Advertisement
ನೇರವಾದ ಹೆದ್ದಾರಿಯ ನಿರ್ಮಾಣ, ಏರು- ತಗ್ಗುಗಳನ್ನು ನಿವಾರಿಸುವ ಪ್ರಯತ್ನದಲ್ಲಿ ಹೆದ್ದಾರಿ ಅಂಚಿನ ನಿವಾಸಿಗಳ ಹಿತವನ್ನು ನೋಡದೆ ವಿನ್ಯಾಸ ಮಾಡಲಾಗಿದೆ. ಇದರ ಪರಿಣಾಮ ಎತ್ತರದಲ್ಲಿರುವ ಮತ್ತು ತಗ್ಗಿನಲ್ಲಿರುವ ಮನೆಗಳು ಸಂಪರ್ಕದ ದಾರಿಯನ್ನೇ ಕಳೆದುಕೊಂಡಿವೆ. ಎತ್ತರದಲ್ಲಿರುವ ಮನೆಗಳ ಬುಡಕ್ಕೇ ಜೆಸಿಬಿ ನುಗ್ಗಿದೆ. ಹೀಗಾಗಿ ಕೆಲವು ಮನೆಗಳ ಪಂಚಾಂಗವೇ ಅಪಾಯದಲ್ಲಿದೆ. ತಗ್ಗಿನಲ್ಲಿರುವ ಮನೆಗಳ ಅಂಗಳಕ್ಕೆ ಮಣ್ಣು ನುಗ್ಗಿ ಈಗಲೂ ಅಂಗಳದಲ್ಲಿ ಮಣ್ಣಿನ ರಾಶಿ ಕಾಣಬಹುದಾಗಿದೆ. ಸಾಕಷ್ಟು ಕೃಷಿ ತೋಟಗಳು, ಗದ್ದೆಗಳಲ್ಲಿ ಮಣ್ಣು, ಕೆಸರು ತುಂಬಿದ್ದು, ಬೆಳೆ ನಾಶದ ಜತೆಗೆ ಮತ್ತೆ ಕೃಷಿ ಮಾಡಲಾಗದ ಸ್ಥಿತಿ ಇದೆ.
ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಮಾಣಿ ಜಂಕ್ಷನ್‌ನಲ್ಲಿ ರಾ.ಹೆ.75ರಿಂದ ಮತ್ತೂಂದು ಹೆದ್ದಾರಿ ಕವಲೊಡೆಯುತ್ತಿದ್ದು, ಹೀಗಾಗಿ ಈ ಭಾಗದಲ್ಲಿ ಹೆಚ್ಚಿನ ವಾಹನಗಳು ಡೈವರ್ಶನ್ ತೆಗೆದುಕೊಳ್ಳುತ್ತಿದೆ. ಹೀಗಾಗಿ ಬಿ.ಸಿ.ರೋಡು ಭಾಗದಿಂದ ಉಪ್ಪಿನಂಗಡಿಗೆ ಹೋಗುವ ವಾಹನಗಳು, ಪುತ್ತೂರು ಕಡೆಗೆ ಸಾಗುವ ವಾಹನಗಳು, ಎರಡೂ ಭಾಗದಿಂದಲೂ ಬಿ.ಸಿ.ರೋಡು ಕಡೆಗೆ ಆಗಮಿಸುವ ವಾಹನಗಳು ಹೀಗೆ ಎಲ್ಲವೂ ಗೊಂದಲಮಯವಾಗಿದೆ.
Related Articles
Advertisement
ಮಾಣಿ ಜಂಕ್ಷನ್‌ನಲ್ಲಿ ಅಂಡರ್‌ಪಾಸ್ ನಿರ್ಮಿಸಿ ಹೆದ್ದಾರಿಯು ನೇರವಾಗಿ ಮೇಲಿಂದಲೇ ಸಾಗಲಿದ್ದು, ಎರಡೂ ಬದಿಯಲ್ಲೂ ಸರ್ವೀಸ್ ರಸ್ತೆ ನಿರ್ಮಾಣಗೊಳ್ಳಲಿದೆ. ಪ್ರಸ್ತುತ ಒಂದೇ ಬದಿಯಲ್ಲಿ ವಾಹನ ಬಿಡಲಾಗಿದ್ದು, ಮತ್ತೂಂದು ಬದಿಯ ಸರ್ವೀಸ್ ರಸ್ತೆ ನಿರ್ಮಾಣಗೊಂಡಿಲ್ಲ. ಇದು ಬಲುದೊಡ್ಡ ಸಮಸ್ಯೆಯಾಗಿದ್ದು, ಹೆಚ್ಚಿನ ವಾಹನದೊತ್ತಡ ಉಂಟಾದಾಗ ಸರತಿಯಲ್ಲಿ ನಿಲ್ಲಬೇಕಿದೆ. ಮತ್ತೂಂದೆಡೆ ಡಾಮಾರು ಹಾಕಿದರೂ ಒಂದೇ ದಿನದಲ್ಲಿ ಎದ್ದು ಹೋಗಿ ಹೊಂಡಗಳು ಸೃಷ್ಟಿಯಾಗುತ್ತಿದೆ. ಮಳೆ ನೀರು ಹರಿದು ಹೋಗುವುದಕ್ಕೆ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲೇ ನೀರು ನಿಲ್ಲುವ ಸಮಸ್ಯೆಯೂ ಇದೆ.
