ಬಂಟ್ವಾಳ: ಶಾಂತಿಭಂಗಕ್ಕೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಮುಂಜಾನೆ ಬಂಟ್ವಾಳದ ಹಲವೆಡೆ ದಾಳಿ ನಡೆಸಿದ ಮೂವರನ್ನು ಬಂಧಿಸಿ ತಹಶೀಲ್ದಾರ್ ಬಳಿ ಹಾಜರು ಪಡಿಸಿದ್ದಾರೆ.
ಪಿಎಫ್ ಐ ಜಿಲ್ಲಾಧ್ಯಕ್ಷ ಇಜಾಜ್ ಅಹಮದ್ ಸೇರಿದಂತೆ ಫಿರೋಜ್ ಖಾನ್, ರಾಝಿಕ್ ಬಂಧಿತರು. ಬಂಧಿತರನ್ನು ಏಳು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಬಂಟ್ವಾಳ ಬಿ.ಸಿ.ರೋಡ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಈಗಾಗಲೇ ಕೆಲ ದಿನಗಳಿಂದ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪಿಎಫ್ ಐ ಕಾರ್ಯಕರ್ತರ ಬಂಧನ ಹಾಗೂ ವಿಚಾರಣೆ ನಡೆಯುತ್ತಿದ್ದು, ಇದರ ಒಂದು ಭಾಗವಾಗಿ ಈ ಕಾರ್ಯಾಚರಣೆ ವರಿಷ್ಠ ಪೊಲೀಸ್ ಅಧಿಕಾರಿಗಳ ಸೂಚನೆಯಂತೆ ಬಂಟ್ವಾಳ ನಗರ ಮತ್ತು ಗ್ರಾಮಾಂತರ ಪೊಲೀಸರು ಕೈಗೊಂಡಿದ್ದಾರೆ.
ಬಂಟ್ವಾಳ ಸುತ್ತಮುತ್ತಲಿರುವ ಪಿಎಫ್ಐ ಕಾರ್ಯಕರ್ತರ ಮನೆಗಳಿಗೆ ತೆರಳಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದು ಅವರನ್ನು ಪ್ರತಿಬಂಧಕ ಕಾಯ್ದೆಯಡಿ ಗರಿಷ್ಠ ಅವಧಿಯ ಮುಚ್ಚಳಿಕೆಗಾಗಿ ಕಾರ್ಯನಿರ್ವಾಹಕ ನ್ಯಾಯಾಧೀಶರೂ ಆಗಿರುವ ಬಂಟ್ವಾಳ ತಹಶೀಲ್ದಾರ್ ಡಾ. ಸ್ಮಿತಾ ರಾಮು ಅವರ ಮುಂದೆ ಹಾಜರುಪಡಿಸಿದ್ದಾರೆ.