ್ತುವ ಜನರ ಪ್ರಮಾಣ ಮೊದಲಾದವುಗಳ ಅಧ್ಯಯನ ಆಗ ಬೇಕು. ಇದರ ವರದಿ ಆಧರಿಸಿ ಬ್ಯಾರಿ ಕೇಡ್‌ ಹಾಕಲಾಗುತ್ತದೆ. ಇದೀಗ ಈ ಅಧ್ಯಯನದ ಮೇಲೆಯೇ ಸಣ್ಣ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡಿದೆ.

Advertisement

ಬೆಳೆದ ಪೊದೆ
ಸಂಪ್ಯ ಠಾಣೆ ಮುಂಭಾಗದ ಬ್ಯಾರಿಕೇಡ್‌ ತೀರಾ ಅವೈಜ್ಞಾನಿಕವಾಗಿದೆ. ರಸ್ತೆಯ ಅರ್ಧ ಭಾಗವನ್ನು ಮತ್ತು ಕಾಲುದಾರಿಯನ್ನು ಬ್ಯಾರಿಕೇಡ್‌ ಆಕ್ರಮಿಸಿಕೊಂಡಿದೆ. ನಡುರಸ್ತೆಯಲ್ಲೇ ವಾಹನಗಳು ಮತ್ತು ಪಾದಚಾರಿಗಳು
ಸಾಗಬೇಕು. ಕಾಲುದಾರಿಯ ಜಾಗವನ್ನು ಸಂಪೂರ್ಣವಾಗಿ ಬ್ಯಾರಿಕೇಡ್‌ ಹಾಗೂ ಪೊದೆ ಆಕ್ರಮಿಸಿಕೊಂಡಿದ್ದು, ಈ ರಸ್ತೆಯಲ್ಲಿ ಸಂಚಾರಿಸುವ ವಾಹನ ಸವಾರರಿಗೆ ದಿನನಿತ್ಯ ಸಮಸ್ಯೆ ಯಾಗಿದೆ. ಠಾಣೆಯ ಮುಂಭಾಗವೇ ಇಂತಹ ಪರಿಸ್ಥಿತಿ ಇದ್ದು, ಎರಡು ಅಪಘಾತ ನಡೆದ ಬಳಿಕವೂ ಯಾವುದೇ ರೀತಿಯ ಕ್ರಮಗಳನ್ನು ಪೊಲೀಸರು ತೆಗೆದುಕೊಂಡಿಲ್ಲ, ಇದ ರಿಂದಾಗಿ ಅನಾಹುತಗಳಿಗೆ ದಾರಿ ಮಾಡಿ ದಂತೆಯಾಗುತ್ತದೆ, ಇನ್ನಾದರೂ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ಷೇಪಿಸುತ್ತಾರೆ.

ರಸ್ತೆಯೇ ಕಿರಿದು
ವಾಹನ ಸಂಚಾರಕ್ಕೆ ಅಗತ್ಯವಾದಷ್ಟು ರಸ್ತೆಗಳು ಇವೆ. ಆದರೆ ಬ್ಯಾರಿಕೇಡ್‌ ಗಳನ್ನು ಇಟ್ಟಾಗ ರಸ್ತೆ ಇನ್ನಷ್ಟು ಕಿರಿದಾಗುತ್ತದೆ. ಇರುವ ರಸ್ತೆಯನ್ನು ಬ್ಯಾರಿಕೇಡ್‌ಗಳು ನುಂಗುತ್ತವೆ. ಇಂತಹ ಸಂದರ್ಭ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಘನ ವಾಹನಗಳು ಎದುರಿನಿಂದ ಬರುವ ವಾಹನಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತವೆ. ಇಂತಹ ಸಂದರ್ಭ ಲಘು ವಾಹನಗಳ ಸವಾರರು ಭಯ ಬೀಳುತ್ತಾರೆ. ಇಷ್ಟೇ ಸಾಕು ಅಪಘಾತ ಸಂಭವಿಸಲು.

ಸಲಹೆ ಸಿಕ್ಕರೆ
ಬ್ಯಾರಿಕೇಡ್‌ಗಳ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಸಾಧ್ಯವಾಗಿಲ್ಲ. ಹಾಗೆಂದು ಬ್ಯಾರಿಕೇಡ್‌ ಹಾಕದೇ ಬಿಡುವಂತೆಯೂ ಇಲ್ಲ. ಶಾಶ್ವತ ಪರಿಹಾರದ ಸಲಹೆ ಸಿಕ್ಕಿದರೆ, ಅದನ್ನು ಕಾರ್ಯಗತ ಗೊಳಿಸಲಾಗುವುದು. ವಾಹನ ಸವಾರರ ಜತೆಗೆ ಪಾದಚಾರಿಗಳ ಕ್ಷೇಮವೂ ತುಂಬಾ ಅಗತ್ಯ.
– ಸುಧೀರ್‌ ಕುಮಾರ್‌ ರೆಡ್ಡಿ, ಎಸ್ಪಿ, ದ.ಕ.

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next