ಶಬ್ದಕ್ಕೆ ಮನೆಯಲ್ಲೇ ನಿಲ್ಲಲಾಗದ ಸ್ಥಿತಿ!ಸಾಮಾನ್ಯವಾಗಿ ಯಾವುದೇ ಹೆದ್ದಾರಿಯ ಬದಿ ಮನೆಗಳಿದ್ದರೆ ಹಗಲು-ರಾತ್ರಿ ವಾಹನ ಸದ್ದು ಸಾಮಾನ್ಯ. ಆದರೆ ಇಲ್ಲಿ ಕೇಳುವ ಶಬ್ದ ಎದೆಯನ್ನೇ ನಡುಗಿಸಿ ಬಿಡುತ್ತಿದೆ. ಹೆದ್ದಾರಿಯು ಸಂಪೂರ್ಣ ಹೊಂಡಗಳಿಂದ ತುಂಬಿರುವುದರಿಂದ ಬೃಹತ್ ಗಾತ್ರದ ಕಂಟೈನರ್‌ಗಳು ಸಾಗುವ ವೇಳೆ ಬಾಂಬ್ ಬಿದ್ದಷ್ಟೇ ದೊಡ್ಡ ಶಬ್ದ ಕೇಳುತ್ತಿದೆ. ಘನ ವಾಹನಗಳು ರಾತ್ರಿಯಲ್ಲೇ ಹೆಚ್ಚಾಗಿ ಸಾಗುವುದರಿಂದ ಮನೆಯಲ್ಲಿ ನಿದ್ದೆ ಮಾಡುವುದಕ್ಕೂ ಆಗುತ್ತಿಲ್ಲ ಎಂಬುದು ಹೆದ್ದಾರಿಯಂಚಿನ ನಿವಾಸಿಗಳ ಅಳಲಾಗಿದೆ. ಕುಸಿಯುವ ಭೀತಿಯಲ್ಲಿ ಮನೆಗಳು
ಹೆದ್ದಾರಿಯನ್ನು ತಗ್ಗಿಸುವ ಉದ್ದೇಶದಿಂದ ಧರೆಗಳನ್ನು ನೇರವಾಗಿ ಅಗೆದು ಹಾಕಲಾಗಿದ್ದು, ಸಾಕಷ್ಟು ಮನೆಗಳು ಕುಸಿಯುವ ಭೀತಿಯಲ್ಲಿವೆ. ಒಂದಷ್ಟು ಕಡೆಗಳಲ್ಲಿ ಕಾಂಕ್ರೀಟ್ ತಡೆಗೋಡೆ ನಿರ್ಮಾಣಗೊಂಡಿದ್ದರೂ, ಅವುಗಳನ್ನು ಮೀರಿ ಗುಡ್ಡ ಕುಸಿತ ಉಂಟಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ಕುಸಿತ ಉಂಟಾದರೆ ಸಾಕಷ್ಟು ಮನೆಗಳು ಕುಸಿದು ಬೀಳುವ ಅಪಾಯವಿದೆ. ಹೆಚ್ಚುವರಿ ಭೂಸ್ವಾಧೀನ ನಡೆಸಿ ಪರಿಹಾರ ನೀಡಿ ಅಪಾಯಕಾರಿ ಮನೆ, ಗುಡ್ಡಗಳನ್ನು ತೆರವು ಮಾಡಿದರೆ ಪರಿಹಾರ ಸಿಗಬಹುದಾಗಿದ್ದು, ಹೆದ್ದಾರಿ ಪ್ರಾಧಿಕಾರವು ಆ ಕಾರ್ಯವನ್ನೂ ಮಾಡುತ್ತಿಲ್ಲ. ಡಿಸಿ ಭೇಟಿ ನೀಡಿದರೂ ಪ್ರಯೋಜನವಿಲ್ಲ
ಪೆರ್ನೆ ಸಮೀಪದ ದೋರ್ಮೆಯಲ್ಲಿ ಚಂದ್ರಾವತಿ ಹಾಗೂ ಧರ್ಣಪ್ಪ ನಾಯ್ಕ ಅವರ ಸುಮಾರು 2 ಎಕರೆ ವಿಸ್ತೀರ್ಣದ ಅಡಿಕೆ ತೋಟದಲ್ಲಿ ಮಳೆಗಾಲ ಆರಂಭದಿಂದಲೂ ಈಗಿನವರೆಗೆ ನೀರು ನಿಲ್ಲುತ್ತಿದ್ದು, ಹೆಚ್ಚಿನ ಅಡಿಕೆ ಮರಗಳು ಈಗಾಗಲೇ ಸತ್ತು ಹೋಗಿವೆ. ಸಾಕಷ್ಟು ದೂರಿನ ಬಳಿಕ ತೋಟದ ನೀರು ಹರಿದು ಹೋಗುವುದಕ್ಕೆ ಪೈಪು ಹಾಕಿದರೂ ನೀರು ಹರಿದು ಹೋಗುತ್ತಿಲ್ಲ. ಕಳೆದ ಸುಮಾರು 2 ತಿಂಗಳ ಹಿಂದೆ ಸ್ಥಳಕ್ಕೆ ದ.ಕ.ಜಿಲ್ಲಾಧಿಕಾರಿ ಮುಲ್ಲೆ$ç ಮುಗಿಲನ್ ಅವರು ಭೇಟಿ ನೀಡಿ ಪರಿಶೀಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. -ಕಿರಣ್ ಸರಪಾಡಿ